

ಕಾರವಾರ: ಹೊನ್ನಾವರ ಕಾಸರಕೋಡು ಟೊಂಕ ಬಂದರು ನಿರ್ಮಾಣ ವಿರೋಧಿಸಿ ನಡೆಯುತ್ತಿರುವ ಹೋರಾಟದ ವಿಷಯ ವಿಧಾನ ಪರಿಷತ್‌ನಲ್ಲಿ ಬುಧವಾರ ಪ್ರಸ್ತಾಪವಾಯಿತು.
ವಿಧಾನ ಪರಿಷತ್ ನಾನ ನಿರ್ದೇಶಿತ ಸದಸ್ಯ ತಿಪ್ಪಣ್ಣ ಕಮಕನೂರು ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದರು. ಹೊನ್ನಾವರ ಕಾಸರಕೋಡು ಸಮುದ್ರ ತೀರದಲ್ಲಿ ಖಾಸಗಿ ಕಂಪನಿ ವಾಣಿಜ್ಯ ಬಂದರು ನಿರ್ಮಾಣ ಮಾಡಲು ಹೊರಟಿದೆ. ಈಗ ಉಪ ಮುಖ್ಯಮಂತ್ರಿಗಳಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕಾಸಕೋಡು ಟೊಂಕ ಪ್ರದೇಶಕ್ಕೆ ಭೇಟಿ ನೀಡಿ ಮೀನುಗಾರರ ಸಮಸ್ಯೆಯನ್ನು ಖುದ್ದಾಗಿ ಅರಿತು ಸ್ಪಂದಿಸಿದ್ದರು. ಅದು ಅವರ ಸಂಘಟನೆಯ ಶಕ್ತಿ ಎಂಥದ್ದು ಎಂಬುದನ್ನು ತೋರಿಸುತ್ತದೆ. ತಮ್ಮ ಸರ್ಕಾರ ಅದಿಕಾರಕ್ಕೆ ಬಂದರೆ, ಅಲ್ಲಿ ಬಂದರು ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಬಂದರಿಗೆ ವಿರೋಧ ವ್ಯಕ್ತಪಡಿಸುತ್ತಿರುವ ಮೀನುಗಾರರಿಗೆ ಭರವಸೆ ನೀಡಿದ್ದರು.
ಈಗಲೂ ಅಲ್ಲಿ ಬಂದರು ವಿರೋಧಿಸಿ ಭಾರೀ ಪ್ರತಿಭಟನೆ ನಡೆಯುತ್ತಿದೆ. ಪೊಲೀಸರು ಪ್ರತಿಭಟನಾಕಾರರ ಮೇಲೆ ಸತ್ಯಕ್ಕೆ ದೂರವಾದ ಕಲಂಗಳನ್ನು ದಾಖಲು ಮಾಡಿ, ಅವರನ್ನು ಜೈಲಿಗಟ್ಟುತ್ತಿದ್ದಾರೆ. ಅಲ್ಲಿನ ಪರಿಸ್ಥಿತಿ ಈಗ ಹದಗೆಟ್ಟಿದೆ. ಉತ್ತರ ಕನ್ನಡ ಕರಾವಳಿ ಖಾಸಗಿಯವರಿಗೆ ಮಾರಾಟವಾಗಿದೆ. ನೂರಾರು ವರ್ಷದಿಂದ ಕರಾವಳಿಯಲ್ಲಿ ವಾಸವಿರುವ ಮೀನುಗಾರರನ್ನು ಒಕ್ಕಲೆಬ್ಬಿಸುತ್ತಿದ್ದಾರೆ. ಇದರಿಂದ ಕರಾವಳಿಯ ಮೀನುಗಾರರು ಬೀದಿ ಪಾಲಾಗಿದ್ದಾರೆ. ಮೀನುಗಾರಿಕೆ ಸಚಿವರು ಮೀನುಗಾರರ ರಕ್ಷಣೆಗೆ ಬರಬೇಕಾಗಿದೆ.
ನೂರಾರು ವರ್ಷಗಳಿಂದ ಮೀನುಗಾರಿಕೆಯನ್ನು ಕಸಬು ಮಾಡಿಕೊಂಡು ಮೀನುಗಾರರು ಜೀವನ ಸಾಗಿಸುತ್ತ ಬರುತ್ತಿದ್ದಾರೆ. ಬಂದರು ನಿರ್ಮಾಣದ ಹೆಸರಿನಲ್ಲಿ ಅವರನ್ನು ಒಕ್ಕಲೆಬ್ಬಿಸುವುದರಿಂದ ಮೀನುಗಾರಿಕೆಯನ್ನು ನಂಬಿಕೊಂಡು ಬಂದಿರುವ ಮೀನುಗಾರರು, ಮನೆ, ಜಾಗ, ಕಳೆದುಕೊಂಡು ತ್ರಿಶಂಕುಗಳಾಗುತ್ತಾರೆ. ಸರ್ಕಾರ ತಕ್ಷಣ ಮಧ್ಯ ಪ್ರವೇಶಿಸಿ ಮೀನುಗಾರರನ್ನು ರಕ್ಷಿಸಬೇಕು ಎಂದು ತಿಪ್ಪಣ್ಣ ಮನವಿ ಮಾಡಿದರು. ಈ ಸಂಬಂಧ ಸಂಬಂಧಪಟ್ಟ ಸಚಿವರಿಂದ ಲಿಖಿತ ಉತ್ತರ ನೀಡುವ ಭರವಸೆ ವಿಧಾನಸಭೆಯಲ್ಲಿ ಸಿಕ್ಕಿದೆ.
ಏನಾಗಿತ್ತು ...?
ಹೊನ್ನಾವರದಲ್ಲಿ ಶರಾವತಿ ನದಿ ಸಮುದ್ರ ಸೇರುವ ಅಳಿವೆ ಪ್ರದೇಶದಲ್ಲಿ ವಾಣಿಜ್ಯ ಬಂದರು ನಿರ್ಮಾಣಕ್ಕೆ ಹೊನ್ನಾವರ ಪೋರ್ಟ್ ಪ್ರೈ ಲಿ (ಎಚ್‌ಪಿಪಿಎಲ್) ಹೆಸರಿನ ಕಂಪನಿಗೆ ಸರ್ಕಾರ ಜಾಗವನ್ನು ಲೀಸ್ ನೀಡಿ 2010 ರಲ್ಲಿ ಒಪ್ಪಂದ ಮಾಡಿಕೊಂಡಿತ್ತು. 2012 ರಲ್ಲಿ ಬಂದರು ನಿರ್ಮಾಣಕ್ಕೆ ಪರಿಸರ ಅನುಮತಿ ಪಡೆಯಲಾಗಿತ್ತು. ಸಮುದ್ರದಲ್ಲಿ ಎರಡು ಕಡೆ ಸುಮಾರು 850 ಮೀಟರ್ ಉದ್ದದ ಅಲೆ ತಡೆಗೋಡೆ ನಿರ್ಮಾಣ ಮಾಡಿಕೊಂಡು ಮೊದಲ ಹಂತದಲ್ಲಿ 400 ಮೀಟರ್ ವಾರ್ಫ್, 15 ಮೀಟರ್ ಆಳದ ಹಡಗು ಓಡಾಟದ ಕಾಲುವೆ ನಿರ್ಮಿಸಿ ಬಂದರು ಕಾರ್ಯಾಚರಣೆ ಮಾಡಲು ಕಂಪನಿ ನಿರ್ಣಯಿಸಿತ್ತು.
ಆದರೆ, ಸ್ಥಳೀಯರು ಬಂದರು ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಕಾನೂನು ಹೋರಾಟ ನಡೆಸಿದ್ದರು. ಹಲವು ಬಾರಿ ಪೊಲೀಸರು, ಸ್ಥಳೀಯರ ನಡುವೆ ಗಲಾಟೆಗಳು ನಡೆದವು. ಈಗ 2024 ರ ಡಿಸೆಂಬರ್ 31 ರಂದು ಬಂದರು ನಿರ್ಮಾಣಕ್ಕೆ ಪರಿಸರ ಪರವಾನಗಿಯನ್ನು ನವೀಕರಿಸಲಾಗಿದೆ. ಅಲ್ಲದೇ ರಾಷ್ಟಿçÃಯ ಹೆದ್ದಾರಿ ಹಾಗೂ ರೈಲ್ವೆ ಸಂಪರ್ಕಕ್ಕೂ ಪರಿಸರ ಪರವಾನಗಿ ನೀಡಲಾಗಿದೆ.
ಬಂದರಿನ ಹೆದ್ದಾರಿ, ರೈಲ್ವೆ ಮಾರ್ಗ ನಿರ್ಮಾಣಕ್ಕೆ ಸುಮಾರು 250 ಕ್ಕೂ ಹೆಚ್ಚು ಮೀನುಗಾರರು ಮನೆಗಳನ್ನು ಕಳೆದುಕೊಳ್ಳುವ ಆತಂಕವಿದೆ. ಇದರಿಂದ ಸ್ಥಳೀಯರು ಹೆದ್ದಾರಿ ಸರ್ವೇಗೂ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಫೆ.25 ರಂದು ನಿಷೇಧಾಜ್ಞೆ ಜಾರಿ ಮಾಡಿ, ಪೊಲೀಸ್ ಸರ್ಪಗಾವಲಿನಲ್ಲಿ ಸರ್ವೇ ಕಾರ್ಯ ಮಾಡಲಾಗಿದೆ. ನಿಷೇಧಾಜ್ಞೆಯ ಇರುವಾಗಲೇ ಪ್ರತಿಭಟನೆ ನಡೆಸಿದ 22 ಮೀನುಗಾರರನ್ನು ಬಂಽಸಿ, ಅವರ ಮೇಲೆ ಜಾಮೀನು ರಹಿತ ಕಲಂಗಳನ್ನು ಹಾಕಿ ಜೈಲಿಗೆ ಕಳಿಸಲಾಗಿದೆ. ಜಿಲ್ಲೆಯ ಮೀನುಗಾರರಿಂದ ಈ ಕ್ರಮದ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.