

ನೆಲಮಂಗಲ: ಪಟ್ಟಣದ ಪೇಟೆ ಬೀದಿಯಲ್ಲಿನ ಐತಿಹಾಸಿಕ ಪ್ರಸಿದ್ಧ ಶ್ರೀ ಕಾಶಿ ವಿಶ್ವೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು.
ರಥೋತ್ಸವದ ಪ್ರಯುಕ್ತ ದೇವಾಲಯದಲ್ಲಿನ ಶ್ರಿ ಕಾಶಿವಿಶ್ವೇಶ್ವರ ಸ್ವಾಮಿ ರುದ್ರಾಭಿಷೇಕ, ವಿಶೇಷ ಅಲಂಕಾರ ಪೂಜಾದಿ ಕಾರ್ಯ ನೆರವೇರಿಸಿದರೆ ಗಣೇಶ ಹಾಗೂ ಪಾರ್ವತಿ ದೇವಿ, ಸುಬ್ರಹ್ಮಣ್ಯ, ಚಂಡಿಕೇಶ್ವರಿ ಪರಿವಾರ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಜಾತ್ರಾ ಮಹೋತ್ಸವ ಪ್ರಯುಕ್ತ ಬೆಳಗಿನಿಂದ ಸಂಜೆವರೆಗೂ ಆಗಮಿಸಿದ ಭಕ್ತರು ಕಾಶಿ ವಿಶ್ವೇಶ್ವರ ಸ್ವಾಮಿ ದೇವರಿಗೆ ಪೂಜೆ ಸಲ್ಲಿಸಿದರು.
ಬಣ್ಣಬಣ್ಣದ ಹೂವುಗಳಿಂದ ಸಿಂಗರಿಸಿದ ಶ್ರಿ ಕಾಶಿ ವಿಶ್ವೇಶ್ವರಸ್ವಾಮಿ ಹಾಗೂ ಗಂಗೆ, ಗೌರಿಯ ಸುಂದರ ಉತ್ಸವಮೂರ್ತಿಗಳನ್ನು ರಥದಲ್ಲಿರಿಸಿದ ಭಕ್ತರು ರಥವನ್ನು ಎಳೆದು ಸಂಭ್ರಮಿಸಿದರು. ರಥದ ಬೀದಿಯಲ್ಲಿನ ಕೆಲ ನಿವಾಸಿಗಳು ಭಕ್ತರಿಗೆ ಸಿಹಿಪಾನಕ, ಮಜ್ಜಿಗೆ ಮತ್ತು ಕೋಸಂಬರಿ ವಿತರಣೆ ಮಾಡಿದರು. ಭಕ್ತರ ಸಹಕಾರದಲ್ಲಿ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿತ್ತು.
9 ದಿನಗಳ ಜಾತ್ರಾಮಹೋತ್ಸವ ಭಕ್ತರ ಸಹಕಾರದಲ್ಲಿ ನಾಂದಿ ಗ್ರಹ ಯಜ್ಞ ಪೂಜೆ, ಹಾಗೂ ಕಾಶಿ ಯಾತ್ರೆ ಸೇವೆ, ಉಯ್ಯಲೆ ಸೇವೆ, ನಾಕಬಲಿ ಉತ್ಸವ ಸೇವೆ, ಅಂಕುರಾರ್ಪಣೆ ಸೇವೆ ಸೇರಿ ಗಂಗೆಗೌರಿ ಅವರೊಂದಿಗೆ ಕಲ್ಯಾಣೋತ್ಸವ, ಮೆರವಣಿಗೆ ಮಾಡಿದ ಮರುದಿನ ಸ್ವಾಮಿಯ ಬ್ರಹ್ಮರಥೋತ್ಸವ ನಡೆಯಲಿದೆ. ಬುಧವಾರ ಮೃಗಯಾತ್ರೆ ಸೇವೆ, ಗುರುವಾರ ವಸಂತೋತ್ಸವ ಸೇವೆ, ತೀರ್ಥಸ್ನಾನ ಸೇವೆ, ಶುಕ್ರವಾರ ದವನೋತ್ಸವ, ಶನಿವಾರ ಶಯನೋತ್ಸವ ಮಾಡಿದ ಬಳಿಕ ಜಾತ್ರೆ ಮುಕ್ತಾಯಗೊಳ್ಳಲಿದೆ.
ತಹಸೀಲ್ದಾರ್ ಎಂ.ಶ್ರೀನಿವಾಸಯ್ಯ, ಶಿರಸ್ಥೆದಾರ್ ಮಂಜುನಾಥ್, ಪಾರುಪತ್ತೆದಾರ ಶ್ರೀನಿವಾಸ್, ಪುರಸಭೆ ಮುಖ್ಯಾಧಿಕಾರಿ ಜಯಪ್ಪ, ಪುರಸಭೆ ಸದಸ್ಯ ಪುರುಷೋತ್ತಮ್, ಎನ್.ಎಸ್.ಪೂರ್ಣಿಮಾ ಬೇಟಿ ನೀಡಿದ್ದರು. ಪ್ರಧಾನ ಅರ್ಚಕ ಎಸ್.ಗಂಗಾಧರ್‌ಶರ್ಮಾ, ಆಗಮಿಕ ಡಾ.ಸೋಮಸುಂದರ್ ದೀಕ್ಷಿತ್, ಕಾಶಿವಿಶ್ವೇಶ್ವರ ಸ್ವಾಮಿ ಯುವಕ ಸಂಘದ ಪದಾಧಿಕಾರಿ, ಸದಸ್ಯರು ಉಪಸ್ಥಿತರಿದ್ದರು.