ಕಾಶೀ ಮಠಾಧೀಶರ ಚಾತುರ್ಮಾಸ ವ್ರತಾರಂಭ

Kashi swamiji chaturmasa
Published on

ಮಂಗಳೂರು: ಶ್ರೀ ಕಾಶೀಮಠದ ವಿದ್ಯಮಾನ ಪೀಠಾಧಿಪತಿ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿ ಸೋಮವಾರ ಆಷಾಢ ಬಹುಳ ಪಂಚಮಿಯಂದು ನಗರದ ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಚಾತುರ್ಮಾಸ ವ್ರತ ಸ್ವೀಕರಿಸಿದರು.

ಇದಕ್ಕೂ ಮುನ್ನ ಶ್ರೀ ಸಂಸ್ಥಾನದ ದೇವರಿಗೆ ಪಂಚಾಮೃತ ಅಭಿಷೇಕ, ಊಧ್ವರ್ಜನ, ಶತಕಲಶಾಭಿಷೇಕ ಪವಮಾನಾಭಿಷೇಕ, ಕನಕಾಭಿಷೇಕ, ಮೃತ್ತಿಕಾನಯನ, ತಪ್ತ ಮುದ್ರಾಪ್ರದಾನ, ಮಹಾಪೂಜೆ, ಮೃತ್ತಿಕಾ ಪೂಜೆ ನೆರವೇರಿಸಿದರು. ಬಳಿಕ ಸ್ವಾಮೀಜಿ ಆಶೀರ್ವಚನ ನೀಡಿದರು.

ದೇವಳದ ಮೊಕ್ತೇಸರರಾದ ಅಡಿಗೆ ಬಾಲಕೃಷ್ಣ ಶೆಣೈ, ಸಾಹುಕಾರ್ ಎಂ.ಕಿರಣ್ ಪೈ, ಎಂ.ಸತೀಶ್ ಪ್ರಭು, ಕೆ. ಗಣೇಶ್ ಕಾಮತ್, ಎಂ.ಜಗನ್ನಾಥ ಕಾಮತ್, ಚಾತುರ್ಮಾಸ ಸಮಿತಿ ಗೌರವಾಧ್ಯಕ್ಷ ಮುಂಡ್ಕೂರು ರಾಮದಾಸ್ ಕಾಮತ್, ಅಧ್ಯಕ್ಷ ಎಂ. ಪದ್ಮನಾಭ ಪೈ, ಮುಖ್ಯ ಸಂಯೋಜಕ ಜಿ.ಸುರೇಶ ವಿ. ಕಾಮತ್, ಕಾರ್ಯದರ್ಶಿ ತೋನ್ಸೆ ಗಣಪತಿ ಪೈ, ಯು.ಸುದರ್ಶನ್ ಮಲ್ಯ, ಕೆ. ಗುರುದತ್ ಕಾಮತ್, ಕೋಶಾಧಿಕಾರಿ ಬಿ.ಆರ್.ಭಟ್, ಮಾರೂರ್ ಶಶಿಧರ್ ಪೈ, ಕೊಚ್ಚಿ ತಿರುಮಲ ದೇವಳದ ಮೊಕ್ತೇಸರರು, ಮುಂಬೈ ಜಿಎಸ್‌ಬಿ ಸೇವಾಮಂಡಳ ಪದಾಧಿಕಾರಿಗಳು, ದೆಹಲಿ ಸಾರಸ್ವತ ಸಮಾಜದ ಪದಾಧಿಕಾರಿಗಳು, ದಕ್ಷಿಣ ಕನ್ನಡದ ವಿವಿಧ ದೇವಳಗಳ ಮೊಕ್ತೇಸರರು, ಶಾಖಾ ಮಠದ ಪದಾಧಿಕಾರಿಗಳು ಹಾಗೂ ಭಕ್ತರು ಉಪಸ್ಥಿತರಿದ್ದರು.

ಚಾತುರ್ಮಾಸ ಅವಧಿಯಲ್ಲಿ ಹಬ್ಬ, ವಿಶೇಷ ಪರ್ವ ದಿನಗಳಲ್ಲಿ ಧಾರ್ಮಿಕ ಕಾರ್ಯಕ್ರಮ, ಭಜನಾ ಸಪ್ತಾಹ ನೆರವೇರಲಿದೆ. ಪ್ರತಿ ಶುಕ್ರವಾರ, ಶನಿವಾರ ಹಾಗೂ ಭಾನುವಾರ ಸಾಯಂಕಾಲದಿಂದ ರಾತ್ರಿ ವರೆಗೆ ಗೌಡಸಾರಸ್ವತ ಸಮಾಜದ ಕಲಾವಿದರಿಂದ ಭಕ್ತಿ ಸಂಗೀತ, ನಾಟಕ, ಭರತನಾಟ್ಯ ಕಾರ್ಯಕ್ರಮ ಆಯೋಜನೆಗೊಳ್ಳಲಿದೆ. ಅಷ್ಟಮಿ ಸಂದರ್ಭದಲ್ಲಿ ಮಕ್ಕಳಿಗೆ ಕೃಷ್ಣವೇಷ ಸ್ಪರ್ಧೆ, ಸ್ವಚ್ಛತಾ ಅಭಿಯಾನ, ಉದ್ಯೋಗ ಮಾಹಿತಿ, ವೈದ್ಯಕೀಯ ಶಿಬಿರ, ಸಾಂಪ್ರದಾಯಿಕ ಕ್ರೀಡಾ ಸ್ಪರ್ಧೆ, ಭಜನೆ, ಸ್ತೋತ್ರ ಹಾಗೂ ಚಿತ್ರ ರಚನಾ ಸ್ಪರ್ಧೆ, ರಂಗವಲ್ಲಿ ಸ್ಪರ್ಧೆ, ಸಂಗೀತ ಸ್ಪರ್ಧೆ, ಉದ್ಯೋಗ ಮೇಳ, ಗೋಸಂರಕ್ಷಣೆ, ಸಂಧ್ಯಾ ವಂದನ ಶಿಬಿರ, ಭಾಗವತ ಸಪ್ತಾಹ, ನಗರ ಭಜನೆ ನೆರವೇರಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net