

ಕಾಸರಗೋಡು: ಮಕ್ಕಳಿಗೆ ಉದ್ಯೋಗ ಕೇಂದ್ರಿತ ತರಬೇತಿ ಖಚಿತಪಡಿಸಿಕೊಳ್ಳುವುದರ ಜತೆಗೆ ಸ್ವಾಶ್ರಯ ಕಾಲೇಜುಗಳು ಹಾಗೂ ಕಲಾ ಮತ್ತು ವಿಜ್ಞಾನ ಕಾಲೇಜುಗಳಲ್ಲಿ ಉದ್ಯೋಗ ಹುಡುಕಲು ವಿಶೇಷ ಪರಿಗಣನೆ ನೀಡಲಾಗುವುದು ಎಂದು ಹಣಕಾಸು ಮಾಜಿ ಸಚಿವ ಡಾ.ಟಿ.ಎಂ.ಥಾಮಸ್ ಐಸಾಕ್ ಹೇಳಿದರು.
ಜಿಲ್ಲಾ ಯೋಜನಾ ಸಮಿತಿ ಸಭಾಂಗಣದಲ್ಲಿ ವಿಜ್ಞಾನ ಕೇರಳಂ ಕಾಸರಗೋಡು ಜಿಲ್ಲಾ ಮಿಷನ್ ಕಚೇರಿ ಮತ್ತು ಕನ್ವರ್ಜೆನ್ಸ್ ಸಭೆ ಉದ್ಘಾಟಿಸಿ ಮಾತನಾಡಿದರು.
ಸ್ಥಳೀಯವಾಗಿ ಮಹಿಳೆಯರಿಗೆ ಉದ್ಯೋಗ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಮಹಿಳೆಯರು ಆರ್ಥಿಕ ಸ್ವಾವಲಂಬನೆ ಸಾಧಿಸುವುದರಿಂದ ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೆ ಕಾರಣವಾಗುತ್ತದೆ. ಇದಕ್ಕಾಗಿ ಮಹಿಳೆಯರನ್ನು ಕೇಂದ್ರೀಕರಿಸಿ ವಿಜ್ಞಾನ ಕೇರಳ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ಹಾಸಿಗೆ ಹಿಡಿದ ರೋಗಿಗಳಿಗೆ ಅಗತ್ಯ ನೆರವು ನೀಡಲು ಉಪಶಮನ ಆರೋಗ್ಯ ಸೇವೆಗೆ ಸಂಬಂಧಿಸಿದಂತೆ ಉದ್ಯೋಗ ಒದಗಿಸಲಾಗುವುದು ಎಂದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎಂ.ರಾಜಗೋಪಾಲನ್, ಜಿಪಂ ಉಪಾಧ್ಯಕ್ಷ ಶಾನವಾಸ್ ಪಾದೂರು, ಲೋಕೋಪಯೋಗಿ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ಶಕುಂತಲಾ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಎಸ್.ಎನ್. ಸರಿತಾ, ಕಣ್ಣೂರು ವಿವಿ ಸಿಂಡಿಕೇಟ್ ಸದಸ್ಯರಾದ ಡಾ.ಅಶೋಕನ್, ಸಜಿತ್ ಪಾಲೇರಿ, ಸ್ಥಳೀಯಾಡಳಿತ ಇಲಾಖೆ ಉಪ ನಿರ್ದೇಶಕ ಆರ್.ಶೈನಿ ಮೊದಲಾದವರು ಉಪಸ್ಥಿತರಿದ್ದರು. ವಿಜ್ಞಾನ ಕೇರಳಂ ಜಿಲ್ಲಾ ಮಿಷನ್ ಸಂಯೋಜಕ ಕೆ.ವಿ.ರಂಜಿತ್ ಸ್ವಾಗತಿಸಿದರು. ಕುಟುಂಬಶ್ರೀ ಎಡಿಎಂಸಿ ಕೆ.ಎಂ.ಕಿಶೋರ್ ಕುಮಾರ್ ವಂದಿಸಿದರು.