ಕಾಸರಗೋಡು ರೈಲು ನಿಲ್ದಾಣದಲ್ಲಿ ಕನ್ನಡ ಮಾಯ

20
Published on

ಕುಂಬಳೆ: ಭಾಷಾ ಅಲ್ಪಸಂಖ್ಯಾತ ಪ್ರದೇಶವಾದ ಕಾಸರಗೋಡಿನಲ್ಲಿ ಸರ್ಕಾರಿ ಕಚೇರಿ, ಸಂಸ್ಥೆಗಳಲ್ಲಿ ಕನ್ನಡದಲ್ಲೂ ನಾಮ ಫಲಕಗಳಿರಬೇಕೆಂದು ಇದ್ದರೂ ಕಾಸರಗೋಡು ರೈಲು ನಿಲ್ದಾಣದಲ್ಲಿ ಕನ್ನಡದ ನಾಮಫಲಕಗಳೇ ಇಲ್ಲ. ಕಾಸರಗೋಡು ರೈಲು ನಿಲ್ದಾಣದಲ್ಲಿ ಕನ್ನಡವನ್ನು ಸಂಪೂರ್ಣವಾಗಿ ಕಿತ್ತು ಹಾಕಲಾಗಿದೆ. ರೈಲು ನಿಲ್ದಾಣದ ವಿವಿಧೆಡೆೆ ಸ್ಥಾಪಿಸಲಾದ ನಾಮಫಲಕಗಳು ಇಂಗ್ಲಿಷ್, ಹಿಂದಿ ಮತ್ತು ಮಲಯಾಳದಲ್ಲಿವೆ. ಕೆಲವು ವರ್ಷಗಳ ಹಿಂದಿನವರೆಗೆ ಕನ್ನಡದಲ್ಲೂ ನಾಮಫಲಕಗಳಿದ್ದವು. ಬಹುತೇಕ ಮಂದಿ ಕನ್ನಡಿಗರು ಈ ರೈಲು ನಿಲ್ದಾಣ ಆಶ್ರಯಿಸಿದ್ದರೂ ಕನ್ನಡದಲ್ಲಿ ನಾಮಫಲಕಗಳಿಲ್ಲದಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ರೈಲ್ವೇ ಪ್ಲಾಟ್‌ಫಾರ್ಮ್‌ನ ವಿವಿಧೆಡೆ ಹಲವು ನಾಮಫಲಕಗಳಿವೆ. ಅವುಗಳಲ್ಲಿ ಎಲ್ಲಿಯೂ ಕನ್ನಡ ಬಳಸಿಲ್ಲ. ಕನ್ನಡ ಮಾತ್ರ ಓದಲು ತಿಳಿದಿರುವ ಪ್ರಯಾಣಿಕರಿಗೆ ತೀವ್ರ ಸಮಸ್ಯೆಯಾಗಿದೆ ಎಂಬ ಅಭಿಪ್ರಾಯ ಕೇಳಿಬಂದಿದೆ. ಇತ್ತೀಚಿನ ಕೆಲವು ವರ್ಷಗಳಿಂದ ಕನ್ನಡ ನಾಮಫಲಕ ಕಣ್ಮರೆಯಾಗಿದೆ.

ಕಾಸರಗೋಡು ರೈಲು ನಿಲ್ದಾಣದಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದು, ಕನ್ನಡದಲ್ಲೂ ನಾಮಫಲಕ ಅಳವಡಿಕೆಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಬೇಕಾಗಿದೆ. ಕನ್ನಡ ಪರ ಸಂಸ್ಥೆಗಳು ಮುತುವರ್ಜಿ ವಹಿಸಬೇಕಾಗಿದೆ ಎಂಬ ಅಭಿಪ್ರಾಯ ಕೇಳಿ ಬಂದಿದೆ. ಕನ್ನಡಿಗರು ಕನ್ನಡ ನಾಮಫಲಕಕ್ಕೆ ಬೇಡಿಕೆ ಸಲ್ಲಿಸದಿದ್ದಲ್ಲಿ ಕುಂಬಳೆ, ಉಪ್ಪಳ, ಮಂಜೇಶ್ವರ ಮೊದಲಾದೆಡೆಗಳಲ್ಲಿರುವ ಕನ್ನಡ ನಾಮ ಫಲಕಗಳು ಕಣ್ಮರೆಯಾದರೂ ಅಚ್ಚರಿ ಪಡಬೇಕಾಗಿಲ್ಲ !

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net