

ಗದಗ: ತಾಯಿ, ಶಿಶು ಮರಣ ಪ್ರಮಾಣ ಕಡಿಮೆ ಇರುವ ದೇಶಗಳು ಅಭಿವೃದ್ಧಿಶೀಲ ರಾಷ್ಟ್ರಗಳಾಗಿವೆ. ಭಾರತವೂ ಅಂಥ ಅಭಿವೃದ್ಧಿಶೀಲ ರಾಷ್ಟ್ರವಾಗಬೇಕಾದರೆ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಕೊಡುಗೆ ಅಗತ್ಯವಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಭಾನುವಾರ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಭಾಂಗಣದಲ್ಲಿ ಪ್ರಸೂತಿಶಾಸ್ತ್ರ ಹಾಗೂ ಸ್ತ್ರೀರೋಗ ತಜ್ಞರ ಸಂಘ ಹಾಗೂ ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ) ಆಯೋಜಿಸಿದ್ದ 3ನೆ ರಾಜ್ಯಮಟ್ಟದ ಯುವ ಕಸೋಗಾ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಶಿಶು, ತಾಯಿ ಮರಣ ಕಡಿಮೆ ಮಾಡುವಲ್ಲಿ ಸರಕಾರ, ಸಮುದಾಯ, ಶಿಕ್ಷಣದ ಜೊತೆಗೆ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಜವಾಬ್ದಾರಿಯೂ ಅಷ್ಟೆ ಮುಖ್ಯವಾಗಿದೆ. ಅಮೆರಿಕಾ, ಫಿನ್‌ಲ್ಯಾಂಡ್ ನಂತಹ ಮುಂದುವರಿದ ದೇಶಗಳಲ್ಲಿ ಶಿಶು, ತಾಯಿ ಮರಣ ಪ್ರಮಾಣ 5 ರಿಂದ 1.5 ರಷ್ಟಿದೆ. ಭಾರತವೂ ಆ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಯುವ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರು ಮುಂದಡಿ ಇಡಬೇಕು ಎಂದರು.
ಹಿಂದುಳಿದ ಹಳ್ಳಿಗಳು ಮತ್ತು ಕೆಲ ತಾಂಡಾಗಳಲ್ಲಿ ಮಹಿಳೆಯರು ಇನ್ನು ಮನೆಯಲ್ಲೆ ಹೆರಿಗೆ ಮಾಡಿಸಿಕೊಳ್ಳುತ್ತಿದ್ದಾರೆ. ಶೇ. 20 ರಷ್ಟು ಮಹಿಳೆಯರು ಆಸ್ಪತ್ರೆಗಳಿಗೆ ದಾಖಲಾಗುವುದಿಲ್ಲ. ಹೀಗಾಗಿ ಆಸ್ಪತ್ರೆಯಲ್ಲೆ ಹೆರಿಗೆ ಮಾಡಿಸಿಕೊಳ್ಳುವುದು ಕಡ್ಡಾಯವಾಗಬೇಕು ಎಂದ ಅವರು,
ಶಿಶು, ತಾಯಿ ಮರಣ ಕಡಿಮೆ ಮಾಡುವ ನಿಟ್ಟಿನಲ್ಲಿ ಯುವ ಕಸೋಗಾ ಕೈಗೊಳ್ಳುವ ನಿರ್ಧಾರಗಳಿಗೆ ಸರಕಾರ ಎಲ್ಲ ರೀತಿಯ ಸಹಾಯ ಸಹಕಾರ ನೀಡಲಿದೆ ಎಂದು ತಿಳಿಸಿದರು.
ಜಿಮ್ಸ್ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ ಮಾತನಾಡಿ, ಸಚಿವ ಎಚ್.ಕೆ. ಪಾಟೀಲ ಅವರ ದೂರದೃಷ್ಟಿಯಿಂದ ಜಿಮ್ಸ್ ರೂಪಗಿಂಡಿದೆ. ಕೊರೊನಾ ಸಂದರ್ಭದಲ್ಲಿ ಎಚ್.ಕೆ. ಪಾಟೀಲ ನೆರವು ಸ್ಮರಣೀಯ ಎಂದರು.
ಕ್ಯಾತ್‌ಲ್ಯಾಬ್ ಆರಂಭ
ಜಿಮ್ಸ್ ವೈದ್ಯರು ಮತ್ತು ನಿರ್ದೇಶಕರ ಅಭಿಪ್ರಾಯದಂತೆ ಕ್ಯಾತ್‌ಲ್ಯಾಬ್ ನಿರ್ಮಾಣಕ್ಕೆ ಸರಕಾರ ಹಸಿರು ನಿಶಾನೆ ತೋರಿಸಿದೆ. ಅಲ್ಲದೇ 450 ಹಾಸಿಗೆಯನ್ನು ಶೀಘ್ರವೇ ಉದ್ಘಾಟಿಸಲಾಗುವುದು ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಸಮಾರಂಭದಲ್ಲಿ ಡಾ. ಶಶಿಧರ ರೇಷ್ಮೆ, ಡಾ. ಜಯಶ್ರೀ ಎ.ಕೆ., ಡಾ. ಶೃತಿ ಪಾಟೀಲ, ಡಾ.ಎಚ್. ನಾಗರಾಜ್, ಡಾ. ವಿದ್ಯಾ, ಡಾ. ಕಸ್ತೂರಿ ಡೋಣಿಮಠ, ಡಾ. ಸುಮನ್, ಡಾ. ಸವಿತಾ ಹೊಂಬಾಳೆ, ಡಾ.ಎಂ.ಜಿ. ಹಿರೇಮಠ ಇತರರು ಉಪಸ್ಥಿತರಿದ್ದರು.