ಕಸ್ತೂರಿರಂಗನ್ ವರದಿ ಅವೈಜ್ಞಾನಿಕ

18 srs 3
Published on

ಶಿರಸಿ: ಕಸ್ತೂರಿ ರಂಗನ್ ವರದಿಯಲ್ಲಿ ಇರುವ 10 ಅವೈಜ್ಞಾನಿಕ ಸಂಗತಿಗಳನ್ನು ಅರಣ್ಯ ಭೂಮಿ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ರವೀಂದ್ರನಾಥ ನಾಯ್ಕ ಕಸ್ತೂರಿರಂಗನ್ ವರದಿ ಪರಿಶೀಲನಾ ಸಚಿವ ಸಂಪುಟದ ಉಪಸಮಿತಿಯ ಸದ್ಯಸರಾದ ಡಾ.ಎಚ್.ಸಿ. ಮಹದೇವಪ್ಪ ಅವರಿಗೆ ವಿವರಿಸಿದರು.

ಬೆಂಗಳೂರಿನ ಅವರ ಗೃಹ ಕಚೇರಿಯಲ್ಲಿ ಭೇಟಿಯಾದ ರವೀಂದ್ರನಾಥ ನಾಯ್ಕ, ಕಸ್ತೂರಿ ರಂಗನ್ ವರದಿಯು ಅವೈಜ್ಞಾನಿಕವಾಗಿದ್ದು, ಸೆಟಲೈಟ್ ಚಿತ್ರಣದ ಆಧಾರದ ಮೇಲೆ ಸಮೀಕ್ಷೆ ನಡೆಸಲಾಗಿದೆ. ವಾಸ್ತವಿಕ ಮತ್ತು ನೈಜತೆಯ ಚಿತ್ರಣಕ್ಕೆ ವ್ಯತಿರಿಕ್ತವಾಗಿದೆ. ಗ್ರಾಮದ ಶೇ. 20 ಕ್ಕಿಂತ ಹೆಚ್ಚು ಭೌಗೋಳಿಕ ಪ್ರದೇಶವನ್ನು ಜೀವವೈವಿಧ್ಯ ಪರಿಸರ ಸೂಕ್ಷ್ಮ ಪ್ರದೇಶವನ್ನಾಗಿ ಕಸ್ತೂರಿ ರಂಗನ್ ವರದಿಯಲ್ಲಿ ಸೇರಿಸಲ್ಪಟ್ಟಿದೆ. ಘೋಷಿಸಿದ ಸೂಕ್ಷ್ಮ ಪ್ರದೇಶ ವ್ಯಾಪ್ತಿಯ ಗ್ರಾಮ ಮಟ್ಟದ ಜನಾಭಿಪ್ರಾಯ ಅಥವಾ ಭೌತಿಕ ಸರ್ವೇ ಮಾಡಿ ವಿಷಯ ಸಂಗ್ರಹ ಮಾಡಿಲ್ಲ. ಪಶ್ಚಿಮ ಘಟ್ಟ ಪ್ರದೇಶದ ರಕ್ಷಣೆ ಹಾಗೂ ಸಂರಕ್ಷಣೆಗೆ ಅಸ್ತಿತ್ವದಲ್ಲಿರುವ ಕಾನೂನು, ನೀತಿ- ನಿಯಮ ಇರುವುದರಿಂದ ಹೊಸಮಾನದಂಡದ ಅವಶ್ಯಕತೆ ಇರುವುದಿಲ್ಲ, ಸೂಕ್ಷ್ಮ ಪ್ರದೇಶ ಎಂದು ಘೋಷಿಸುವುದರಿಂದ ಗ್ರಾಮಸ್ಥರ ಮತ್ತು ಅರಣ್ಯವಾಸಿಗಳ ಜೀವನ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಆಗುವುದನ್ನು ಪರಿಣಮಿಸಿಲ್ಲ ಎಂದು ವಿವರಿಸಿದರು.

ಉಪಗ್ರಹ ಆಧಾರಿತ ಸರ್ವೇ ಆಗಿರುವುದರಿಂದ ಅಡಕೆ, ತೆಂಗಿನ ತೋಟ ಹಾಗೂ ಇನ್ನಿತರ ಕೃಷಿ ತೋಟಗಾರಿಕೆ ಬೆಳೆಗಳಿಂದ ಹಸಿರು ಪ್ರದೇಶವನ್ನು ಸಹ ಅರಣ್ಯ ಪ್ರದೇಶವೆಂದು ಪರಿಗಣಿಸಲಾಗಿದೆ. ಘೋಷಿಸಿದ ಗ್ರಾಮದ ನಿರ್ದಿಷ್ಟ ಸರ್ವೇ ನಂಬರ್ ಪ್ರದೇಶ ವ್ಯಾಖ್ಯಾನಿಸದೆ ಇರುವುದು ಅವೈಜ್ಞಾನಿಕ ಎಂದು ಮನವಿಯಲ್ಲಿ ಅವರು ಪ್ರಸ್ತಾಪಿಸಿದ್ದಾರೆ.

ವರದಿಯನ್ನ ವೈಜ್ಞಾನಿಕ ಮತ್ತು ಭೌತಿಕ ಸರ್ವೇ ಜರುಗಿಸದೆ ಅರಣ್ಯೀಕರಣ ಭೂಮಿ ಹೊರತಾಗಿ ಜನವಸತಿ ಪ್ರದೇಶವನ್ನ ಸಹಿತ ಸೂಕ್ಷ್ಮ ಪ್ರದೇಶ ದಾಖಲಿಸಿರುವ ಅಂಶಕ್ಕೆ ಕೇರಳ ಸರ್ಕಾರ ಆಕ್ಷೇಪಿಸಿದ ಮಾದರಿಯಂತೆ ರಾಜ್ಯ ಸರ್ಕಾರವು ಸಹಿತ ಆಕ್ಷೇಪಿಸಬೇಕೆಂದು ಅಧ್ಯಕ್ಷ ರವೀಂದ್ರ ನಾಯ್ಕ ವಿನಂತಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net