

ಮಂಡ್ಯ: ಸ್ವಯಂ ಶಿಸ್ತನ್ನು ರೂಢಿಸಿಕೊಂಡರೆ ಜೀವನದಲ್ಲಿ ಯಶಸ್ಸು ಗಳಿಸಬಹುದು ಎಂದು ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ಎಂ.ವಿ.ವೆಂಕಟೇಶ್ ಕಿವಿಮಾತು ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಕಸಾಪ ವತಿಯಿಂದ ಬುಧವಾರ ಆಯೋಜಿಸಿದ್ದ ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ, ಎಲ್ಲ ವಿಷಯಗಳಲ್ಲಿ ಶೇ.100 ಅಂಕಗಳನ್ನು ಪಡೆದ ಹಾಗೂ ದ್ವೀತಿಯ ಪಿಯುಸಿ ಕನ್ನಡ ಭಾಷೆಯಲ್ಲಿ ಶೇ.100 ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಆ ಶಾಲೆಗಳ ಶಿಕ್ಷಕರು, ಉಪನ್ಯಾಸಕರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಕಲಿಯುವಿಕೆಯನ್ನು ಕೇವಲ ಉದ್ಯೋಗ, ಸ್ಥಾನಮಾನಕ್ಕಾಗಿ ಸೀಮಿತಗೊಳಿಸಿಕೊಳ್ಳದೇ ಹೊಸ ವಿಚಾರಧಾರೆಗಳನ್ನು ಮೈಗೂಡಿಸಿಕೊಳ್ಳಬೇಕು. ನಿಮ್ಮಲ್ಲಿ ಅನೇಕ ಯುವ ಪ್ರತಿಭೆಗಳಿದ್ದೀರಿ. ಆದರೆ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಿಸಿದಾಗ ಜಿಲ್ಲೆಯ ವಿದ್ಯಾರ್ಥಿಗಳ ಸಾಧನೆ ಬೆರಳೆಣಿಕೆಯಷ್ಟು ಮಾತ್ರ ಎಂದರು.
ಇದು ಸ್ಪರ್ಧಾತ್ಮಕ ಜಗತ್ತು. ನಿಮ್ಮ ಮುಂದಿನ ಸಾಧನೆಯ ಹಾದಿ ಇನ್ನೂ ಕಠಿಣವಾಗಿದೆ. ಅದಕ್ಕೆ ತಕ್ಕಂತೆ ನೀವು ಸಜ್ಜುಗೊಳ್ಳಬೇಕು.ನಿಮ್ಮ ಸುತ್ತಲಿನ ಆಗು ಹೋಗುಗಳ ಬಗ್ಗೆ ಕುತೂಹಲ, ಸೃಜನಾತ್ಮಕ ಆಲೋಚನೆ, ಸಂವೇದನಾಶೀಲತೆ ಕಲಿಯುವ ಹಂಬಲ ಬೆಳೆಸಿಕೊಳ್ಳಬೇಕು ಎಂದರು.
ಜಿಪಂ ಸಿಇಒ ಎಸ್.ಎಂ.ಜುಲ್ ಫಿಖಾರ್ ಉಲ್ಲಾ, ರಾಜ್ಯ ಪಂಚಾಯತ್ ಸಂಪನ್ಮೂಲ ಕೇಂದ್ರದ ನಿರ್ದೇಶಕ ಕೆ.ಯಾಲಕ್ಕಿಗೌಡ, ಜಿಲ್ಲಾ ಕಸಾಪ ಅಧ್ಯಕ್ಷ ಸಿ.ಕೆ.ರವಿಕುಮಾರ್ ಚಾಮಲಾಪುರ ಮಾತನಾಡಿದರು. ಡಿಡಿಪಿಐ ರಘುನಂದನ್ ಮತ್ತು ವ್ಯಕ್ತಿತ್ವ ವಿಕಸನ ತರಬೇತುದಾರ ಕೆ.ಎಂ.ಪ್ರಸನ್ನಕುಮಾರ್ ಕೆರಗೋಡು, ನಗರಸಭಾಧ್ಯಕ್ಷ ಎಚ್.ಎಸ್.ಮಂಜು, ಕಸಾಪ ಮಾಜಿ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಂಜನಾ ಶ್ರೀಕಾಂತ್ ಇತರರಿದ್ದರು. 200ಕ್ಕೂ ಹೆಚ್ಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ 150ಕ್ಕೂ ಹೆಚ್ಚು ಶಿಕ್ಷಕರನ್ನು ಅಭಿನಂದಿಸಲಾಯಿತು.