

ಕಳಸ: ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಬೆಳೆಗಾರರು ಹಾಗೂ ವಿವಿಧ ರಾಜಕೀಯ ಪಕ್ಷಗಳು ತಾಲೂಕಿನ ಆರು ಗ್ರಾಪಂ ವ್ಯಾಪ್ತಿಯಲ್ಲಿ ಚುನಾವಣಾ ಬಹಿಷ್ಕಾರಕ್ಕೆ ಬೆಂಬಲ ಸೂಚಿಸಲು ಭಾನುವಾರ ನಿರ್ಧರಿಸಿವೆ.
ಕಳಸ ರೋಟರಿ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕಾಫಿ ಬೆಳೆಗಾರರ ಹಾಗೂ ವಿವಿಧ ರಾಜಕೀಯ ಪಕ್ಷಗಳ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಯಿತು.
ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಡಾ. ಮೋಹನ್ಕುಮಾರ್ ಮಾತನಾಡಿ, ಕಸ್ತೂರಿ ರಂಗನ್ ವರದಿ ಯಥಾವತ್ ಜಾರಿಯಾದರೆ ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ಕೇರಳ ರಾಜ್ಯಕ್ಕೆ ಕಸ್ತೂರಿ ರಂಗನ್ ವರದಿಯಿಂದ ನೀಡಲಾಗಿರುವ ವಿನಾಯಿತಿಯನ್ನು ನಮಗೂ ನೀಡಬೇಕು. ಈ ನಿಟ್ಟಿನಲ್ಲಿ ನಾವು ಮುಂದಾಲೋಚನೆ ಮಾಡಿ ಜನರಲ್ಲಿ ಜಾಗೃತಿ ಮೂಡಿಸಬೇಕು. ಅದಕ್ಕಾಗಿ ಎಲ್ಲ ಗ್ರಾಪಂಗಳಲ್ಲಿ ಚುನಾವಣಾ ಬಹಿಷ್ಕಾರ ಮಾಡಿ ಡಿ.15ರಂದು ನಡೆಯುವ ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಕೆಜಿಎಫ್ ಪ್ರಧಾನ ಕಾರ್ಯದರ್ಶಿ ಡಾ. ಬಾಲಕೃಷ್ಣ ಬಾಳೂರು ಮಾತನಾಡಿ, ಜನರಿಗೆ, ಜನಪ್ರತಿನಿಧಿಗಳಿಗೆ ಚುನಾವಣೆಯೇ ಪ್ರತಿಷ್ಠೆಯಾದರೆ ಚುನಾವಣೆಗೆ ಹೋಗಿ. ನೀವು ಬದುಕಬೇಕೆನಿಸಿದರೆ ಚುನಾವಣಾ ಬಹಿಷ್ಕಾರ ಮಾಡಿ ಹೋರಾಟಕ್ಕೆ ಕೈಜೋಡಿಸಿ ಎಂದು ಹೇಳಿದರು.
ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಪ್ರತಿಭಟನೆಗೆ ಬೆಂಬಲ ಸೂಚಿಸಬಲ್ಲೆ. ಚುನಾವಣಾ ಬಹಿಷ್ಕಾರದ ಬಗ್ಗೆ ಏನೂ ಮಾತನಾಡುವುದಿಲ್ಲ ಎಂದು ಹೇಳಿದರು.
ಚುನಾವಣೆ ಬಹಿಷ್ಕರಿಸಲು ನಾಮಪತ್ರ ಸಲ್ಲಿಕೆಗೂ ಮುಂಚಿತವಾಗಿ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಈಗಾಗಲೇ ಎಲ್ಲ ಪಕ್ಷದ ಬೆಂಬಲಿಗರು ನಾಮಪತ್ರ ಸಲ್ಲಿಸಿದ್ದಾರೆ. ಒಂದು ದಿನದಲ್ಲಿ ಅವರ ಮನವೊಲಿಸಿ ನಾಮಪತ್ರ ವಾಪಸ್ ತೆಗಿಸುವುದು ಕಷ್ಟ ಸಾಧ್ಯ. ಆದರೂ ತಾಲೂಕಿನ ಆರು ಗ್ರಾಪಂನಲ್ಲಿ ನಮ್ಮ ಪಕ್ಷದ ಬೆಂಬಲಿತರ ನಾಮಪತ್ರಗಳನ್ನು ವಾಪಸ್ ತೆಗಿಸಲು ಪ್ರಯತ್ನ ಪಡುತ್ತೇವೆ ಎಂದು ಜೆಡಿಎಸ್ ಮುಖಂಡ ಜಿ.ಕೆ.ಮಂಜಪ್ಪಯ್ಯ, ಬಿಜೆಪಿ ಮುಖಂಡರಾದ ನಾಗಭೂಷಣ್, ಎಂ.ಎ.ಶೇಷಗಿರಿ ಹೇಳಿದರು.
ಸಭೆಯಲ್ಲಿ ಕಾಂಗ್ರೆಸ್ ಮತ್ತು ಸಿಪಿಐ ಮುಖಂಡರು ಭಾಗವಹಿಸಿರಲಿಲ್ಲ. ಬಿಜೆಪಿ ಮೂಡಿಗೆರೆ ತಾಲೂಕು ಅಧ್ಯಕ್ಷ ಜೆ.ಎಸ್.ರಘು, ಜೆಡಿಎಸ್ ಹೋಬಳಿ ಅಧ್ಯಕ್ಷ ರತ್ನಾಕರ್, ಮುಖಂಡರಾದ ನರೇಂದ್ರ, ಕೆ.ಆರ್.ಭಾಸ್ಕರ್, ನಾಗೇಶ್, ಆಶಾಲತಾ ಜೈನ್, ಎನ್.ಎಂ.ಹರ್ಷ ಇತರರು ಇದ್ದರು.