

ಮಂಡ್ಯ: ತ.ನಾಡಿಗೆ ಹರಿಸುತ್ತಿರುವ ನೀರು ಸ್ಥಗಿತಗೊಳಿಸಬೇಕು ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ತೀರ್ಪು ರಾಜ್ಯದ ಪರವಾಗಿ ಬರಲೆಂದು ಪ್ರಾರ್ಥಿಸಿ ನಗರದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಉರುಳು ಸೇವೆ ಮಾಡಿದರು.
ವೇದಿಕೆ ರಾಜ್ಯಾಧ್ಯಕ್ಷ ಕೆರೆ ಚಳವಳಿ ರಮೇಶ್‌ಗೌಡ ನೇತೃತ್ವದಲ್ಲಿ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾವಣೆಗೊಂಡ ಕಾರ್ಯಕರ್ತರು, ಕಾವೇರಿ ನಮ್ಮದು, ರಕ್ತ ಕೊಟ್ಟೇವು ಕಾವೇರಿ ಬಿಡೆವು, ಕೂಡಲೇ ನೀರು ನಿಲ್ಲಿಸಿ, ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯ ದೊರಕಲಿ ಎಂದು ಘೋಷಣೆ ಕೂಗುತ್ತಾ ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಸರ್‌ಎಂವಿ ಪ್ರತಿಮೆವರೆಗೆ ಉರುಳು ಸೇವೆ ಮಾಡಿದರು.
ರಮೇಶ್‌ಗೌಡ ಮಾತನಾಡಿ, ಕನ್ನಂಬಾಡಿ ಜಲಾಶಯದಿಂದ ನಿರಂತರವಾಗಿ ನೀರು ಹರಿದು ಹೋಗುತ್ತಿರುವುದರಿಂದ ಜಲಾಶಯದಲ್ಲಿ ನೀರಿನ ಮಟ್ಟ ಕುಸಿದಿದೆ. ಇದೇ ರೀತಿ ನೀರು ಬಿಡುತ್ತಿದ್ದರೆ ಕುಡಿಯುವ ನೀರಿಗೂ ತತ್ವಾರವಾಗಲಿದ್ದು,ಸುಪ್ರೀಂ ಕೋರ್ಟ್ ನಲ್ಲಿ ಕರ್ನಾಟಕದ ಪರ ತೀರ್ಪು ಬರಲು ಕಾವೇರಮ್ಮ ಕರುಣಿಸಲಿ. ರಾಜ್ಯದಲ್ಲಿ ಬರ ಪರಿಸ್ಥಿತಿ ತಲೆದೋರಿದೆ. ನಾಟಿ ಮಾಡಿರುವ ಬೆಳೆಗೆ ನೀರಿಲ್ಲದಂತಾಗಿದೆ. ಆದರೆ ತ.ನಾಡಿನ ರೈತರು ಮೂರು ಬೆಳೆ ಬೆಳೆಯುತ್ತಿದ್ದಾರೆ. ಅಲ್ಲಿನ ಮುಖ್ಯಮಂತ್ರಿ ಸ್ಟಾಲಿನ್ ಕರ್ನಾಟಕದ ಜಲಾಶಯಗಳ ಪರಿಸ್ಥಿತಿ ನೋಡಿ ಮಾತನಾಡಬೇಕು. ಪದೇ ಪದೇ ಸುಪ್ರೀಂ ಕೋರ್ಟ್ ಮೊರೆ ಹೋಗಿ ತಮಿಳುನಾಡು ದಬ್ಬಾಳಿಕೆ ನೀತಿ ಅನುಸರಿಸುತ್ತಿದೆ ಎಂದು ಆಕ್ರೋಶ ಹೊರಹಾಕಿದರು.
ಪ್ರತಿಭಟನೆಯಲ್ಲಿ ರಾಮನಗರ ಜಿಲ್ಲಾಧ್ಯಕ್ಷ ಯೋಗೇಶ್‌ಗೌಡ, ಮಂಡ್ಯ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್, ರಂಜಿತ್‌ಗೌಡ, ಶ್ರೀಧರ್, ನಾಗಲಕ್ಷ್ಮೀ, ನಿರ್ಮಲಾ, ಸೋಮಶೇಖರ್, ಗೋವಿಂದನಾಯಕ್, ಜಯಸಿಂಹ, ಕೃಷ್ಣೇಗೌಡ, ದೇವರಾಜ್, ಕಲಾವತಿ, ಮಂಗಳಮ್ಮ, ಮಲ್ಲಣ್ಣ ಇತರರಿದ್ದರು.