

ಮಂಡ್ಯ: ಕವಿತೆಯಲ್ಲಿ ಭಾವದ ಜತೆಗೆ ಚಿಂತನೆಯೂ ಇರಬೇಕು. ಆಗ ಮಾತ್ರ ಕವಿತೆ ಮತ್ತೆ ನಮ್ಮನ್ನು ಕಾಡುವಂತಾಗುತ್ತದೆ ಎಂದು ನಿವೃತ್ತ ಪ್ರಾಂಶುಪಾಲ ಡಾ.ಮ.ರಾಮಕೃಷ್ಣ ಅಭಿಪ್ರಾಯಪಟ್ಟರು.
ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಬಂದೀಗೌಡ ಬಡಾವಣೆಯ ಜಿಲ್ಲಾ ಕಸಾಪ ಭವನದಲ್ಲಿ ಆಯೋಜಿಸಿದ್ದ ಸಂಕ್ರಾಂತಿ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಾಸ್ತವವಾಗಿ ಕವಿತೆಗಳು ನಮ್ಮ ಮುಂದೆ ನಡೆಯುವ ಘಟನೆಗಳ ಮೂಲಕ ಹುಟ್ಟುತ್ತವೆ. ಕವಿತೆ ಮನಸ್ಸನ್ನು ಶಾಂತಗೊಳಿಸುವ ರೀತಿ ಇರಬೇಕು. ಮಾನವೀಯತೆ ಕಲಿಸುವಂತೆ ಇರಬೇಕು. ಮನುಷ್ಯರಾಗುವುದಕ್ಕೆ ಪ್ರೇರೇಪಿಸಬೇಕು, ಮೌಲ್ಯವನ್ನು ಹೊಂದಿರಬೇಕು. ಒಡೆದ ಮನಸ್ಸುಗಳನ್ನು ಕಟ್ಟುವಂತಿರಬೇಕು ಎಂದರು.
ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ಕೃಷಿಕ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ.ಹನುಮಂತು, ಹಬ್ಬಗಳು ಸಂಸ್ಕೃತಿಯ ಪ್ರತೀಕ. ಇಂತಹ ಹಬ್ಬವನ್ನು ಕವಿಗೋಷ್ಠಿ ಮೂಲಕ ಆಚರಿಸುತ್ತಿರುವುದು ಅಭಿನಂದನೀಯ. ಸಾಹಿತ್ಯಕ್ಕೆ ಸಮಾಜ ತಿದ್ದುವ ಶಕ್ತಿ ಇದೆ. ಓದುವ ಪ್ರವೃತ್ತಿ ಕಡಿಮೆಯಾಗುತ್ತಿರುವ ದಿನಗಳಲ್ಲಿ ಯುವ ಪೀಳಿಗೆಯನ್ನು ಸಾಹಿತ್ಯ ಕ್ಷೇತ್ರಕ್ಕೆ ಕರೆತರುವ ಕೆಲಸ ಮಾಡಬೇಕು ಎಂದರು.
ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ ಮಾತನಾಡಿ, ಶಬ್ದ ಭಂಡಾರ, ಸಾಹಿತ್ಯದ ಓದು, ದೈನಂದಿನ ವ್ಯಾಪಾರಗಳ ಜತೆ ಅಂತರಂಗದ ಅರಿವು ಸೇರಿದಾಗ ಕವಿತೆ ಹುಟ್ಟುತ್ತದೆ. ಕವಿತೆ ಅರಿವು ಉಲ್ಲಾಸವನ್ನು ಉಂಟು ಬಮಾಡುತ್ತದೆ. ವೈಯಕ್ತಿಕವಾಗಿ ಅವು ಜೀವನದ ಭಾಗದಂತೆ ಅಚ್ಚಳಿಯದೆ ಉಳಿಯಬೇಕು. ಕವಿತಾ ಪ್ರತಿಭೆ ಒಂದು ಶಕ್ತಿ, ಅರಿವುಗಳ ಅಕ್ಷಯ ನಿಧಿ ಎಂದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಹುಸ್ಕೂರು ಕೃಷ್ಣೇಗೌಡ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಯುವ ಸಾಹಿತಿ ಕನ್ನಿಕಾ, ಜಿಲ್ಲಾ ಕಸಾಪ ಕಾರ್ಯದರ್ಶಿ ಧನಂಜಯ ದರಸಗುಪ್ಪೆ, ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ, ತಾಲೂಕು ಘಟಕದ ಅಧ್ಯಕ್ಷ ಚಂದ್ರಲಿಂಗು, ಕಸಾಪ ಪದಾಧಿಕಾರಿಗಳಾದ ಎಂ.ಸಿ.ಭಾಸ್ಕರ್, ಗಾಮನಹಳ್ಳಿ ಮಹದೇವಸ್ವಾಮಿ, ಹೊಳಲು ಶ್ರೀಧರ್, ಚಿಕ್ಕತಿಮ್ಮಯ್ಯ ಉಪಸ್ಥಿತರಿದ್ದರು. ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಯುವ ಸಾಹಿತಿಗಳು ಕವನ ವಾಚಿಸಿದರು.