

ಮಂಡ್ಯ: ರಾಷ್ಟ್ರಕವಿ ಕುವೆಂಪು ಅವರ ಬಾರಿಸು ಕನ್ನಡ ಡಿಂಡಿಮದ ರೀತಿಯಲ್ಲಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸೋಣ ಎಂದು ಸಮ್ಮೇಳನದ ಮಹಾಪೋಷಕರೂ ಆದ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಕರೆ ನೀಡಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ 87ನೇ ಅಖಿಲ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್, ಜಿಲ್ಲಾಡಳಿತದ ವತಿಯಿಂದ ವಿವಿಧ ಸಮಿತಿ ಅಧ್ಯಕ್ಷರು, ಸದಸ್ಯರೊಂದಿಗೆ ಆಯೋಜಿಸಿದ್ದ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಕನ್ನಡ ನಮ್ಮ ಅಸ್ಮಿತೆಯನ್ನು ತಂದುಕೊಟ್ಟಿರುವ ಭಾಷೆ. ಇಂತಹ ಭಾಷಾ ಹಬ್ಬವನ್ನು ಎಲ್ಲರೂ ಕೂಡಿ ಮಾಡಿದರೆ ಒಳಿತು. ಎಲ್ಲರ ಭಿನ್ನಾಭಿಪ್ರಾಯವನ್ನು ಮರೆಯುವುದು. ತವರಿನಿಂದ ಹೊರ ಹೋಗಿರುವ ಹೆಣ್ಣು ಮಕ್ಕಳನ್ನೂ ಮನೆಗೆ ಕರೆಸಿಕೊಂಡು ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಾರೆ. ಅದೇ ಮಾದರಿಯಲ್ಲಿ ನಾವು ಕನ್ನಡದ ಹಬ್ಬವನ್ನು ಆಚರಿಸುವಂತಾಗಬೇಕು. ಅದು ನಮ್ಮ ಭಾಷೆ, ತಾಯಿಯ ಹಬ್ಬ ಎಂದರು.
ಕನ್ನಡ ಆಡಳಿತ ಭಾಷೆಯಾಗಬೇಕು. ಎಲ್ಲ ಸ್ತರದ ಶಿಕ್ಷಣವೂ ಕನ್ನಡದಲ್ಲೇ ನಡೆಯುವಂತಾಗಬೇಕು ಎಂಬ ಆಸೆ ನಮ್ಮದು. ಈ ನಿಟ್ಟಿನಲ್ಲಿ ಕಳೆದ ಕೆಲ ವರ್ಷಗಳಿಂದ ತಾಂತ್ರಿಕ ಶಿಕ್ಷಣದಲ್ಲೂ ಕನ್ನಡ ಬಂದಿದೆ. ಕನ್ನಡ ಭಾಷೆಯಲ್ಲಿ ವ್ಯಾಸಂಗ ಮಾಡಿದವರಿಗೆ ಸರ್ಕಾರಿ ಮತ್ತು ಖಾಸಗಿ ಉದ್ಯೋಗದಲ್ಲಿ ಪ್ರಾಮುಖ್ಯತೆ ನೀಡುವಂತಾದರೆ ಕನ್ನಡ ಮತ್ತಷ್ಟು ಮೆರಗನ್ನು ಪಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಚಿಂತನೆ ನಡೆಸಬೇಕು ಎಂದು ಸಲಹೆ ನೀಡಿದರು.
ಕನ್ನಡ ನಾಡು ನುಡಿ, ಭಾಷೆಯನ್ನು ಸಂಭ್ರಮಿಸುವ ಹಬ್ಬ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ. ಕನ್ನಡ ಭಾಷೆ ನಮ್ಮ ಸಂಸ್ಕೃತಿ, ಭೌತಿಕ, ಮಾನಸಿಕ ಶಕ್ತಿ ನೀಡುವ ನಮ್ಮ ಕನ್ನಡ ಭಾಷೆಯ ಹಬ್ಬವನ್ನು ಸಂಭ್ರಮಿಸೋಣ. ಪ್ರತಿಯೊಂದು ಕಲಿಕಾ ವಿಭಾಗ ಹಾಗೂ ಕ್ಷೇತ್ರದಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು. ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡದ ಡಿಂಡಿಮ ಬಾರಿಸಬೇಕು. ಇದಕ್ಕಾಗಿ ಕನ್ನಡದ ಬಗ್ಗೆ ಆಸಕ್ತಿ ಮೂಡಿಸಲು ಸತ್ತಂತಿಹರನ್ನು ಬಡಿದೆಚ್ಚರಿಸು; ಕಚ್ಚಾಡುವರನು ಕೂಡಿಸಿ ಒಲಿಸಿ ಸಮ್ಮೇಳನವನ್ನು ಉತ್ತಮವಾಗಿ ಆಚರಿಸೋಣ ಎಂದರು.
ಸಭೆ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಮಾತಿಗಿಂತ ಕೆಲಸ ಮುಖ್ಯ ಎನ್ನುವಂತೆ ಎಲ್ಲ ಸಮಿತಿ ಅಧ್ಯಕ್ಷ, ಸದಸ್ಯರು ಮಾಡಬೇಕು. ಸಣ್ಣ ಪುಟ್ಟ ವಿಷಯಗಳನ್ನು ಚರ್ಚೆಗೆ ಬಿಡದೆ ಎಲ್ಲ ಭಿನ್ನಮತಗಳನ್ನೂ ಅಲ್ಲೆ ಶಮನ ಮಾಡಿ ಕನ್ನಡದ ಹಬ್ಬವನ್ನು ಯಶಸ್ವಿಗೊಳಿಸುವತ್ತ ಎಲ್ಲರೂ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ರಾಜ್ಯ, ಅಂತಾರಾಜ್ಯ, ಅಂತಾರಾಷ್ಟ್ರೀಯ ಮಟ್ಟದಲ್ಲಿರುವವರನ್ನೂ ಕನ್ನಡದ ಹಬ್ಬಕ್ಕೆ ಕರೆತಂದು, ವಸತಿ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನೂ ಅಚ್ಚುಕಟ್ಟಾಗಿ ಮಾಡುವತಂಹ ಜವಾಬ್ದಾರಿ ನಮ್ಮದಾಗಿದೆ. ಇದಕ್ಕಾಗಿ ಸರ್ಕಾರ ಸಂಪೂರ್ಣ ಬೆಂಬಲ ನೀಡುತ್ತದೆ. ಜಿಲ್ಲಾಡಳಿತದಿಂದ ಎಲ್ಲ ಸೌಲಭ್ಯಗಳನ್ನೂ ಪಡೆದುಕೊಂಡು ಸರಿಯಾದ ನಿಟ್ಟಿನಲ್ಲಿ ಎಲ್ಲ ವ್ಯವಸ್ಥೆಯನ್ನೂ ತೆಗೆದುಕೊಂಡು ಹೋಗುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ್ ಜೋಷಿ ಮಾತನಾಡಿ, ಸಾಹಿತ್ಯ ಸಮ್ಮೇಳನವನ್ನು ಅಚ್ಚುಕಟ್ಟಾಗಿ ಆಚರಿಸಲು 28 ಸಮಿತಿ ರಚಿಸಲಾಗಿದೆ. ಎಲ್ಲರೂ ಸಂಘಟಿತರಾಗಿ ಕೆಲಸ ನಿರ್ವಹಿಸೋಣ. ಕರ್ನಾಟಕ ಎಂದು ಹೆಸರು ನಾಮಕರಣವಾದ ನಂತರ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಂಡ್ಯ ಜಿಲ್ಲೆಯಲ್ಲಿ ಆಚರಿಸಲಾಯಿತು. ಸಮ್ಮೇಳನದ ಸಮಯದಲ್ಲಿ ಸರ್ಕಾರಿ ರಜೆಯಿದ್ದು, ಹೆಚ್ಚಿನ ವಿದ್ಯಾರ್ಥಿಗಳು ಹಾಗೂ ಕನ್ನಡ ಆಸಕ್ತರನ್ನು ಸೇರಿಸುವ ಉದ್ದೇಶವಿದೆ. ಸಮ್ಮೇಳನ ಜಿಲ್ಲಾಡಳಿತ, ಸರ್ಕಾರಕ್ಕೆ ಸೀಮಿತ ಮಾಡದೇ ಪ್ರತಿಯೊಬ್ಬರು ಸೇರಿಕೊಂಡು ಐತಿಹಾಸಿಕ ಹಬ್ಬವಾಗಿ ಆಚರಿಸಬೇಕು. ದಾಖಲೆ ಸೃಷ್ಟಿಸುವ ರೀತಿ ಸಾಹಿತ್ಯ ಸಮ್ಮೇಳನವನ್ನು ಎಲ್ಲರ ಮನಸ್ಸಿನಲ್ಲಿ ಸವಿ ನೆನಪಾಗಿ ಉಳಿಯುವ ರೀತಿ ಮಾಡೋಣ ಎಂದರು.
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಆ.30ರೊಳಗೆ ಎಲ್ಲಾ ಸಮಿತಿಗಳು ಕ್ರಿಯಾ ಯೋಜನೆಯನ್ನು ಸಿದ್ದಪಡಿಸಿ ಜಿಲ್ಲಾಡಳಿತಕ್ಕೆ ಒದಗಿಸಬೇಕು. ವಸತಿ, ವೇದಿಕೆ, ಆಹಾರ ಸಮಿತಿ ಅವರು ಕೆಲಸ ಶೀಘ್ರವಾಗಿ ಪ್ರಾರಂಭಿಸಬೇಕು. ಜಿಲ್ಲೆಯಲ್ಲಿ ಲಭ್ಯವಿರುವ ವಸತಿ ಶಾಲೆ, ಹೋಟೆಲ್, ರೆಸಾರ್ಟ್, ಹೋಂ ಸ್ಟೇ ಸೇರಿದಂತೆ ವಿವಿಧ ಕಡೆ ಲಭ್ಯವಾಗುವ ವಸತಿಗಳ ವಿವರವನ್ನು ಪಡೆದುಕೊಳ್ಳಿ. ಎಲ್ಲ ಸಮಿತಿಗಳು ಅನುದಾನವನ್ನು ಪಾರದರ್ಶಕವಾಗಿ ವೆಚ್ಚ ಮಾಡಬೇಕು. ಹಣ ಪೋಲಾಗದಂತೆ ನೋಡಿಕೊಳ್ಳಬೇಕು. ಸದಸ್ಯ ಕಾರ್ಯದರ್ಶಿಗಳು ಹಾಗೂ ಸಂಚಾಲಕರು ಸರಿಯಾದ ರೀತಿಯಲ್ಲಿ ಕಡತ ನಿರ್ವಹಿಸಿ ಸಮಿತಿಯಲ್ಲಿ ಮಂಡಿಸಬೇಕು. ಸಭೆಗಳನ್ನು ನಿಯಮಿತವಾಗಿ ಆಯೋಜಿಸಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಕನ್ನಡ ಜ್ಯೋತಿ ರಥಯಾತ್ರೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಂಚರಿಸಿ ಸಮ್ಮೇಳನದ ಪ್ರಾಮುಖ್ಯತೆ ತಿಳಿಸುವ ಜತೆಗೆ ಆಹ್ವಾನ ನೀಡಲಿದೆ. ಇದರ ಮಾದರಿ ಸಿದ್ಧಪಡಿಸಿದ್ದು, ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಕೊಮ್ಮೇರಹಳ್ಳಿ ವಿಶ್ವಮಾನವ ಕ್ಷೇತ್ರದ ಪುರುಷೋತ್ತಮಾನಂದನಾಥ ಸ್ವಾಮೀಜಿ, ಶಾಸಕರಾದ ರವಿಕುಮಾರ್ ಗಣಿಗ, ರಮೇಶ ಬಂಡಿಸಿದ್ದೇಗೌಡ, ದರ್ಶನ್ ಪುಟ್ಟಣ್ಣಯ್ಯ, ಎಂಎಲ್‌ಸಿಗಳಾದ ದಿನೇಶ್ ಗೂಳಿಗೌಡ, ಮಧು ಜಿ.ಮಾದೇಗೌಡ, ಸಮ್ಮೇಳನದ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ, ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ, ಮಾಜಿ ಶಾಸಕ ಡಾ.ಕೆ.ಅನ್ನದಾನಿ, ಜಿ.ಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಇತರರಿದ್ದರು.