

ಮಂಡ್ಯ: ಆಗಸ್ಟ್‌ನಲ್ಲಿ ಶ್ರೀರಂಗಪಟ್ಟಣದಲ್ಲಿ ಜಿಲ್ಲಾ 19ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮೂರು ದಿನ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಕೆ.ರವಿಕುಮಾರ ಚಾಮಲಾಪುರ ತಿಳಿಸಿದರು.
ನಗರದ ಜಿಲ್ಲಾ ಕಸಾಪ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮ್ಮೇಳನದ ಬಗ್ಗೆ ಸ್ಥಳೀಯ ಶಾಸಕ ಎ.ಎಸ್.ರವೀಂದ್ರ ಶ್ರೀಕಂಠಯ್ಯ ಅವರ ಒಪ್ಪಿಗೆ ಪಡೆಯಲಾಗಿದೆ. ಇನ್ನೊಂದೆರಡು ದಿನಗಳಲ್ಲಿ ಮತ್ತೊಮ್ಮೆ ಭೇಟಿ ಮಾಡಿ ವಿಸ್ತೃತವಾಗಿ ಚರ್ಚಿಸಲಾಗುವುದು ಎಂದರು.
ಸಮ್ಮೇಳನಾಧ್ಯಕ್ಷರ ಆಯ್ಕೆ, ಮೆರವಣಿಗೆ, ಉದ್ಘಾಟನೆ, ಸಮಾರೋಪ, ವಿಚಾರಗೋಷ್ಠಿ, ಕವಿಗೋಷ್ಠಿ, ಪುಸ್ತಕ, ವಾಣಿಜ್ಯ ಹಾಗೂ ಆಹಾರ ಮಳಿಗೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರ ಸನ್ಮಾನ, ಊಟೋಪಚಾರ, ವಿವಿಧ ಸಮಿತಿಗಳ ರಚನೆ ಮುಂತಾದವುಗಳ ಬಗ್ಗೆ ಶೀಘ್ರವೇ ನಿರ್ಧಾರ ತೆಗೆದುಕೊಳ್ಳಲಾಗುವುದು. ಸಮಾಜದ ವಿವಿಧ ಗಣ್ಯರು, ಮಹನೀಯರನ್ನು ಕರೆಸಿ ಅವರಿಂದ ವಿಶೇಷ ಉಪನ್ಯಾಸ ಗೋಷ್ಠಿಗಳನ್ನು ನಡೆಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಸೂಕ್ತ ಹೆಸರನ್ನು ಸೂಚಿಸುವಂತೆ ಮನವಿ ಮಾಡಿದರು.
ಸಾಹಿತಿ ಡಾ.ಪ್ರದೀಪಕುಮಾರ್ ಹೆಬ್ರಿ, ಮಂಡ್ಯ ನಗರ ಕಸಾಪ ಅಧ್ಯಕ್ಷೆ ಸುಜಾತಾ ಕೃಷ್ಣ, ಜಿಲ್ಲಾ ಕಸಾಪ ಕಾರ್ಯದರ್ಶಿಗಳಾದ ಧನಂಜಯ ದರಸಗುಪ್ಪೆ, ಕೃಷ್ಣೇಗೌಡ ಹುಸ್ಕೂರು, ಹರ್ಷ.ವಿ.ಪಣ್ಣೆದೊಡ್ಡಿ, ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ, ಸಹ ಕಾರ್ಯದರ್ಶಿ ಎಂ.ಸಿ.ಭಾಸ್ಕರ್, ಮಂಜುನಾಥ ಬಲ್ಲೇನಹಳ್ಳಿ, ಬಸವೇಗೌಡ ಖರಡ್ಯ, ಚೇತನಕುಮಾರ್, ಸುನಿಲ್ ಕುಮಾರ್, ಪೂರ್ಣಚಂದ್ರ, ಪ್ರಕಾಶ್, ಸರಸ್ವತಮ್ಮ ಇತರರಿದ್ದರು.