

ಗದಗ: ಸೋಹಂ ಭಾವನೆಯೇ ಭಾವಲಿಂಗ ಎಂಬ ವಿಚಾರವನ್ನು ಶ್ರೀ ಕಾಶಿ ಜಗದ್ಗುರು ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ತಮ್ಮ ಆಶೀರ್ವಚನದಲ್ಲಿ ತಿಳಿಸಿದರು. ಗದಗ ನಗರದ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಆಷಾಡ ಮಾಸದ ನಿಮಿತ್ತವಾಗಿ ಹಮ್ಮಿಕೊಂಡಿರುವ ಶ್ರೀ ಸಿದ್ಧಾಂತ ಶಿಖಾಮಣಿಯ ಆಧ್ಯಾತ್ಮಿಕ ಆಶೀರ್ವಚನ ವೇದಿಕೆಯಿಂದ ಈ ವಿಚಾರವನ್ನು ತಿಳಿಸಿದರು.
ಸನಾತನ ವೀರಶೈವ ಧರ್ಮದಲ್ಲಿ ಪ್ರತಿಯೊಬ್ಬ ವೀರಶೈವನಿಗೆ ಮೂರು ಲಿಂಗಗಳ ಪೂಜೆಯನ್ನು ಮಾಡುವ ವಿಧಾನವಿದೆ. ಮೊದಲನೆಯದು ಇಷ್ಟಲಿಂಗ, ಎರಡನೆಯದು ಪ್ರಾಣಲಿಂಗ, ಮೂರನೆಯದೇ ಭಾವಲಿಂಗವು. ಶ್ರೀ ಸದ್ಗುರುವು ತನ್ನ ಶಿಷ್ಯನಿಗೆ ದೀಕ್ಷಾ ಸಂಸ್ಕಾರವನ್ನು ಮಾಡುವಾಗ ಕ್ರಿಯಾ ದೀಕ್ಷೆಯ ಮುಖಾಂತರ ಇಷ್ಟು ಲಿಂಗವನ್ನು ಅನುಗ್ರಹಿಸುತ್ತಾನೆ. ಅದೇ ಸದ್ಗುರುವೇ ಮಂತ್ರಿ ದೀಕ್ಷೆಯನ್ನು ಮಾಡುವಾಗ ನಮ್ಮ ಸೂಕ್ಷ್ಮ ಶರೀರದಲ್ಲಿರುವ ಆತ್ಮದ ಚಿದ್ರೂಪವನ್ನೇ ಪ್ರಾಣಲಿಂಗವೆಂಬುದಾಗಿ ಉಪದೇಶಿಸಿ ಮಹಾಮಂತ್ರವನ್ನು ಉಪದೇಶಿಸುತ್ತಾನೆ. ಅದೇ ಸದ್ಗುರುವೆ ನಮ್ಮ ಕಾರಣ ಶರೀರದಲ್ಲಿರುವ ಆನಂದ ರೂಪವಾದ ಆತ್ಮನನ್ನೇ ಪರಮಾತ್ಮನೆಂಬುದಾಗಿ ಬೋಧಿಸಿ ನಮ್ಮಲ್ಲಿ ಸೋಹಂ ಭಾವನೆಯನ್ನು ಪ್ರಾದುರ್ಭಾವಗೊಳಿಸುತ್ತಾನೆ. ಈ ಸೋಹಂ ಭಾವನೆಯೇ ಭಾವಲಿಂಗವು. ಲಿಂಗದ ಪೂಜೆಗೆ ಬೇರೆ ಯಾವ ವಸ್ತುಗಳ ಬಳಕೆ ಇರುವುದಿಲ್ಲ. ಸೋಹಂ ಎಂಬ ಭಾವನೆಯನ್ನೇ ಪುನಃ ಪುನಃ ಆವೃತ್ತಿಗೊಳಿಸಬೇಕಾಗುತ್ತದೆ ಈ ಆವರ್ತನೆಯಿಂದ ನನ್ನ ಆತ್ಮವೇ ಪರಮಾತ್ಮ ಎಂಬ ದೃಢವಾದ ಭಾವನೆಯು ಸಾಧಕನ ಮನುಸ್ಸಿನಲ್ಲಿ ಮೂಡುವದು. ಇದಕ್ಕೇನೆ ಭಾವಲಿಂಗ ಅರ್ಚನೆ ಎಂದು ಕರೆಯುತ್ತಾರೆ. ಎಂಬುದಾಗಿ ಶ್ರೀ ಜಗದ್ಗುರುಗಳವರು ತಮ್ಮ ಆಶೀರ್ವಚನದಲ್ಲಿ ಭಾವಲಿಂಗದ ಸ್ವರೂಪ ಮತ್ತು ಭಾವಲಿಂಗರಾಧನೆಯ ವಿಧಾನವನ್ನು ತಿಳಿಸಿಕೊಟ್ಟರು.