ಆ.9ರಂದು ಶ್ರೀಕೃಷ್ಣ ಮಠದ 'ಕಾಷ್ಠ ಯಾಳಿ' ಉದ್ಘಾಟನೆ

Putthige Lead
Published on

1 ಕೋಟಿ ರೂ. ವೆಚ್ಚದಲ್ಲಿ ಸುತ್ತುಪೌಳಿ ನಿರ್ಮಾಣ

ಸಚಿವೆ ನಿರ್ಮಲಾ ಸೀತಾರಾಮನ್​ರಿಂದ ಲೋಕಾರ್ಪಣೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಎಂಟು ಶತಮಾನದ ಹಿಂದೆ ದ್ವೈತ ತತ್ವದ ಬೆಳಕನ್ನು ವಿಶ್ವಕ್ಕೆ ಪಸರಿಸಿದ್ದ ಆಚಾರ್ಯ ಮಧ್ವರು ಉಡುಪಿಯಲ್ಲಿ ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿದ್ದರು. ಅಂತಹ ಪ್ರಾಚಿನ ಉಡುಪಿಯ ಶ್ರೀಕೃಷ್ಣ ಮಠದ ಸೌಂದರ್ಯವನ್ನು ಆಧುನಿಕ ಬೆಳಕಿನ ಕಿಂಡಿಯಲ್ಲಿ ದರ್ಶಿಸಲು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ಅವಕಾಶ ಕಲ್ಪಿಸಿದ್ದಾರೆ.

Putthige 3
ಕರಾವಳಿಯ ಮೂಲ ವಾಸ್ತುಶೈಲಿ ಮಾದರಿಯ ಕಾಷ್ಠ ಯಾಳಿ (ಸುತ್ತುಪೌಳಿ)ಯನ್ನು ವಿಹಂಗಮವಾಗಿ ಕಟ್ಟಲಾಗಿದೆ. ಅಂದಾಜು 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಶ್ರೀಕೃಷ್ಣ ಮಠದ ಇನ್ನೊಂದು ಆಕರ್ಷಣೆಯಾಗಲಿದೆ.

ಸಚಿವೆ ನಿರ್ಮಲಾ ಉದ್ಘಾಟನೆ

Putthige 2
ಕನಕ ಗೋಪುರಕ್ಕೆ ಹೊಂದಿಕೊಂಡಿರುವ ಚಂದ್ರಶಾಲೆ ಸಹಿತ ಮಧ್ವ ಸರೋವರದವರೆಗೆ ಶ್ರೀಕೃಷ್ಣ ಆಲಯದ ಮೇಲ್ಛಾವಣಿಗೆ ಪ್ರಾಚೀನ ವಾಸ್ತು ಶೈಲಿಯ ರೂಪ ನೀಡಲಾಗಿದೆ. ವಿಶಿಷ್ಟ ರಚನೆಯ ಯಾಳಿಯನ್ನು ಆ.9ರಂದು ಶ್ರೀಕೃಷ್ಣನ ಮಹಾಪೂಜೆಯ ಬಳಿಕ ಬೆಳಗ್ಗೆ 10 ಗಂಟೆಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಸುತ್ತುಪೌಳಿ ಉದ್ಘಾಟಿಸಲಿದ್ದಾರೆ. ಬಳಿಕ ರಾಜಾಂಗಣದಲ್ಲಿ ನಡೆಯುವ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಇನ್ಫೋಸಿಸ್​ ಫೌಂಡೇಷನ್​ನ ಸುಧಾ ಮೂರ್ತಿ, ನಿವೃತ್ತ ಮುಖ್ಯ ನ್ಯಾಯಾಧೀಶ ದಿನೇಶಕುಮಾರ್​ ಭಾಗವಹಿಸಲಿದ್ದಾರೆ. ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ಶ್ರೀ, ಪಟ್ಟದ ಕಿರಿಯ ಶಿಷ್ಯ ಸುಶ್ರೀಂದ್ರ ಶ್ರೀ, ಅದಮಾರು ಮಠದ ವಿಶ್ವಪ್ರಿಯ ತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಲಿದ್ದಾರೆ ಎಂದು ಶ್ರೀಮಠದ ದಿವಾನ ನಾಗರಾಜ ಆಚಾರ್ಯ ಹಾಗೂ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ತಿಳಿಸಿದ್ದಾರೆ.

ಪುತ್ತಿಗೆ ಮಹಿಳಾ ವಿದ್ಯಾಪೀಠವೂ ಶುಭಾರಂಭ

Putthige Box
ಮಹಿಳೆಯರಿಗೆ ಧಾರ್ಮಿಕ, ಸಾಂಸ್ಕೃತಿಕ ಪ್ರಜ್ಞೆ ಇನ್ನಷ್ಟು ಹೆಚ್ಚಿಸಲು ಹಾಗೂ ಪ್ರೋತ್ಸಾಹಿಸಲು ಪುತ್ತಿಗೆ ಮಠದಿಂದ ಗೀತಾ ಮಂದಿರದಲ್ಲಿ ಪ್ರಪ್ರಥಮ ಪುತ್ತಿಗೆ ಮಹಿಳಾ ವಿದ್ಯಾಪೀಠ ಆರಂಭಿಸಲಾಗುತ್ತಿದೆ. ಸಚಿವೆ ನಿರ್ಮಲಾ ಸೀತಾರಾಮನ್​ ಹಾಗೂ ಸುಧಾ ಮೂರ್ತಿ ಅವರು ಇದೇ ಸಂದರ್ಭದಲ್ಲಿ ಚಾಲನೆ ನೀಡಲಿದ್ದಾರೆ. ಲಕ್ಷ್ಮೀ ಶೋಭಾನೆ, ಭಗವದ್ಗೀತೆ, ವಿವಿಧ ಶ್ಲೋಕಗಳ ಕಲಿಕೆ, ಧಾರ್ಮಿಕ ವಿಚಾರಗಳ ಮೂಲವನ್ನು ತಿಳಿಸಲಾಗುವುದು. ಜತೆಗೆ ರಂಗೋಲಿ, ಹೂ ಕಟ್ಟುವುದು, ದೀಪಾರತಿಗೆ ಬತ್ತಿ ಹೊಸೆಯುವುದು ಇನ್ನಿತ್ಯಾದಿ ಧಾರ್ಮಿಕ ಚಟುವಟಿಕೆಗಳನ್ನು ಮಹಿಳಾ ವಿದ್ಯಾಪೀಠದಲ್ಲಿ ಕಲಿಸಲಾಗವುದು. ಅನುಭವೀ ಮಹಿಳೆಯರು ತರಬೇತಿ ನೀಡಲಿದ್ದಾರೆ ಎಂದು ಪರ್ಯಾಯ ಸುಗುಣೇಂದ್ರ ಶ್ರೀ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net