ಕಸ್ತೂರಿ ರಂಗನ್ ವರದಿ ಜಾರಿ ಕುರಿತು ಕೇಂದ್ರ ಸರ್ಕಾರ ತೀರ್ಮಾನ; ಕೆಪಿಸಿಸಿ ಉಪಾಧ್ಯಕ್ಷ ರಮಾನಾಥ ರೈ ಸಲಹೆ

Ramanatha Rai
Published on

ವಿಜಯವಾಣಿ ಸುದ್ದಿಜಾಲ ಮಂಗಳೂರು
ಪರಿಸರ ಸೂಕ್ಷ್ಮ ಪಶ್ಚಿಮ ಘಟ್ಟದ ಜೀವವೈವಿಧ್ಯತೆಯನ್ನು ರಕ್ಷಿಸುವ ದೃಷ್ಟಿಯಿಂದ ಸಂಬಂಧಿಸಿದ ರಾಜ್ಯಗಳ ಸಲಹೆಗಳನ್ನು ಗಮನದಲ್ಲಿರಿಸಿ ಕಸ್ತೂರಿ ರಂಗನ್ ವರದಿ ಜಾರಿ ಕುರಿತು ಕೇಂದ್ರ ಸರ್ಕಾರ ತೀರ್ಮಾನ ಕೈಗೊಳ್ಳುವಂತೆ ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಚಿವ ಬಿ.ರಮಾನಾಥ ರೈ ಸಲಹೆ ನೀಡಿದ್ದಾರೆ.
ಕಸ್ತೂರಿ ರಂಗನ್ ವರದಿ ಶಿಫಾರಸು ತಿರಸ್ಕರಿಸಿದ ಕಾರಣ ಪ್ರಾಕೃತಿಕ ವಿಪತ್ತು ನಿಯಂತ್ರಣ ಕಷ್ಟವಾಗಿದೆ ಎನ್ನುವ ಅಭಿಪ್ರಾಯದ ಕುರಿತು ನಗರದ ಕಾಂಗ್ರೆಸ್ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕುರಿತು ಕೇಂದ್ರ ಸರ್ಕಾರ 5- 6 ಬಾರಿಗೂ ಅಧಿಕ ಅಧಿಸೂಚನೆಗಳನ್ನು ಕಳುಹಿಸಿದ್ದು, ಸಂಬಂಧಿಸಿದ ರಾಜ್ಯಗಳು ವರದಿ ಜಾರಿ ಕುರಿತು ತಮ್ಮದೇ ಸಲಹೆ ಸೂಚನೆಗಳನ್ನು ನೀಡಿವೆ ಎಂದರು.
ಕರ್ನಾಟಕ, ಕೇರಳ, ಮಹಾರಾಷ್ಟ್ರ, ಗೋವಾ ಮುಂತಾದ ರಾಜ್ಯಗಳು ಯೋಜನೆ ವರದಿ ವ್ಯಾಪ್ತಿಗೆ ಬರುತ್ತಿದ್ದು, ಜನವಸತಿ ಪ್ರದೇಶಗಳನ್ನು ಗಮನದಲ್ಲಿರಿಸಿ ವರದಿ ಜಾರಿ ಬಗ್ಗೆ ಸಲಹೆ, ಅಭಿಪ್ರಾಯಗಳು ಬಂದಿವೆ. ಈ ಬಗ್ಗೆ ಅಂತಿಮ ಥೀರ್ಮಾನ ಕೈಗೊಳ್ಳುವ ಅಧಿಕಾರವನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ಅವರು ಹೇಳಿದರು.
ಮುಡಾ ಹಗರಣ ಮುಂದಿಟ್ಟು ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನವನ್ನು ಬಿಜೆಪಿ ಮತ್ತು ಕೇಂದ್ರ ಸರ್ಕಾರ ಮಾಡುತ್ತಿದೆ. ರಾಜ್ಯಪಾಲರ ಮೂಲಕ ಮುಖ್ಯಮಂತ್ರಿ ಅವರಿಗೆ ಈ ಕುರಿತು ನೀಡಿರುವ ನೊಟೀಸು ಮತ್ತು ಬಿಜೆಪಿ- ಜೆಡಿಎಸ್ ದೋಸ್ತಿಗಳು ಕೈಗೊಂಡಿರುವ ಯಾತ್ರೆ ರಾಜಕೀಯ ಪ್ರೇರಿತ ಎಂದು ಅವರು ಟೀಕಿಸಿದರು.
ಇಲ್ಲದ ಹಗರಣದ ಹೆಸರಿನಲ್ಲಿ ಬಿಜೆಪಿ- ಜೆಡಿಎಸ್ ನಡೆಸುತ್ತಿರುವ ಸುಳ್ಳು ಆಪಾದನೆಗಳ ಕುರಿತು ಜನರಿಗೆ ಸತ್ಯ ಹೇಳುವ ಜವಾಬ್ದಾರಿ ಕೂಡ ಕಾಂಗ್ರೆಸ್ ಮೇಲಿದೆ. ವಾಮ ಮಾರ್ಗದಿಂದ ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸುವ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುವ ಬಿಜೆಪಿ ಪ್ರಯತ್ನ ಫಲ ನೀಡುವುದಿಲ್ಲ ಎಂದು ಅವರು ಹೇಳಿದರು.
ಮಾಜಿ ಮೇಯರ್‌ಗಳಾದ ಹರಿನಾಥ್, ಶಶಿಧರ ಹೆಗ್ಡೆ, ಅಶ್ರಫ್, ಕೆಪಿಸಿಸಿ ವಕ್ತಾರ ಎಂ.ಜಿ.ಹೆಗ್ಡೆ, ಮುಖಂಡರಾದ ಗಣೇಶ್ ಪೂಜಾರಿ, ಎಸ್.ಅಪ್ಪಿ, ನವೀನ್ ಡಿಸೋಜ, ಟಿ.ಕೆ.ಸುಧೀರ್ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net