ಕಸದ ಕಾಸಿಂದ ತಂಗುದಾಣ!

6 vikram 4
Published on

ಧಾರವಾಡ: ಕಸದಿಂದ ರಸ ತಯಾರಿಸಿ ಎಂದು ಎಲ್ಲರೂ ಹೇಳುತ್ತಾರೆ. ಆದರೆ, ಈ ಯೋಜನೆ ಕಾರ್ಯಗತಗೊಳಿಸುವವರು ವಿರಳ. ಇಂತಹ ಮಹತ್ತರ ಕಾರ್ಯ ಮಾಡಿದ ಬಳಗವೊಂದು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿ ಮೆಚ್ಚುಗೆಗೆ ಪಾತ್ರವಾಗಿದೆ.

ಇಲ್ಲಿನ ಮಾಳಮಡ್ಡಿ ವೀರ ಸಾವರಕರ ಗೆಳೆಯರ ಬಳಗವೇ ಈ ಕಾರ್ಯ ಮಾಡಿದೆ. ರದ್ದಿ ಪೇಪರ್ ಮಾರಿದ ಹಣದಲ್ಲಿ ಮಾಳಮಡ್ಡಿ ವನವಾಸಿ ಶ್ರೀರಾಮ ಮಂದಿರ ಬಳಿ ಬಸ್ ತಂಗುದಾಣ ನಿರ್ವಿುಸಿ ಪ್ರಯಾಣಿಕರಿಗೆ ಆಶ್ರಯ ನೀಡಿದೆ. ಸುಮಾರು ಒಂದು ವರ್ಷ ಸಿದ್ಧತೆ ನಡೆಸಿ ನಿರ್ವಿುಸಿದ ಬಸ್ ತಂಗುದಾಣ ಉದ್ಘಾಟನೆಗೆ ಸಿದ್ಧವಾಗಿದೆ.

ಮಂದಿರ ಬಳಿ ಬಸ್​ಗಳಿಗೆ ಕಾಯುವ ವಿದ್ಯಾರ್ಥಿಗಳು, ಜನರಿಗೆ ಬಿಸಿಲು ಮತ್ತು ಮಳೆಯಿಂದ ರಕ್ಷಣೆ ಇಲ್ಲವಾಗಿತ್ತು. ಈ ಸ್ಥಿತಿ ಗಮನಿಸಿದ ಬಳಗದ ಸದಸ್ಯರು ತಂಗುದಾಣ ನಿರ್ವಿುಸಲು ಚಿಂತಿಸಿದ್ದರು. ಆದರೆ, ಹಣ ಸಂಗ್ರಹ ಹೇಗೆ? ಎಂಬ ಚಿಂತೆ ಕಾಡಿತ್ತು. ಆಗಲೇ ಕಸದಿಂದ ರಸ ಎಂಬ ಯೋಜನೆ ಸಿದ್ಧಪಡಿಸಿ ಸೇವಾ ಕಾರ್ಯಕ್ಕೆ ಮುಂದಾಗಿತ್ತು.ಒಂದು ವರ್ಷದ ಹಿಂದೆ ರೂಪಿಸಿದ ಈ ಯೋಜನೆಯಲ್ಲಿ ಮಾಳಮಡ್ಡಿ, ಶಿವಗಿರಿ, ಸಪ್ತಾಪುರ, ಗಾಂಧಿನಗರ ಸೇರಿ ನಗರದ ವಿವಿಧ ಬಡಾವಣೆಗಳ ಸಾವಿರಾರು ಮನೆಗಳಿಂದ ದಾನದ ರೂಪದಲ್ಲಿ ಸುಮಾರು 10 ಸಾವಿರ ಕೆಜಿ ರದ್ದಿ ಪೇಪರ್ ಸಂಗ್ರಹಿಸಿದ್ದಾರೆ. ಅದನ್ನು ಮಾರಿ ಸಂಗ್ರಹಿಸಿದ ಅಂದಾಜು 1 ಲಕ್ಷ ರೂಪಾಯಿಯಲ್ಲಿ ತಂಗುದಾಣ ನಿರ್ವಿುಸಿದ್ದಾರೆ. ಈ ಬಳಗ ಸ್ಥಾಪಿಸಿದ ಬಳಿಕ ವನಮಹೋತ್ಸವ, ಸಾಂಸ್ಕೃತಿಕ ಗಣೇಶೋತ್ಸವ, ನೆರೆ ಪರಿಹಾರ ವಿತರಣೆ ಸೇರಿ ಅನೇಕ ಸೇವಾ ಕಾರ್ಯಗಳನ್ನು ನಡೆಸಲಾಗಿದೆ. ಅದರಲ್ಲಿ ತಂಗುದಾಣ ನಿರ್ಮಾಣ ಪ್ರಮುಖ. ಈ ಕಾರ್ಯಕ್ಕೆ ಬಡಾವಣೆಯ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿವಿಧ ಸೇವಾ ಚಟುವಟಿಕೆಗಳನ್ನು ನಡೆಸಲು ಕಸದಿಂದ ರಸ ಎಂಬ ಯೋಜನೆ ರೂಪಿಸಿ ವರ್ಷವಾಗಿತ್ತು. ಪ್ರತಿ ಮನೆ ಮನೆಗೆ ತೆರಳಿ ರದ್ದಿ ಪೇಪರ್ ನೀಡುವಂತೆ ಮನವಿ ಮಾಡಲಾಗಿತ್ತು. ಹೀಗೆ ಅವರು ನೀಡಿದ ಕಸದಿಂದಲೇ ತಂಗುದಾಣ ನಿರ್ವಿುಸಲಾಗಿದೆ. ದೇಣಿಗೆ ರೂಪದಲ್ಲಿ ರದ್ದಿ ಪೇಪರ್ ನೀಡಿದ, ಸಂಗ್ರಹಣೆಗೆ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದ.| ಗುರುದತ್ತ ದೇಶಪಾಂಡೆ ವೀರ ಸಾವರಕರ ಗೆಳೆಯರ ಬಳಗದ ಸದಸ್ಯ

ಉದ್ಘಾಟನೆ ಇಂದು

ಬಸ್ ತಂಗುದಾಣ ಉದ್ಘಾಟನೆ ಮಾ. 7ರಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ. ಅತಿಥಿಗಳಾಗಿ ಶಾಸಕ ಅರವಿಂದ ಬೆಲ್ಲದ, ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ಬಸಲಿಂಗಪ್ಪ ಬೀಡಿ, ಬಿಜೆಪಿ ವಿಭಾಗ ಸಂಘಟನಾ ಕಾರ್ಯದರ್ಶಿ ಜಯತೀರ್ಥ ಕಟ್ಟಿ, ಸಂಚಾರಿ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಎಂ.ಎಸ್. ಹೊಸಮನಿ ಪಾಲ್ಗೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net