

ಚಿಕ್ಕಮಗಳೂರು: ಕಸ್ತೂರಿ ರಂಗನ್ ವರದಿ ಅನುಷ್ಠಾನದ ಸಂದರ್ಭ ಒದಗಿ ಬಂದಲ್ಲಿ ಸಾಂಸ್ಕೃತಿಕ ವಲಯಕ್ಕೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿಗೆ ನಮ್ಮ ಸರ್ಕಾರ ಬದ್ಧವಿರುವುದಾಗಿ ಶಾಸಕ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಈಗಾಗಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ಜನಜೀವನಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದ್ದಾರೆ. ಸಾಂಸ್ಕೃತಿಕ ವಲಯದಲ್ಲಿ ಜನಜೀವನ, ಕೃಷಿ ಹಾಗೂ ಕೃಷಿ ಸಂಬಂಧಿತ ಚಟುವಟಿಕೆಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು. ಆದರೆ ಒತ್ತುವರಿಗೆ ಅವಕಾಶ ಕೊಡಬಾರದು. 50 ವರ್ಷದ ಹಿಂದಿನ ಮಾನಸಿಕತೆ ಈಗ ಇದೆ ಎಂದು ನಿರೀಕ್ಷಿಸಲಾಗದು. ಮನುಷ್ಯ ಹೆಚ್ಚು ಸ್ವಾರ್ಥಿಯಾಗುತ್ತಿರುವ ಈ ಸಂದರ್ಭ ಕಾನೂನಿನ ಮೂಲಕ ನೈಸರ್ಗಿಕ ಪ್ರದೇಶ ರಕ್ಷಿಸುವ ಕೆಲಸ ಆಗಬೇಕಿದೆ ಎಂದು ಹೇಳಿದರು.
ಕಾಂಗ್ರೆಸ್‍ನಿಂದ ತದ್ವಿರುದ್ಧ ಪ್ರಮಾಣ ಪತ್ರ:
ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ತದ್ವಿರುದ್ಧವಾದ ಪ್ರಮಾಣ ಪತ್ರ ನೀಡಿ ಈಗ ಅದನ್ನು ಸರಿಪಡಿಸುವಂತೆ ನಮ್ಮ ಸರ್ಕಾರದ ಮೇಲೆ ಒತ್ತಡ ಹೇರುತ್ತಿದೆ. ಅಂದೇ ಸರಿಪಡಿಸಿದ್ದರೆ ಇಂಥ ಪರಿಸ್ಥಿತಿ ಒದಗುತ್ತಿರಲಿಲ್ಲ. ಈಗ ಯಾವ ಮುಖ ಇಟ್ಟುಕೊಂಡು ಆ ಪಕ್ಷ ಚರ್ಚೆಗಿಳಿದಿದೆ ಎನ್ನುವುದು ಅರ್ಥವಾಗುತ್ತಿಲ್ಲ. ಈ ಬಗ್ಗೆ ಕಾಂಗ್ರೆಸ್ ಕೇಳಿದರೆ ಅದು ಮಾಡಿದ ಪಾಪ ತೊಳೆಯಲು ಬಿಜೆಪಿ ಬೇಕೆ ಎನ್ನುವ ಪ್ರಶ್ನೆ ಏಳುತ್ತದೆ. ಆದರೆ ಜನ ಕೇಳುವ ಅಹವಾಲಿಗೆ ನಮ್ಮ ಸಹಮತ ಇದೆ ಎಂದರು.
ಅಂದೇ ನೈಸರ್ಗಿಕ ವಲಯಕ್ಕೆ ಮಾತ್ರ ಈ ವರದಿ ಸೀಮಿತ ಎಂದು ಕಾಂಗ್ರೆಸ್ಸಿಗರು ಪ್ರಸ್ತಾಪಿಸದೆ ತಪ್ಪು ಪ್ರಮಾಣಪತ್ರ ನೀಡಿದ್ದೇಕೆ? ಅಷ್ಟಕ್ಕೂ ಸಾಂಸ್ಕøತಿಕ ವಲಯವನ್ನು ನಮ್ಮ ಸರ್ಕಾರ ಬಂದ ಮೇಲೆ ಸೇರಿಸಿದ್ದಲ್ಲ. ಅದು ಕಾಂಗ್ರೆಸ್‍ನಿಂದಾದ ತಪ್ಪಾಗಿದ್ದು, ಈಗ ನಮ್ಮನ್ನು ಅದೇ ಪಕ್ಷ ವರದಿಗೆ ಜನಾಭಿಪ್ರಾಯ ಸಂಗ್ರಹಿಸಿಲ್ಲವೇಕೆ ಎಂದು ಕೇಳುತ್ತಿದೆ ಎಂದು ದೂಷಿಸಿದರು.
ಅಂದು ಶಂಕರ್ ಸಲಹೆ ನೀಡಲಿಲ್ಲವೇಕೆ?:
ಕಾಂಗ್ರೆಸ್ 2013 ರಿಂದ 18ರವರೆಗೆ ಅಧಿಕಾರದಲ್ಲಿದ್ದು, ಅನಂತರದ ಒಂದು ವರ್ಷ ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿತ್ತು. ಆಗೇಕೆ ಗ್ರಾಪಂ ಮಟ್ಟದ ಅಹವಾಲು ಸಂಗ್ರಹಿಸಲಿಲ್ಲ. ಇವಕ್ಕೆಲ್ಲ ಕಾಂಗ್ರೆಸ್ ಪಕ್ಷವೇ ಉತ್ತರ ನೀಡಬೇಕು. ಕಸ್ತೂರಿ ರಂಗನ್ ವರದಿ ಬಂದಾಗ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡರಲ್ಲೂ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿತ್ತು. ಕಾಂಗ್ರೆಸ್ ಸರ್ಕಾರ ಗಾಡ್ಗೀಳ್ ವರದಿ ತಿರಸ್ಕರಿಸಿತ್ತು. ಕಸ್ತೂರಿ ರಂಗನ್ ವರದಿಯನ್ನು ಬಿಜೆಪಿ ಸರ್ಕಾರ ತಿರಸ್ಕರಿಸಬಾರದೇಕೆ ಎಂಬ ಕಾಂಗ್ರೆಸ್ ಬಿ.ಎಲ್. ಶಂಕರ್ ಪ್ರಶ್ನೆಗೆ ಸ್ಪಷ್ಟನೆ ನೀಡಿದ ಸಿ.ಟಿ.ರವಿ, ವರದಿ ತಿರಸ್ಕರಿಸುವಂತೆ ಬಿ.ಎಲ್.ಶಂಕರ್ ಅಂದೇ ಸಲಹೆ ನೀಡಲಿಲ್ಲವೇಕೆ? ಕಾಂಗ್ರೆಸ್ಸಿಗರು ತಮ್ಮ ಮಾತು ಕೇಳುವುದಿಲ್ಲವೆಂದೇ, ಇಲ್ಲವೇ ಇವರೇ ಸಲಹೆ ನೀಡಲಿಲ್ಲವೇ ಅಥವಾ ರಾಜಕಾರಣ ಮಾಡಲು ಒಂದು ವಿಷಯ ಬೇಕೆಂದು ಈಗ ಪ್ರಸ್ತಾಪಿಸುತ್ತಿದ್ದಾರೆಯೇ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸರ್ಕಾರ ಜನಾಭಿಪ್ರಾಯ ಸಂಗ್ರಹಿಸಿಲ್ಲ:
ಕೇರಳ ಸರ್ಕಾರ ಗ್ರಾಪಂ ಮಟ್ಟದಲ್ಲಿ ಅಭಿಪ್ರಾಯ ಸಂಗ್ರಹಿಸಿ ಪ್ರಮಾಣ ಪತ್ರ ನೀಡಿದರೂ ಹಿಂದಿನ ಕಾಂಗ್ರೆಸ್ ಸರ್ಕಾರ ಏಕೆ ಆ ಕೆಲಸ ಮಾಡಲಿಲ್ಲ. ಒಂದೊಮ್ಮೆ ನ್ಯಾಯಾಲಯ ಈ ವರದಿಯನ್ನು ಸಾರಾಸಗಟು ತಿರಸ್ಕರಿಸಿ ಮತ್ತೆ ಗಾಡ್ಗೀಳ್ ವರದಿಯನ್ನು ಎತ್ತಿ ಹಿಡಿದರೆ ಯಾರು ಹೊಣೆ ಎಂದು ಕೇಳಿದರು.
ಗ್ರಾಪಂ ಚುನಾವಣೆ-ಬಿಜೆಪಿಯದೇ ಗೆಲುವು:
ಇಡೀ ರಾಜ್ಯದಲ್ಲಿ ಬಿಜೆಪಿ ಬೆಂಬಲಿತ ಗ್ರಾಪಂ ಸದಸ್ಯರು ಆಯ್ಕೆಯಾಗಲಿದ್ದಾರೆ. ಈ ಬಾರಿ ಕೇಂದ್ರದಿಂದ ಪ್ರತಿ ಗ್ರಾಪಂಗೆ ಒಂದೂವರೆ ಕೋಟಿಯಿಂದ 5 ಕೋಟಿ ರೂ.ವರೆಗೆ ಅನುದಾನ ಬರಲಿದೆ. ಅದನ್ನು ಸಮರ್ಥವಾಗಿ ಬಳಸಿ ಗ್ರಾಮ ಸ್ವರಾಜ್ಯ ಹಾಗೂ ಆತ್ಮ ನಿರ್ಭರ ಆಶಯಗಳನ್ನು ಸಾಕಾರಗೊಳಿಸಬೇಕು. ಗ್ರಾಪಂಗಳು ಸ್ವಾವಲಂಬಿಯಾಗಬೇಕು. ಈಗಾಗಲೇ ಜಿಲ್ಲೆಯಲ್ಲಿ ಸಹಕಾರ ಸಂಘ ಸೇರಿದಂತೆ ಎಲ್ಲ ಕ್ಷೇತ್ರದಲ್ಲೂ ಬಿಜೆಪಿ ಸದಸ್ಯರು ಆಯ್ಕೆಯಾಗಿದ್ದಾರೆ. ಮತದಾರರು ಗ್ರಾಪಂ ಚುನಾವಣೆಯಲ್ಲಿ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ ಅವರನ್ನು ಅಭಿನಂದಿಸುವುದಾಗಿ ಹೇಳಿದರು.
ಚಿಕಿತ್ಸೆಯಿಂದಲೇ ಎರಡನೇ ಅಲೆ ನಿಯಂತ್ರಣ:
ಹಾಲಿ ಇರುವ ಚಿಕಿತ್ಸೆಯಿಂದಲೇ ಕರೊನಾ ಎರಡನೇ ಅಲೆಯನ್ನು ನಿಯಂತ್ರಣಕ್ಕೆ ತರಬಹುದು ಎಂದು ತಜ್ಞರು ಹೇಳಿದ್ದಾರೆ. ಅವರ ವರದಿ ಪ್ರಕಾರ ಈ ಅಲೆ ಬಹಳ ಹಾನಿಯನ್ನೇನೂ ಮಾಡುವುದಿಲ್ಲ. ಆದರೆ ಮಾಸ್ಕ್ ಹಾಕುವುದರಿಂದ ಹಿಡಿದು ಎಲ್ಲಾ ಮುಂಜಾಗ್ರತೆ ವಹಿಸುವುದು ಅಗತ್ಯ ಎಂದರು.