

ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರದ ವಿನಾಯಕ ಕಾಲನಿಯಲ್ಲಿರುವ ಹಿರಿಯ ವಕೀಲ ಜಿ.ಆರ್. ಅಂದಾನಿಮಠ ಅವರ ನಿವಾಸಕ್ಕೆ ಕಾಶಿ ಜ್ಞಾನಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯರು ಬುಧವಾರ ಭೇಟಿ ನೀಡಿ, ಅಂದಾನಿಮಠ ಅವರ ಆರೋಗ್ಯ ವಿಚಾರಿಸಿದರು.
ಅಂದಾನಿಮಠ ಅವರು ತಮ್ಮ ವೃತ್ತಿಯೊಂದಿಗೆ ಸಾಮಾಜಿಕ ಕೈಂಕರ್ಯಗಳಲ್ಲಿಯೂ ತೊಡಗಿಸಿಕೊಂಡು ಸಮಯ ಪಾಲನೆಗೆ ವ್ಯಾಪಕ ಮಹತ್ವ ನೀಡುವುದರ ಜತೆಗೆ ತಮ್ಮದೇ ಆದ ಮೌಲಿಕ ವ್ಯಕ್ತಿತ್ವ ಪಡೆದಿದ್ದಾರೆ. 89 ವಯಸ್ಸಿನ ಅವರು ತಮ್ಮ ವೃತ್ತಿಗೆ ಸಂಬಂಧಿಸಿ ವಿಭಿನ್ನ ಮೊಕದ್ದಮೆಗಳಿಗೆ ಪೂರಕವಾಗಿ ಅನೇಕ ಕಿರಿಯ ವಕೀಲರಿಗೆ ಕಾನೂನು ಮಾರ್ಗದರ್ಶನ ನೀಡಿದ್ದಾರೆ. ವಕೀಲರು ಬೇಗ ಗುಣಮುಖವಾಗುವಂತೆ ಜಗದ್ಗುರುಗಳು ಶುಭ ಹಾರೈಸಿ ಆಶೀರ್ವದಿಸಿದರು. ಪ್ರಕಾಶ ಅಂದಾನಿಮಠ, ಜ್ಯೋತಿ ಸಾಲಿಮಠ, ಕಿರಣ ಅಂದಾನಿಮಠ ಇತರರು ಇದ್ದರು.