

ಚಿಕ್ಕಮಗಳೂರು: ಬಡವರ ವಿರೋದಿ ಡಾ.ಕಸ್ತೂರಿ ರಂಗನ್ ವರದಿ ರದ್ದುಗೊಳಿಸಿ ಬದುಕಿಗಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ಸಣ್ಣ ರೈತರನ್ನು ಒಕ್ಕಲೆಬ್ಬಿಸದೇ ಒತ್ತುವರಿ ಜಾಗವನ್ನು ಸಕ್ರಮಗೊಳಿಸಬೇಕು ಎಂದು ಆಗ್ರಹಿಸಿ ಭಾರತ ಕಮ್ಯೂನಿಸ್ಟ್ ಜಿಲ್ಲಾ ಸಮಿತಿ ಮುಖಂಡರು ಶುಕ್ರವಾರ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಸಮಿತಿಯ ರಾಜ್ಯ ಕಾರ್ಯದರ್ಶಿ ರುದ್ರಯ್ಯ, ಮಲೆನಾಡಿನ ಭೂಮಿಗೆ ಭೂ ಮಿತಿ ಕಾಯ್ದೆ ಜಾರಿ, ದಲಿತರ ಭೂ ಮಂಜೂರಾತಿ ದಾಖಲೆಗಳನ್ನು ನಾಶಪಡಿಸಿರುವುದರ ಬಗ್ಗೆ ತನಿಖೆಯಾಗಬೇಕು ಹಾಗೂ ದಲಿತರ ಮಂಜೂರಾತಿ ಭೂಮಿಯ ಅಕ್ರಮ ಒತ್ತುವರಿಯನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲೆ ಪ್ರಾಕೃತಿಕವಾಗಿ ಸಂಪತ್ಭರಿತದಿAದ ಕೂಡಿದ್ದರೂ ಗೋಮಾಳ, ಗೈರಾಣ, ಗ್ರಾಮಠಾಣ, ಊರು ಉಡುಬೆ, ಕೆರೆಯಂಗಳ, ಹುಲ್ಲುಬನ್ನಿ, ಕುರಿಮಂದೆ, ನೆಡುತೋಪಿನಂಥ ಸಾವಿರಾರು ಎಕರೆ ಭೂಮಿಗಳಿವೆ. ಆದರೆ ಇವುಗಳು ಬಲಾಡ್ಯ ಭೂ ಮಾಲೀಕರ ಕೈವಶವಾಗಿದೆ. ಜೊತೆಗೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಲಾಗಿದೆ ಎಂದು ಹೇಳಿದರು.
ಬಹುತೇಕ ಜಿಲ್ಲೆಯಲ್ಲಿ ಶೇ. ೯೯ರಷ್ಟು ಮಂದಿ ಭೂಹೀನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೂಲಿ ಕಾರ್ಮಿಕರು, ನಿವೇಶನ ಮತ್ತು ಸ್ಮಶಾನಗಳಂತಹ ಗಂಭೀರ ಸಮಸ್ಯೆಗಳಿವೆ. ನಮೂನೆ ೫೩, ೫೭ರ ಅರ್ಜಿಗಳಿ ಗೆ ಮಂಜೂರಾತಿ ದೊರೆಯದೇ ಅಕ್ರಮವಾಗಿ ಬಲಾಡ್ಯರಿಗೆ ಭೂಮಿಯನ್ನು ಮಂಜೂರಾತಿ ಮಾಡಿಕೊಡಲಾಗುತ್ತಿದ್ದು ಇತ್ತೀಚೆಗೆ ಅಧಿಕ ಅಕ್ರಮ ಖಾತೆಗಳು ಮೂಡಿಗೆರೆ ತಾಲೂಕು ಒಂದರಲ್ಲೇ ಕಂಡುಬರುತ್ತಿದೆ ಎಂದರು.
ಶ್ರೀಮAತರ ಪಾಲಿಗೆ ಚಿಕ್ಕಮಗಳೂರು ಸ್ವರ್ಗವಾದರೆ, ಬಡವರ ಪಾಲಿಗೆ ನರಕವಾಗಿದೆ. ಸರ್ಕಾರ ಮಾಫಿಯಾಗಳನ್ನು ನಿಯಂತ್ರಿಸದೇ ಪುನಃ ಜನವಿರೋಧಿ ಭೂ ಗುತ್ತಿಗೆ ನೀತಿ ಜಾರಿಗೊಳಿಸುತ್ತಿದೆ. ಪಶ್ಚಿಮ ಘಟ್ಟ ಉಳಿಯಬೇಕಾದರೆ ಎಲ್ಲಾ ಮಾಫಿಯಗಳ ನಿಯಂತ್ರಣ, ಡಾ.ಮಾಧವ ಗಾಡ್ಗಿಲ್ ವರದಿ ಪುನರ್ ಪರಿಶೀಲಿಸಿ ಜಾರಿಗೊಳಿಸಲು ಸರ್ಕಾರ ಕೂಡಲೇ ಮುಂದಾಗಬೇಕು ಎಂದು ಆಗ್ರಹಿಸಿದರು.
ಸ್ಮಶಾನ ಭೂಮಿ ಒತ್ತುವರಿ ತೆರವುಗೊಳಿಸಿ, ಒತ್ತುವರಿದಾರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಜಿಲ್ಲೆಯ ಸಾವಿರಕ್ಕೂ ಅಧಿಕ ಅಕ್ರಮ ಭೂ ಮಂಜೂರಾತಿ ತನಿಖೆ ಪೂರ್ಣಗೊಳಿಸಿ, ಅಕ್ರಮ ಭೂಮಿಯನ್ನು ಭೂಹೀನ ಬಡವರಿಗೆ ವಿತರಿಸಬೇಕು. ಸರ್ಕಾರಿ ಭೂಮಿ ಒತ್ತುವರಿ ಗುತ್ತಿಗೆ ನೀತಿಯನ್ನು ಕೈಬಿಡ ಬೇಕು ಎಂದು ಒತ್ತಾಯಿಸಿದರು.
ಸಮಿತಿಯ ಜಿಲ್ಲಾ ಕಾರ್ಯದರ್ಶಿ ಶೇಖರ್ ಮಾತನಾಡಿ, ಅರಣ್ಯ ಮತ್ತು ಕಂದಾಯ ಜಮೀನಿನ ಜಂಟಿ ಸರ್ವೆ ಕಾರ್ಯ ನಡೆಸಿ ಸಣ್ಣ ರೈತರಿಗೆ ಕೃಷಿಗೆ ಅನುವು ಮಾಡಲು ಕ್ರಮ ಕೈಗೊಳ್ಳಬೇಕು. ಪರಿಸರ ವಿರೋಧಿ, ಜನವಿರೋಧಿ ಕಾನೂನುಬಾಹಿರ ಹೋಂ ಸ್ಟೇ, ರೆಸಾರ್ಟ್ ಸಂಸ್ಕೃತಿ ನಿಲ್ಲಿಸಬೇಕು. ಹಂಗಾಮಿ ಸಾಗುವಳಿ ಚೀಟಿಯನ್ನು ಖಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಿಪಿಐಎಂಎಲ್‌ನ ಮುಖಂಡರಾದ ಶಂಕರ್, ಗೋಪಾಲ್, ಪುಟ್ಟಸ್ವಾಮಿ, ಸಂದೀಪ್, ರೋಜ, ಭಾಗ್ಯ, ವೀಣಾ, ಸಣ್ಣಪ್ಪ ಮಂಜುನಾಥ್, ಜಯಣ್ಣ ಮತ್ತಿತರರಿದ್ದರು.