

ಉಡುಪಿ: ಪಾಕ್ ಆಕ್ರಮಿತ ಕಾಶ್ಮೀರವನ್ನು ವಶಕ್ಕೆ ಪಡೆಯಲು ಭಾರತಕ್ಕೆ ಪಾಕಿಸ್ತಾನಕ್ಕಿಂತಲೂ ಚೀನಾ ಬಹುದೊಡ್ಡ ಅಡ್ಡಿಯಾಗಿದೆ. ಭಾರತ ಕ್ರಮಕ್ಕೆ ಮುಂದಾದರೆ ಮೊದಲು ಚೀನಾವನ್ನು ಎದುರಿಸಬೇಕಾಗಿದೆ ಎಂದು ಅಂಕಣಕಾರ ಹಾಗೂ ರಾಜಕೀಯ ವಿಶ್ಲೇಷಕ ಪ್ರೇಮಶೇಖರ್ ಹೇಳಿದರು.
ಶನಿವಾರ ಸುಹಸಾಂ ಉಡುಪಿ, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ಧಾತ್ರಿ ಪ್ರಕಾಶನ ಆಶ್ರಯದಲ್ಲಿ ಲೇಖಕ ಎಸ್.ಉಮೇಶ್ ಅವರ "ಕಾಶ್ಮೀರ್ ಡೈರಿ" ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಚೀನಾ ಯೋಜನೆಯನ್ನು ಅರ್ಥೈಸಿಕೊಂಡ ಭಾರತ ಜಾಗರುಕವಾಗಿ ಹೆಜ್ಜೆಗಳನ್ನು ಇಡುತ್ತಿದೆ. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ತೆಗೆದುಹಾಕುವ ಮೂಲಕ ಭಾರತದ ಜತೆಗೆ ಮಾನಸಿಕವಾಗಿ ಬೆಸೆಯಲು ಪ್ರಯತ್ನಿಸುತ್ತಿದೆ ಎಂದರು.
2007ರಿಂದ ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ಕಣ್ಣಿಟ್ಟಿರುವ ಚೀನ ಸೇನೆಯನ್ನು ನಿಯೋಜಿಸಿದೆ. ಆಫ್ರಿಕಾ ಮತ್ತು ಅರಬ್ ದೇಶಗಳಲ್ಲಿ ವಾಣಿಜ್ಯ, ಇಂಧನ, ಖನಿಜ ವ್ಯವಹಾರ ಸುಲಭವಾಗಿಸಿಕೊಳ್ಳಲು ಚೀನಾವು ಪಾಕಿಸ್ತಾನಕ್ಕೆ ಸಹಕಾರ, ನೆರವು ನೀಡುವ ನೆಪದಲ್ಲಿ ಪಿಒಕೆ ವಶಕ್ಕೆ ಪಡೆದು ಪಶ್ಚಿಮ ಚೀನಾವನ್ನು ಅಭಿವೃದ್ಧಿ ಮಾಡುವ ಗುರಿ ಹೊಂದಿದೆ ಎಂದರು.
ಸುಹಾಸಂ ಅಧ್ಯಕ್ಷ ಶಾಂತರಾಜ್ ಐತಾಳ್ ಅಧ್ಯಕ್ಷತೆ ವಹಿಸಿದ್ದರು. ಲೇಖಕ ಎಸ್.ಉಮೇಶ್, ಜಿಲ್ಲಾ ಕ.ಸಾ. ಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಉಡುಪಿ ತಾಲೂಕು ಕ.ಸಾ. ಪ ಅಧ್ಯಕ್ಷ ರವಿರಾಜ್ ಎಚ್ . ಪಿ. ಉಪಸ್ಥಿತರಿದ್ದರು.