ಪಹಲ್ಗಾಮ್ ದಾಳಿಕೋರ ಉಗ್ರರಿಗೆ ಕಠಿಣ ಶಿಕ್ಷೆ ಆಗಬೇಕು; ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ಆಗ್ರಹ

25 HVR 5
Published on

ಹಾವೇರಿ: ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣ ಹಾವೇರಿ ತಾಲೂಕು ಘಟಕದ ವತಿಯಿಂದ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಶುಕ್ರವಾರ ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಗುಂಡೇಟಿಗೆ ಬಲಿಯಾದ ಕನ್ನಡಿಗರಿಗೆ ಮೇಣದ ಬತ್ತಿ ಹಚ್ಚಿ ಶ್ರದ್ದಾಂಜಲಿ ಕೋರಲಾಯಿತು.

ವೇದಿಕೆ ಜಿಲ್ಲಾ ಯುವ ಘಟಕದ ಅಧ್ಯಕ್ಷ ಮೌಲಾಲಿ ಏರಿಮನಿ ಮಾತನಾಡಿ, ಜಮ್ಮು ಕಾಶ್ಮೀರದಲ್ಲಿರುವ ಉಗ್ರರನ್ನು ಗಡಿಪಾರು ಮಾಡಬೇಕು. ಅವರಿಗೆ ಮನುಷ್ಯನ ಜೀವದ ಬೆಲೆ ಏನು ಅಂತ ಗೊತ್ತಾಗುವಂತೆ ಅತ್ಯಂತ ಕಠಿಣವಾದ ಶಿಕ್ಷೆ ಕೊಡಬೇಕು. ಈ ಮೂಲಕ ಉಗ್ರರಿಗೆ ತಕ್ಕ ಉತ್ತರ ಕೊಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡರು.

ತಾಲೂಕು ಅಧ್ಯಕ್ಷ ಯುವರಾಜ ನವಲಗುಂದ ಮಾತನಾಡಿ, ಜಮ್ಮು -ಕಾಶ್ಮೀರ ಪಹಾಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಸಿಕೊಂಡು ಉಗ್ರ ಸಂಘಟನೆ ನಡೆಸಿದ ದಾಳಿ ದೇಶವೇ ಬೆಚ್ಚಿ ಬಿಳಿಸುವಂತೆ ಮಾಡಿದೆ. ಉಗ್ರರಿಗೆ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ತಕ್ಕ ಉತ್ತರ ಕೊಡಬೇಕು ಎಂದರು.

ಜಿಲ್ಲಾ ಉಪಾಧ್ಯಕ್ಷ ಮಹದೇವಪ್ಪ ಹೇಡಿಗೊಂಡ, ಜಿಲ್ಲಾ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಅಮೃತ ಮಜ್ಜಗಿ, ತಾಲೂಕು ಯುವ ಘಟಕದ ಅಧ್ಯಕ್ಷ ಸುರೇಶ ಎ.ಕೆ., ನಗರ ಘಟಕದ ಅಧ್ಯಕ್ಷ ಅಶೋಕ ಗದಗ, ಕುಮಾರ ಬಾರ್ಕಿ, ಪ್ರವೀಣ ಪಾಟೀಲ, ಪುಟ್ಟು ಕೊರವರ, ಶಾಂತು ಕೊರವರ, ವೆಂಕಟೇಶ ಭಜಂತ್ರಿ, ಇಮ್ರಾನ್‌ಖಾನ್ ಲಕ್ಷ್ಮೇಶ್ವರ, ನಾಗರಾಜ ಮಚ್ಚಗಾರ, ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net