ಕುಕ್ಕೆಯಲ್ಲಿ ಸುತ್ತುಪೌಳಿ ನಿರ್ಮಾಣಕ್ಕೆ ಗುರುಬಲ : ಕಾಶಿಕಟ್ಟೆ ಗುಡಿ ಅಭಿವೃದ್ಧಿಗೆ ತಾಂಬೂಲ ಪ್ರಶ್ನೆ ಚಿಂತನೆ

New Project (26)
Published on

ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ

ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸುತ್ತುಪೌಳಿ ಹಾಗೂ ಕಾಶಿಕಟ್ಟೆ ಗಣಪತಿ ಗುಡಿಯ ಸುತ್ತಮುತ್ತ ಅಭಿವೃದ್ಧಿಪಡಿಸುವ ಸಲುವಾಗಿ ತಾಂಬೂಲ ಪ್ರಶ್ನೆ ಚಿಂತನೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಕಚೇರಿಯ ಸಭಾಂಗಣದಲ್ಲಿ ನಡೆಯಿತು.

ಕೊರಂಗ್ರಪಾಡಿ ವಿದ್ವಾನ್ ಕೆ.ಪಿ.ಕುಮಾರ ಗುರು ತಂತ್ರಿ ಹಾಗೂ ಶಶಿ ಪಂಡಿತ್ ತಾಂಬೂಲ ಪ್ರಶ್ನೆ ಚಿಂತನೆ ನಡೆಸಿದರು. ಪ್ರಶ್ನೆ ಚಿಂತನೆಯಲ್ಲಿ ಕಂಡುಬಂದಂತೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸುತ್ತುಪೌಳಿ ನಿರ್ಮಾಣಕ್ಕೆ ಗುರುಬಲ ಇರುವುದು ಕಂಡುಬಂದಿದೆ. ಸುತ್ತುಪೌಳಿ ಈಗ ಇರುವ ಹಾಗೆ ಬಿಟ್ಟಲ್ಲಿ ಭವಿಷ್ಯದಲ್ಲಿ ಪೌಳಿಯ ಪತನವಾಗಬಹುದು ಎಂಬುದು ಕಂಡುಬಂದಿದ್ದು, ಪೌಳಿಯನ್ನು ಶ್ರೀ ಮಾಡುವುದಕ್ಕೆ ದೈವಾನುಗ್ರಹವಿದೆ. ಮರದಿಂದಲೇ ಪೌಳಿಯನ್ನು ಮಾಡತಕ್ಕದು ಎಂಬುದನ್ನು ಪ್ರಶ್ನೆ ಚಿಂತನೆಯ ಮೂಲಕ ತಿಳಿಸಲಾಗಿದೆ.

ದೇವಸ್ಥಾನದಲ್ಲಿ ಅನಾದಿ ಕಾಲದಿಂದ ಗಣಪತಿಗೆ ಗುಡಿ ಇಲ್ಲದೇ ಇದ್ದು, ದೇವಸ್ಥಾನದ ನೈರುತ್ಯ ದಿಕ್ಕಿನಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡಬಹುದು. ಗಣಪತಿ ಗುಡಿಗೆ ಶಿಲಾನ್ಯಾಸ ಮಾಡಿ ಪೌಳಿಯ ಕಾರ್ಯ ಪ್ರಾರಂಭ ಮಾಡುವುದು. ಪೌಳಿ ಕೆಲಸ ಪ್ರಾರಂಭ ಮಾಡುವಾಗ ಕಾಳಬೈರವ ಹಾಗೂ ಬಲ್ಲಾಳರಾಯ ವಿಗ್ರಹ ಬಾಲಾಯ ಪ್ರತಿಷ್ಠಾಪನೆ ಮಾಡಿ ಕೆಲಸ ನಂತರ ಮಾಡುವುದು, ಈಗ ಇರುವ ದಿಕ್ಕಿನಲ್ಲಿ ಪ್ರತಿಷ್ಠಾಪನೆ ಮಾಡುವುದು ಎಂದು ಪ್ರಶ್ನೆ ಚಿಂತನೆಯಲ್ಲಿ ಕಂಡುಬಂದಿದೆ.

ಕಾಶಿಕಟ್ಟೆ ಗಣಪತಿ ಗುಡಿಯ ಸುತ್ತಮುತ್ತ ಅಭಿವೃದ್ಧಿಪಡಿಸುವ ಬಗ್ಗೆ ಕಾಶಿಕಟ್ಟೆ ಗಣಪತಿ ಗುಡಿಯನ್ನು ವಾಸ್ತುಶಿಲ್ಪಕ್ಕೆ ಸರಿಯಾಗಿ ನಿರ್ಮಾಣ ಮಾಡಬೇಕು. ಅಲ್ಲದೇ ಅದೇ ಸ್ಥಳದಲ್ಲಿ ಪ್ರಶ್ನೆ ಮಾಡತಕ್ಕದ್ದು ಎಂದು ಪ್ರಶ್ನೆ ಚಿಂತನೆಯಲ್ಲಿ ಕಂಡುಬಂದಿದೆ.

ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ನೇತೃತ್ವ ವಹಿಸಿದ್ದರು. ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ಸಮಿತಿ ಸದಸ್ಯರಾದ ಅಶೋಕ್ ನೆಕ್ರಾಜೆ, ಅಜಿತ್ ಪಾಲೇರಿ, ಡಾ.ರು, ಮಹೇಶ್ ಕುಮಾರ್ ಕರಿಕಳ, ಸೌಮ್ಯಾಭರತ್, ಪ್ರವೀಣ್ ರೈ ಮರುವಂಜ, ಲೀಲಾ ಮನಮೋಹನ್, ಇಂಜಿನಿಯರ್‌ಗಳಾದ ಪ್ರಮೋದ್ ಕುಮಾರ್, ಉದಯ ಕುಮಾರ್, ಗ್ರಾಪಂ ಅಧ್ಯಕ್ಷೆ ಸುಜಾತಾ ಕಲ್ಲಾಜೆ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಸತೀಶ್ ಕೂಜುಗೋಡು, ಲೋಲಾಕ್ಷ ಕೈಕಂಬ, ಪ್ರಮುಖರಾದ ಶಿವರಾಮ ರೈ, ಕೃಷ್ಣ ಭಟ್, ಮಾಧವ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net