ಡಿಸೆಂಬರ್‌ನಲ್ಲಿ ಆಯೋಜಿಸಲು ನಿರ್ಧಾರ: ಸಚಿವ ಸಿಆರ್‌ಎಸ್, ನಾಡೋಜ ಡಾ.ಮಹೇಶ ಜೋಷಿ ಚರ್ಚೆ

1 (2)
Published on

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯ ಮಂಡ್ಯ ಜಿಲ್ಲೆಗೆ ನೀಡಿರುವ ಹಿನ್ನೆಲೆಯಲ್ಲಿ ಚಟುವಟಿಕೆಗಳು ಚುರುಕುಗೊಂಡಿವೆ. ಅದರಂತೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮತ್ತು ಕೇಂದ್ರ ಕಸಾಪ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಷಿ ಚರ್ಚೆ ನಡೆಸಿದ್ದಾರೆ. ಪ್ರಮುಖವಾಗಿ ಡಿಸೆಂಬರ್ ತಿಂಗಳಿನಲ್ಲಿ ಸಮ್ಮೇಳನ ಆಯೋಜಿಸಲು ತಾತ್ಕಾಲಿಕವಾಗಿ ತೀರ್ಮಾನಿಸಲಾಯಿತು.

ಬೆಂಗಳೂರಿನ ಕೇಂದ್ರ ಕಸಾಪ ಕಚೇರಿಯಲ್ಲಿ ಸಮ್ಮೇಳನದ ಪೂರ್ವಭಾವಿ ಸಭೆ ಆಯೋಜಿಸಿದ್ದು, ಸಮ್ಮೇಳನದ ಸ್ವರೂಪ ಸೇರಿದಂತೆ ಹಲವು ಮಹತ್ವದ ವಿಷಯಗಳ ಚರ್ಚೆ ನಡೆಯಿತು. ಡಾ.ಮಹೇಶ ಜೋಷಿ ಅವರು ತಾವು ಅಧ್ಯಕ್ಷತೆಯನ್ನು ವಹಿಸಿಕೊಂಡ ನಂತರ ತಂದಿರುವ ಬದಲಾವಣೆ ಮತ್ತು ಹಾವೇರಿಯಲ್ಲಿ ನಡೆದ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪಡೆದ ಯಶಸ್ಸು ಇದೆಲ್ಲವನ್ನೂ ಕಿರುಚಿತ್ರದ ಮೂಲಕ ದೃಶ್ಯ ಮಾಧ್ಯಮದಲ್ಲಿ ಪ್ರದರ್ಶಿಸಿದರು. ಅಂತೆಯೇ ಸಾಮರಸ್ಯದ ನಾಡಾದ ಹಾವೇರಿಯಿಂದ ಸಕ್ಕರೆನಾಡು ಮಂಡ್ಯದ ಕಡೆಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪಯಣ ಬೆಳೆಸಿದೆ. ಆದ್ದರಿಂದ ಇಡೀ ಕಾರ್ಯಕ್ರಮ ಯಶಸ್ವಿಯಾಗಬೇಕಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಸಹಕಾರ ನೀಡುವಂತೆ ಮನವಿ ಮಾಡಿದರು.

ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಸಮ್ಮೇಳನ ಅಭೂತ ಪೂರ್ವ ಯಶಸ್ಸನ್ನು ಪಡೆಯಲು ಎಲ್ಲ ರೀತಿಯಲ್ಲಿಯೂ ಸರ್ಕಾರದಿಂದ ಸಹಕಾರ ನೀಡಲಾಗುವುದು. ಮಾತ್ರವಲ್ಲದೆ ಮುಂದಿನ ಹಂತಗಳಲ್ಲಿ ಮಂಡ್ಯ ಜಿಲ್ಲೆಯ ಎಲ್ಲ ಶಾಸಕರೂ ಮತ್ತು ಅಧಿಕಾರಿಗಳ ಸಭೆಯನ್ನು ನಡೆಸಲಾಗುವುದು. ಅಂತೆಯೇ ಕಸಾಪ ಅಧ್ಯಕ್ಷರು ಮತ್ತು ಪದಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸಮ್ಮೇಳನಕ್ಕೆ ಆಯವ್ಯಯದಲ್ಲಿಯೇ ಅನುದಾನ ಮೀಸಲಿಡುವಂತೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

ಡಾ.ಮಹೇಶ ಜೋಷಿ ಮಾತನಾಡಿ, ಹಾವೇರಿ ಸಮ್ಮೇಳನದಲ್ಲಿ ಕೆಲವು ಸಣ್ಣ ಪುಟ್ಟ ಲೋಪದೋಷ ಉಂಟಾಯಿತು. ಈ ಹಿನ್ನೆಲೆಯಲ್ಲಿ ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಎಚ್ಚರಿಕೆ ವಹಿಸಿ ಯಶಸ್ವಿ ಕಾರ್ಯಕ್ರಮ ಆಯೋಜಿಸಲಾಗುವುದು. ಅಂತೆಯೇ ಸಮ್ಮೇಳನಾಧ್ಯಕ್ಷರ ಮೆರವಣಿಗೆಯ ಮಾರ್ಗವನ್ನು ಸೀಮಿತಗೊಳಿಸುವುದು. ಮೊಬೈಲ್ ಸಂಪರ್ಕ ಜಾಲ ತೊಂದರೆಗೆ ಸಿಲುಕುದಂತೆ ಹಾಗೂ ಆನ್‌ಲೈನ್‌ನಲ್ಲಿ ವ್ಯಾಪಾರ ವಹಿವಾಟಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗುವುದು. ಗೋಷ್ಠಿಗಳನ್ನು ವೈವಿಧ್ಯಮಯಗೊಳಿಸಲು ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಅಧ್ಯಕ್ಷರ ಸಲಹೆಗಳಿಗೆ ಸಂಪೂರ್ಣ ಸಮ್ಮತಿಯನ್ನು ಸೂಚಿಸಿ ಸಹಕಾರದ ಭರವಸೆಯನ್ನು ನೀಡಿದರು. ಮಾತ್ರವಲ್ಲದೆ ಕಸಾಪ ಬೆಳವಣಿಗೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಭೆಯಲ್ಲಿ ಮಂಡ್ಯ ಶಾಸಕ ರವಿಕುಮಾರ್ ಗಣಿಗ, ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಡಾ.ಕೃಷ್ಣ, ವಿ.ಹರ್ಷ ಪಣ್ಣೇದೊಡ್ಡಿ, ಕಸಾಪ ಕಾರ್ಯದರ್ಶಿಗಳಾದ ಡಾ.ಪದ್ಮಿನಿ ನಾಗರಾಜ್, ನೇ.ಭ.ರಾಮಲಿಂಗಶೆಟ್ಟಿ, ಕೋಶಾಧ್ಯಕ್ಷ ಪಟೇಲ ಪಾಂಡು, ಪ್ರಕಟಣೆ ವಿಭಾಗದ ಸಂಚಾಲಕ ಪ್ರೊ.ಎನ್.ಎಸ್.ಶ್ರೀಧರ ಮೂರ್ತಿ, ಮಾಧ್ಯಮ ಸಲಹೆಗಾರ ಶ್ರೀನಾಥ್ ಜೋಷಿ, ವಿಶೇಷಾಧಿಕಾರಿ ವಿ.ಚಿಕ್ಕತಿಮ್ಮಯ್ಯ, ಹಾವೇರಿ ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗಯ್ಯ ಹಿರೇಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net