

ಕಾನಹೊಸಹಳ್ಳಿ: ಕಳೆದ ವಾರ ಸುರಿದ ಭಾರಿ ಮಳೆಗೆ ಗುಡೇಕೋಟೆ ಸಮೀಪದ ಕಸಾಪುರ ಗ್ರಾಮದ ಕೆರೆ ತುಂಬಿದೆ. ಆದರೆ, ಕೆರೆ ಏರಿಯ ಮಧ್ಯಭಾಗದಲ್ಲಿ ಭಾನುವಾರ ಮಣ್ಣು ಕುಸಿದು ನೀರು ಸೋರಿಕೆಯಾಗುತ್ತಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಹಲವು ದಶಕಗಳ ನಂತರ ಕೆರೆಯಲ್ಲಿ ಅಪಾರ ನೀರು ಸಂಗ್ರಹವಾಗಿದೆ. ಇದರಿಂದ ರೈತರು ಖುಷಿಯಾಗಿದ್ದು, ಹೊಲಗಳಲ್ಲಿರುವ ಕೊಳವೆಬಾವಿಗಳಲ್ಲಿ ಅಂತರ್ಜಲ ಹೆಚ್ಚಳವಾಗುವ ನಿರೀಕ್ಷೆಯಲ್ಲಿದ್ದಾರೆ. ಆದರೆ, ಸದ್ಯ ಕೆರೆ ಏರಿಯಲ್ಲಿನ ಮಧ್ಯ ಭಾಗದಲ್ಲಿ ಮಣ್ಣು ಜಾರಿ ಬಿದ್ದು ನೀರು ಸೋರಿಕೆಯಾಗುತ್ತಿರುವ ಕಾರಣ ಕೆರೆ ಒಡೆಯುವ ಭೀತಿ ಎದುರಾಗಿದೆ.
ಕೆರೆ ಜಿಪಂ ವ್ಯಾಪ್ತಿಗೆ ಬರುವ ಕಾರಣ ಎಇಇ ಮಲ್ಲಿಕಾರ್ಜುನ ನೇತೃತ್ವದ ತಂಡ ಸ್ಥಳಕ್ಕೆ ಆಗಮಿಸಿ ನೀರು ಸೋರಿಕೆ ತಡೆಗೆ ಮರಳು ಚೀಲಗಳನ್ನು ಅಡ್ಡಲಾಗಿ ಹಾಕಿದರೂ ಸೋರಿಕೆ ನಿಂತಿಲ್ಲ. ಹೀಗಾಗಿ ನೀರಾವರಿ ತಜ್ಞರ ಸಲಹೆ ಪಡೆದು ನೀರು ಸೋರಿಕೆ ತಡೆಯುವ ಕೆಲಸ ಮುಂದುವರಿದಿದೆ.
ಕಸಾಪುರ ಗ್ರಾಮಸ್ಥರು ಯಾವುದೇ ವಾಹನ ಏರಿ ಮೇಲೆ ಸಂಚರಿಸದಂತೆ ಚಾತಕ ಪಕ್ಷಿಯಂತೆ ಕೆರೆ ಬಳಿ ಕುಳಿತಿದ್ದಾರೆ. ಭಾರಿ ವಾಹನಗಳ ಮೂಲಕ ವಿಂಡ್ ಫ್ಯಾನ್‌ಗೆ ಬೃಹತ್ ಯಂತ್ರಗಳನ್ನು ಕೆರೆ ಏರಿ ಮೇಲೆ ಸಾಗಿಸಿದ್ದರಿಂದ ಮಣ್ಣು ಕುಸಿಯಲು ಕಾರಣ ಎಂಬುದು ಗ್ರಾಮಸ್ಥರ ಆರೋಪವಾಗಿದೆ.