ಕಾಸರಗೋಡು ಜಿಪಂ ಮಿಗತೆ ಬಜೆಟ್: ಬಡತನ ನಿವಾರಣೆ, ಕೃಷಿಗೆ ಆದ್ಯತೆ

Published on

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಜಿಲ್ಲಾ ಪಂಚಾಯಿತಿ 2025-26ನೇ ಸಾಲಿನ ಬಜೆಟನ್ನು ಜಿಪಂ ಉಪಾಧ್ಯಕ್ಷ ಶಾನವಾಜ್ ಪಾದೂರ್ ಜಿಪಂ ಸಭಾಂಗಣದಲ್ಲಿ ಬುಧವಾರ ಮಂಡಿಸಿದರು. ಕಡುಬಡತನ ನಿವಾರಣೆಗೆ ಮೊದಲ ಆದ್ಯತೆ ನೀಡುವ ನಿಟ್ಟಿನಲ್ಲಿ ಜಿಪಂ ವತಿಯಿಂದ ಮಂಡಿಸಿದ ಮಿಗತೆ ಬಜೆಟ್ ಇದಾಗಿದೆ.

ಜಿಪಂ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಮಾತನಾಡಿ, ಮೂಲಸೌಕರ್ಯ ಅಭಿವೃದ್ಧಿ ಮಾತ್ರವಲ್ಲದೆ ತಲಾ ಆದಾಯ ಹೆಚ್ಚಿಸುವ ಮೂಲಕ ಜನರ ಜೀವನ ಮಟ್ಟ ಸುಧಾರಿಸಲು ಬಜೆಟ್‌ನಲ್ಲಿ ಶ್ರಮಿಸಲಾಗುವುದು. ವೃದ್ಧರಿಗೆ ಉತ್ತಮ ಚಿಕಿತ್ಸೆ, ಆರೈಕೆ ಖಾತ್ರಿಪಡಿಸಲಾಗುವುದು. ಈ ನಿಟ್ಟಿನಲ್ಲಿ ಪಾಲಿಯೇಟವ್ ಗ್ರಿಡ್ ಸ್ಥಾಪಿಸಲಾಗುವುದು. ಮರೆವು ರೋಗಿಗಳಿಗೆ ವಿಶೇಷ ಕೇಂದ್ರ ಆರಂಭಿಸಲಾಗುವುದು. ವಿಜ್ಞಾನ ಕೇರಳ ಅತ್ಯುತ್ತಮ ಯೋಜನೆ ನಡೆಸುವುದರ ಜತೆಗೆ ಜಿಪಂ ನೇತೃತ್ವದಲ್ಲಿ ಕೆಎಸ್‌ಆರ್‌ಟಿಸಿ, ಬಿಆರ್‌ಡಿಸಿ ಸಂಯೋಜಿಸಿಕೊಂಡು ಕಾಸರಗೋಡು ಸಫಾರಿ ಆರಂಭಿಸಲಾಗುವುದು. ನವೆಂಬರ್ 1ರೊಳಗೆ ಕಾಸರಗೋಡನ್ನು ಕಡುಬಡವರಿಲ್ಲದ ಜಿಲ್ಲೆಯಾಗಿ ಮಾರ್ಪಡಿಸಲು ಕ್ರಮ ಕೈಗೊಳ್ಳಲಾಗುವುದು. ಮಾದಕದ್ರವ್ಯ ವ್ಯಸನದಿಂದ ಮುಕ್ತಗೊಳಿಸಲು ‘ರಿಥಂ’ ಎಂಬ ಸಮಗ್ರ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದರು.

ಪರಪ್ಪ ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಎಂ.ಲಕ್ಷ್ಮೀ, ಕಾರಡ್ಕ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಸಿಜಿ ಮ್ಯಾಥ್ಯೂ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ಶಕುಂತಲಾ, ಎಸ್.ಎನ್.ಸರಿತಾ, ಎಂ.ಮನು, ಜಿಪಂ ಸದಸ್ಯರಾದ ಶಿನೋಜ್ ಚಾಕೊ, ಜೋಮೋನ್ ಜೋಸ್, ಎಂ.ಶೈಲಜಾ ಭಟ್, ಸ್ಥಳೀಯಾಡಳಿತ ಇಲಾಖೆ ಜಂಟಿ ನಿರ್ದೇಶಕ ಜಿ.ಸುಧಾಕರನ್, ಜಿಪಂ ಯೋಜನಾ ಸಮಿತಿ ಉಪಾಧ್ಯಕ್ಷ ಕೆ.ಬಾಲಕೃಷ್ಣನ್, ಜಿಲ್ಲಾ ಕೈಗಾರಿಕಾ ಕೇಂದ್ರ ಪ್ರಧಾನ ವ್ಯವಸ್ಥಾಪಕ ಕೆ.ಸಜಿತ್ ಕುಮಾರ್, ಜಿಪಂ ಕಾರ್ಯದರ್ಶಿ ಶ್ಯಾಮಲಕ್ಷ್ಮೀ ಮೊದಲಾದವರು ಉಪಸ್ಥಿತರಿದ್ದರು.

ಬಜೆಟ್‌ಗೆ ಅನುಮೋದನೆ ನೀಡಲು ತೀರ್ಮಾನ

ಜಿಪಂ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆಯಲ್ಲಿ ಬಜೆಟ್ ಮಂಡಿಸಲಾಗಿದ್ದು, ಮಾ.13ರಂದು ಜಿಪಂ ಸಭೆ ನಂತರ ಬಜೆಟ್‌ಗೆ ಅನುಮೋದನೆ ನೀಡಲು ತೀರ್ಮಾನಿಸಲಾಯಿತು. ಒಟ್ಟು 97,27,61,211 ರೂ. ನಿರೀಕ್ಷಿತ ಆದಾಯ, 96,01,21,000 ರೂ. ನಿರೀಕ್ಷಿತ ವೆಚ್ಚ ಒಳಗೊಂಡಂತೆ 1,26,40,211 ರೂ. ಮೊತ್ತದ ಮಿಗತೆ ಬಜೆಟ್ ಶಾನವಾಜ್ ಪಾದೂರು ಮಂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net