

ಮಂಡ್ಯ: ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಭುವನೇಶ್ವರಿ ರಥ ಸಂಚಾರವು ಮಂಡ್ಯ ನಗರಕ್ಕೆ ಬಂದು ಅಕ್ಷರ ಜಾತ್ರೆ ವೈಭವನ್ನು ಹೆಚ್ಚಿಸಿದೆ ಎಂದು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ ಹೇಳಿದರು.
ನಗರದ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿನ ಗುತ್ತಲು ರಸ್ತೆಯ ವೃತ್ತದಲ್ಲಿ ಮದ್ದೂರಿನಿಂದ ಮಂಡ್ಯ ನಗರಕ್ಕೆ ಬಂದ ಅಖಿಲ ಭಾರತ 86 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಭುವನೇಶ್ವರಿ ರಥಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. ಸಾಹಿತ್ಯ ಸಮ್ಮೇಳನ ಅಭೂತಪೂರ್ವಗೊಳಿಸಲು ಕನ್ನಡ ಸಾಹಿತ್ಯ ಪರಿಷತ್ ಮತ್ತು ಹಾವೇರಿ ಜಿಲ್ಲಾಡಳಿತ ಶ್ರಮಿಸುತ್ತಿದೆ. ಇದೇ ಪ್ರಥಮ ಬಾರಿಗೆ ಸಾಹಿತ್ಯ ಪರಿಷತ್ ರಾಜ್ಯಾದ್ಯಂತ ಕನ್ನಡ ತಾಯಿಯ ರಥ ಯಾತ್ರೆ ನಡೆಸಲು ಮುಂದಾಗಿರುವುದು ಕನ್ನಡಿಗರ ಅಸ್ಮಿತೆಯನ್ನು ಎತ್ತಿಹಿಡಿದಿದೆ ಎಂದು ನುಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರವಿಕುಮಾರ ಚಾಮಲಾಪುರ ಮಾತನಾಡಿ, 2023 ಜ.6, 7 ಮತ್ತು 8ರಂದು ಹಾವೇರಿಯಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ರಾಜ್ಯದ 32 ಜಿಲ್ಲೆಗಳಲ್ಲಿ ಭುವನೇಶ್ವರಿ ರಥಯಾತ್ರೆ ಸಂಚರಿಸಲಿದೆ, ಜಿಲ್ಲಾ, ತಾಲೂಕು ಕೇಂದ್ರದ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಅಧಿಕಾರಿಗಳು ಭವ್ಯವಾಗಿ ಸ್ವಾಗತ ಕೋರುವ ಮೂಲಕ ಬೆಂಬಲ ನೀಡಲಾಗುತ್ತಿದೆ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ಉದಯಕುಮಾರ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಮಂಜು ಮುತ್ತೇಗೆರೆ, ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ, ನಗರ ಘಟಕ ಅಧ್ಯಕ್ಷೆ ಸುಜಾತಾಕೃಷ್ಣ, ಡಾ.ಕೃಷ್ಣೇಗೌಡ ಹುಸ್ಕೂರು, ಧನಂಜಯ ಇತರರಿದ್ದರು.
ಇದೇ ಸಂಧರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಿದ್ದ ವಿವಿಧ ಕಲಾತಂಡಗೊಅದಿಗೆ ಭುವನೇಶ್ವರಿ ರಥವನ್ನು ಮೆರವಣಿಗೆಯೊಂದಿಗೆ ಶ್ರೀರಂಗಪಟ್ಟಣ ಮಾರ್ಗವಾಗಿ ಮೈಸೂರಿಗೆ ಕಳಿಸಿಕೊಡಲಾಯಿತು.