ಪಾರ್ಕಿಂಗ್ ವ್ಯವಸ್ಥೆ ಅಚ್ಚುಕಟ್ಟಾಗಿರಲಿ: ವೇದಿಕೆ ಸಮಿತಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಸೂಚನೆ

Kasapa Stage production committee meeting Mandya
Published on

ಮಂಡ್ಯ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನೆಲೆಯಲ್ಲಿ ಜಿಲ್ಲೆ ಸೇರಿದಂತೆ ಹೊರಗಿನಿಂದ ಬರುವವರ ವಾಹನಕ್ಕೆ ಪಾರ್ಕಿಂಗ್ ಸೌಲಭ್ಯ ಅಚ್ಚುಕಟ್ಟಾಗಿ ಮಾಡಿಕೊಡಬೇಕು. ಈ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಳ್ಳುವಂತೆ ವೇದಿಕೆ ಸಮಿತಿ ಅಧ್ಯಕ್ಷರೂ ಆದ ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ವೇದಿಕೆ ಸಮಿತಿಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಲಕ್ಷಾಂತರ ಜನರು ಪಾಲ್ಗೊಳ್ಳುವುದರಿಂದ ವಾಹನದ ಪಾರ್ಕಿಂಗ್ ವ್ಯವಸ್ಥೆ ಮುಖ್ಯವಾಗಲಿದೆ. ಸಮ್ಮೇಳನ ನಗರದ ಹೊರವಲಯದ ಸ್ಯಾಂಜೋ ಆಸ್ಪತ್ರೆ ಹಿಂದೆ ಆಯೋಜನೆ ಮಾಡಲು ಪರಿಶೀಲನೆ ನಡೆದಿದೆ. ಆದರೆ ಇನ್ನೂ ಸ್ಥಳ ಅಂತಿಮಗೊಂಡಿಲ್ಲ. ಆದಾಗ್ಯೂ ಬೆಂಗಳೂರು-ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ಬಹುತೇಕ ಆಯೋಜನೆಗೊಳ್ಳಬಹುದಾದರಿಂದ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಿಕೊಡಬೇಕು ಎಂದರು.

ವೇದಿಕೆ, ಅಡುಗೆ ಮಾಡಲು ಸ್ಥಳ, ಆಹಾರ ವಿತರಿಸುವ ಕೌಂಟರ್, ವಿವಿಧ ಮಳಿಗೆ ಸೇರಿದಂತೆ ಅಗತ್ಯ ಜಾಗದ ವ್ಯವಸ್ಥೆಯಾಗಬೇಕು. ಪಾರ್ಕಿಂಗ್‌ಗೆ ಸಂಬಂಧಿಸಿದಂತೆ ಸಮ್ಮೇಳನದ ಪಕ್ಕದಲಿರುವ ಖಾಸಗಿ ಜಾಗ, ಕಟ್ಟಡದ ಆವರಣವನ್ನು ಬಳಕೆ ಮಾಡಿಕೊಳ್ಳಬೇಕಾಗುತ್ತದೆ. ಪ್ರಮುಖವಾಗಿ ಬೆಂಗಳೂರು ಕಡೆಯಿಂದ ಬರುವವರಿಗೆ ಸಮ್ಮೇಳನದ ಸಮೀಪ ಹಾಗೂ ಮೈಸೂರು ಭಾಗದಿಂದ ಆಗಮಿಸುವವರಿಗೆ ಶ್ರೀನಿವಾಸಪುರ ಗೇಟ್ ಭಾಗದಲ್ಲಿ ವಾಹನ ಪಾರ್ಕಿಂಗ್ ಮಾಡಬಹುದು. ಮುಖ್ಯವಾಗಿ ಪೊಲೀಸರು ಸಾರ್ವಜನಿಕರಿಗೆ ಸಂಚಾರದ ಸಮಸ್ಯೆಯಾಗದಂತೆ ಯೋಜನೆ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸ್ಥಳ ಪರಿಶೀಲನೆ ನಡೆಸಿ ಮಾಹಿತಿ ಕೊಡಬೇಕು ಎಂದು ಸೂಚನೆ ನೀಡಿದರು.

ಇದೇ ವೇಳೆ ಪಾರ್ಕಿಂಗ್‌ಗೆ ಸಂಬಂಧಿಸಿದಂತೆ ಮೈಷುಗರ್ ಕಾರ್ಖಾನೆಗೆ ಸೇರಿದ ಜಾಗವನ್ನು ಬಳಕೆ ಮಾಡಿಕೊಳ್ಳಬಹುದು. ಹೊರಗಿನಿಂದ ಆಗಮಿಸುವವರಿಗೆ ಸಮ್ಮೇಳನಕ್ಕೆ ತೆರಳಲು ಸರ್ವೀಸ್ ರಸ್ತೆ ಮೂಲಕ ಸಂಪರ್ಕ ಕಲ್ಪಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ವಿವರವಾದ ವರದಿ ಸಿದ್ಧಪಡಿಸಬೇಕು ಎನ್ನುವ ಸಲಹೆ ಸಭೆಯಲ್ಲಿ ಕೇಳಿಬಂತು.

ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್, ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ, ಸಮ್ಮೇಳನದ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಹರ್ಷ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಹರ್ಷ ವಿ.ಪಣ್ಣೆದೊಡ್ಡಿ, ಪದಾಧಿಕಾರಿಗಳಾದ ಎ.ಸಿ.ರಮೇಶ್, ರವೀಂದ್ರ, ಎಲ್.ಕೃಷ್ಣ, ದೇವರಾಜು, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಎಚ್.ಸಿ.ಶಿವಲಿಂಗೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net