ಕಾಸರಗೋಡಿನಲ್ಲಿ ಮತ್ತೆ 6 ಮಂದಿಗೆ ಸೋಂಕು

thalapady new new
Published on

ಕಾಸರಗೋಡು: ಜಿಲ್ಲೆಯಲ್ಲಿ ಶನಿವಾರವೂ 6 ಮಂದಿಯಲ್ಲಿ ಕರೊನಾ ವೈರಸ್ ಕಾಣಿಸಿಕೊಂಡಿದ್ದು, ಕರಾವಳಿಯಲ್ಲಿ ಜನ ಮತ್ತಷ್ಟು ಭೀತರಾಗಿದ್ದಾರೆ.

ಕೇರಳದಲ್ಲಿ 12 ಮಂದಿಗೆ ರೋಗಲಕ್ಷಣ ಕಂಡುಬಂದಿದ್ದು ಕಾಸರಗೋಡಿನವರಲ್ಲದೆ, ಕಣ್ಣೂರು, ಎರ್ನಾಕುಳಂ ಜಿಲ್ಲೆಯ 6 ಮಂದಿಯೂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎಲ್ಲರೂ ವಿದೇಶದಿಂದ ಬಂದವರು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

ಇದುವರೆಗೆ ರಾಜ್ಯದಲ್ಲಿ 52 ಮಂದಿಯಲ್ಲಿ ವೈರಸ್ ಖಚಿತಗೊಂಡಿದೆ. 49 ಮಂದಿ ಚಿಕಿತ್ಸೆಯಲ್ಲಿದ್ದಾರೆ. ಇದುವರೆಗೆ 53,013 ಮಂದಿಯನ್ನು ನಿಗಾದಲ್ಲಿ ಇರಿಸಲಾಗಿದ್ದು, ಇವರಲ್ಲಿ 52785 ಮಂದಿ ಮನೆಗಳಲ್ಲಿ, 228 ಮಂದಿ ಆಸ್ಪತ್ರೆಗಳಲ್ಲೂ ಚಿಕಿತ್ಸೆಯಲ್ಲಿದ್ದಾರೆ. ಶನಿವಾರ ಹೊಸದಾಗಿ 70 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 3716 ಮಂದಿಯ ಮಾದರಿ ಸಂಗ್ರಹಿಸಿ ತಪಾಸಣೆಗೆ ಕಳುಹಿಸಲಾಗಿದ್ದು, ಇದರಲ್ಲಿ 2566 ಮಂದಿಗೆ ರೋಗಬಾಧೆಯಿಲ್ಲ ಎಂದು ಖಚಿತಗೊಂಡಿದೆ ಎಂದು ಸಿಎಂ ತಿಳಿಸಿದ್ದಾರೆ.

ಸೋಂಕು ಪೀಡಿತನ ವಿರುದ್ಧ ಕೇಸು

ಕಾಸರಗೋಡು: ಕರೊನಾ ವೈರಸ್ ಸೋಂಕು ತಗಲಿರುವ ಮಾಹಿತಿ ಮರೆಮಾಚಿ, ಆರೋಗ್ಯ ಇಲಾಖೆ ಸೂಚನೆ ಉಲ್ಲಂಘಿಸಿದ ಆರೋಪದಲ್ಲಿ ಕರೊನಾ ಸೋಂಕು ಪೀಡಿತ ಕೂಡ್ಲು ನಿವಾಸಿ ವಿರುದ್ಧ ನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ದುಬೈಯಿಂದ ಬಂದ ಈತ ತೆರಳಿರುವ ಸ್ಥಳ ಹಾಗೂ ಸಂಪರ್ಕಿಸಿರುವ ವ್ಯಕ್ತಿಗಳ ಮಾಹಿತಿ ಕಲೆಹಾಕಲು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಶ್ರಮಿಸುತ್ತಿದ್ದರೂ, ಮಾಹಿತಿ ನೀಡುತ್ತಿಲ್ಲ. ವಾಸ್ತವ ಮರೆಮಾಚಿ ಸುಳ್ಳು ಮಾಹಿತಿ ನೀಡುತ್ತಿರುವುದಾಗಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್‌ಬಾಬು ತಿಳಿಸಿದ್ದಾರೆ.

ತಲಪಾಡಿಯಲ್ಲಿ ವಾಹನಗಳಿಗೆ ತಡೆ

ಉಳ್ಳಾಲ: ಕರೊನಾ ವೈರಸ್ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಶನಿವಾರದಿಂದ ಕರ್ನಾಟಕ-ಕೇರಳ ಗಡಿ ಪ್ರದೇಶ ತಲಪಾಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಎಲ್ಲ ವಾಹನಗಳ ಪ್ರವೇಶಕ್ಕೆ ನಿಷೇಧ ಹೇರಲಾಯಿತು.

ಕೇರಳದಿಂದ ಮಂಗಳೂರಿಗೆ ಬರುವ ಹಾಗೂ ಮಂಗಳೂರಿನಿಂದ ಕೇರಳಕ್ಕೆ ಹೋಗುವ ಭಾರಿ ವಾಹನ ಸಂಚಾರವನ್ನು ತಡೆಯಲಾಯಿತು. ಕೇರಳ ನೋಂದಣಿಯ ಬೆರಳೆಣಿಕೆಯ ಲಘು ವಾಹನಗಳಷ್ಟೇ ತಲಪಾಡಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಂಡು ಬಂದವು. ಗಡಿಭಾಗದಲ್ಲಿ ಸಂಚರಿಸುವವರ ಸ್ಕ್ರೀನಿಂಗ್ ಮಾಡಲಾಗಿತ್ತು. ಕೇರಳದಿಂದ ಬರುವ ಹಾಗೂ ಕೇರಳಕ್ಕೆ ಹೋಗುವ ಎಲ್ಲ ವಾಹನಗಳನ್ನು ಉಭಯ ರಾಜ್ಯದ ಪೊಲೀಸರು ಹಿಂದಕ್ಕೆ ಕಳುಹಿಸಿದರು. ಅನಿಲ ಸಾಗಾಟ, ಆಂಬ್ಯುಲೆನ್ಸ್ ಸಹಿತ ಅಗತ್ಯ ಸೇವೆಗಳ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಯಿತು. ಈ ವಾಹನಗಳ ಸವಾರರಿಗೆ ಯಾವುದೇ ರೀತಿಯ ಸ್ಕ್ರೀನಿಂಗ್ ಇರಲಿಲ್ಲ.

ಕೇರಳಕ್ಕೆ ಹೋಗುವವರು ಕೆಳಗಿನ ತಲಪಾಡಿಯಿಂದ ಒಂದೂವರೆ ಕಿ.ಮೀ.ವರೆಗೆ ನಡೆದು ಅನಂತರ ಕೇರಳದ ವಾಹನ ಏರಿ ಪ್ರಯಾಣ ಬೆಳೆಸಿದರು. ಅದೇ ರೀತಿ ಕೇರಳದಿಂದ ಮಂಗಳೂರಿಗೆ ಹೋಗುವವರು ಮೇಲಿನ ತಲಪಾಡಿಗಿಂತಲೂ ಅರ್ಧ ಕಿ.ಮೀ.ದೂರದಲ್ಲಿ ಇಳಿದು ಕೆಳಗಿನ ತಲಪಾಡಿವರೆಗೆ ನಡೆದು, ನಂತರ ಮಂಗಳೂರಿಗೆ ಪ್ರಯಾಣಿಸಿದರು. ಉಭಯ ರಾಜ್ಯಗಳಿಗೆ ವಾಹನ ಪ್ರವೇಶ ತಡೆಯುವ ನಿಟ್ಟಿನಲ್ಲಿ ಗಡಿಭಾಗದಲ್ಲಿ ಎರಡು ಗಂಟೆ ಬಳಿಕ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net