

ಎನ್.ಆರ್.ಪುರ: ಕಸ್ತೂರಿ ರಂಗನ್ ವರದಿ ಜಾರಿಗೆ ಸಂಬಂಧಿಸಿ ಪರಿಸರ ಸೂಕ್ಷ್ಮವಲಯ ಕರಡು ಅಧಿಸೂಚನೆ -6 ಹೊರಡಿಸಿದ್ದು, ಆಕ್ಷೇಪಣೆ ಸಲ್ಲಿಕೆಗೆ 25 ದಿನಗಳ ಕಾಲಾವಕಾಶವಿದೆ ಎಂದು ಮಲೆನಾಡು ನಾಗರಿಕ ರೈತ ಹಿತ ರಕ್ಷಣಾ ಸಮಿತಿ ಶೃಂಗೇರಿ ಕ್ಷೇತ್ರ ಅಧ್ಯಕ್ಷ ಎಂ.ಎನ್.ನಾಗೇಶ್ ಹೇಳಿದರು.
ಆ.17ರ ಕೊಪ್ಪದ ಬಂದ್ ಹಾಗೂ ಬೃಹತ್ ಪ್ರತಿಭಟನೆ ಸಂದರ್ಭದಲ್ಲಿ ನಿಗದಿತ ದಿನಾಂಕದೊಳಗೆ ಗ್ರಾಮಗಳಿಂದ ಆಕ್ಷೇಪಣೆ ಸಲ್ಲಿಸಲು ಹಿತರಕ್ಷಣಾ ಸಮಿತಿಯಿಂದ ಅರ್ಜಿ ತಯಾರಿಸಿ ಕಳೆದ ಎರಡು ದಿನಗಳಿಂದ ಶೃಂಗೇರಿ ಕ್ಷೇತ್ರದ 3 ತಾಲೂಕುಗಳ ಎಲ್ಲಾ ಗ್ರಾಪಂ ಅಧ್ಯಕ್ಷರಿಗೆ ಹಾಗೂ ಖಾಂಡ್ಯ ಹೋಬಳಿಯ ಗ್ರಾಪಂಗಳಿಗೆ ಫಾರ್ಮ್ ನೀಡಿ ಮಾಹಿತಿ ನೀಡಲಾಗಿದೆ. ನಮ್ಮ ಸಮಿತಿಯ ಕೆಲವು ಪದಾಧಿಕಾರಿಗಳ ವಿಶೇಷ ಕಾಳಜಿಯಿಂದ ಕೆಲವು ಗ್ರಾಪಂಗಳಿಗೆ ವಾರದ ಮುಂಚೆಯೇ ಪತ್ರದ ಮೂಲಕ ತಿಳಿಸಿ ಗ್ರಾಮ ಸಭೆಯೂ ನಡೆಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಉಳಿದ ಎಲ್ಲ ಗ್ರಾಪಂಗಳಿಗೆ ತುರ್ತಾಗಿ ವಿಶೇಷ ಗ್ರಾಮ ಸಭೆ ಕರೆದು ಆಕ್ಷೇಪಣೆ ಸಲ್ಲಿಸಲು ತಿಳಿಸಲಾಗಿದೆ. ಗ್ರಾಮಸ್ಥರಿಂದಲೂ ವೈಯಕ್ತಿಕವಾಗಿ ಆಕ್ಷೇಪಣೆ ಸಲ್ಲಿಸಲು ಅರ್ಜಿ ತಯಾರಿಸಿದ್ದು, ಸಮಿತಿ ಸದಸ್ಯರು ಹಾಗೂ ಸ್ಥಳೀಯ ಗ್ರಾಪಂ ಸದಸ್ಯರ ಸಹಕಾರದೊಂದಿಗೆ ಮನೆ ಮನೆಯಿಂದ ಆಕ್ಷೇಪಣೆ ಅರ್ಜಿ ಸಲ್ಲಿಸುವ ಕಾರ್ಯ ಮಾಡಲಾಗುತ್ತಿದೆ. ಇದು ಮಲೆನಾಡಿಗರ ಅಳಿವು ಉಳಿವಿನ ಪ್ರಶ್ನೆಯಾಗಿದ್ದು ಭವಿಷ್ಯದ ಆತಂಕವನ್ನು ದೂರ ಮಾಡಲು ನಾವು ಈಗ ಎಚ್ಚೆತ್ತುಕೊಳ್ಳದಿದ್ದರೆ ಈ ಕೊನೆ ಕರೆಗಂಟೆ ಬಗ್ಗೆ ನಾವು ಭವಿಷ್ಯದಲ್ಲಿ ಪಶ್ಚಾತ್ತಾಪ ಪಡುವ ಪರಿಸ್ಥಿತಿ ಬರುತ್ತದೆ ಎಂದು ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಅವಶ್ಯಕತೆ ಇದ್ದಲ್ಲಿ ನಿಮ್ಮ ಗ್ರಾಮಗಳಿಗೆ ಭೇಟಿ ನೀಡಿ ಸಹ ಮಾಹಿತಿ ನೀಡಲಾಗುವುದು. ಹಾಗೆಯೇ ಮುಂಬರುವ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಎಲ್ಲ ಗಣೇಶ ಸಮಿತಿ ಅವರನ್ನು ಸಂಪರ್ಕಿಸಿ, ಸಾರ್ವಜನಿಕ ಕಾರ್ಯಕ್ರಮದ ವೇಳೆಯಲ್ಲಿ ಜನಜಾಗೃತಿ ಮೂಡಿಸಲಾಗುವುದು
ಕಸ್ತೂರಿ ರಂಗನ್ ವರದಿ ವ್ಯಾಪ್ತಿಗೆ ಒಳಪಡುವ ಎಲ್ಲ ಗ್ರಾಪಂ ಅಧ್ಯಕ್ಷರು ಮತ್ತು ಸದಸ್ಯರು ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ವಿಶೇಷ ಗ್ರಾಮಸಭೆ ಮೂಲಕ ಆಕ್ಷೇಪಣೆ ಸಲ್ಲಿಸಬೇಕು. ಇದು ನಮ್ಮ ರೈತರ ಭವಿಷ್ಯದ ಪ್ರಶ್ನೆ ಯಾಗಿದೆ. ಅವರಿಗೆ ಸರಿಯಾದ ಮಾರ್ಗದರ್ಶನ ನೀಡಿ, ಅನ್ಯಾಯವಾಗದಂತೆ ಆಗದಂತೆ ನೋಡಿಕೊಳ್ಳುವುದು ಜನಪ್ರತಿನಿಧಿಗಳಾದ ನಿಮ್ಮೆಲ್ಲರ ಹೊಣೆ ಎಂದು ತಿಳಿಸಿದ್ದಾರೆ.