ವಿಜಯ ಸಂಕೇಶ್ವರರ ಕಾರ್ಯವೈಖರಿಯೇ ಆದರ್ಶ : ಸಾಹಿತ್ಯ ಪ್ರಕಾಶನ ಸುಬ್ರಹ್ಮಣ್ಯ ಅಭಿಪ್ರಾಯ

Sudhee_04_Ankita_Book_Endownment_Award_@_Ka_Sa_Pa
Published on

ಬೆಂಗಳೂರು : ವಿಜಯಾನಂದ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರ ಬಿಡುವಿಲ್ಲದ ಕಾರ್ಯವೈಖರಿಯಿಂದ ಪ್ರಭಾವಿತನಾದ ನಾನು, ಈಗಲೂ ಪ್ರಕಾಶನ ಕಾರ್ಯದಲ್ಲಿ ಅವಿರತವಾಗಿ ಶ್ರಮಿಸಲು ಸಾಧ್ಯವಾಗಿದೆ ಎಂದು ಸಾಹಿತ್ಯ ಪ್ರಕಾಶನ ಮಾಲೀಕ ಎಂ.ವಿ. ಸುಬ್ರಹ್ಮಣ್ಯ ಹೇಳಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಬುಧವಾರ ‘ಅಂಕಿತ ಪುಸ್ತಕ ದತ್ತಿ ಪುರಸ್ಕಾರ’ ಸ್ವೀಕರಿಸಿ ಮಾತನಾಡಿದರು. ಜೀವನದಲ್ಲಿ ಯಾವುದರ ಹಿಂದೆಯೂ ಆಸೆ ಪಟ್ಟು ಹೋದವನಲ್ಲ. ಪ್ರಶಸ್ತಿಗಾಗಿ ಅರ್ಜಿ ಹಾಕಿಲ್ಲ, ಹಿರಿಯರ ದುಂಬಾಲು ಬಿದ್ದಿಲ್ಲ. ಆದರೆ, ಪ್ರಶಸ್ತಿಗಳು, ಗಣ್ಯರ ಪರಿಚಯ, ಅವರೊಂದಿಗೆ ಒಡನಾಟಗಳು ತಂತಾನೇ ಒದಗಿಬಂದಿವೆ. ಉದ್ಯಮ ಕ್ಷೇತ್ರದ ಸಾಧಕ ಡಾ. ವಿಜಯ ಸಂಕೇಶ್ವರ ಅವರೊಂದಿಗೆ ಉತ್ತಮ ಒಡನಾಟವಿದೆ. ಅವರು ಪ್ರತಿನಿತ್ಯ ಬೆಳಗ್ಗೆ 8ರಿಂದ ಸಂಜೆ 6 ಗಂಟೆವರೆಗೂ ನಿರಂತರ ಕೆಲಸ ಮಾಡಿದರೂ ದಣಿವು ಎಂದು ಕೂರುವುದಿಲ್ಲ. 55 ವರ್ಷಗಳಿಂದ ಒಂದು ದಿನವೂ ರಜೆ ಪಡೆಯದೆ ಬಿಡುವಿಲ್ಲದೆ ಕಾರ್ಯತತ್ಪರತೆ ಮೆರೆದಿದ್ದಾರೆ. ಅದೇ ನನಗೆ ಆದರ್ಶವಾಗಿದೆ ಎಂದರು.

ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಸತೀಶ್ ಹೊಸಮನಿ ಮಾತನಾಡಿ, ರಾಜ್ಯದ ಸಾಹಿತ್ಯ ಕ್ಷೇತ್ರದಲ್ಲಿ ವರ್ಷಕ್ಕೆ 6ರಿಂದ 7 ಸಾವಿರ ಪುಸ್ತಕಗಳನ್ನು ಪ್ರಕಟಿಸುವ ಮೂಲಕ ಎಲ್ಲ ಪ್ರಕಾಶನ ಸಂಸ್ಥೆಗಳು ನಾಡಿನ ಪುಸ್ತಕ ಸಂಸ್ಕೃತಿ ಉಳಿಸಿಕೊಂಡು ಬರುತ್ತಿವೆ. ಸಾಹಿತಿಗಳು, ಪ್ರಕಾಶನ ಸಂಸ್ಥೆಗಳು ಪುಸ್ತಕ ಖರೀದಿಸಿ ಗ್ರಂಥಾಲಯಕ್ಕೆ ಕಳುಹಿಸಿಕೊಡಲು ಸರ್ಕಾರಕ್ಕೆ ಅರ್ಜಿ ಹಾಕಬೇಕು. ಆಗ ಸಾಹಿತಿ ಮತ್ತು ಪುಸ್ತಕ ಉದ್ಯಮಕ್ಕೂ ನೆರವಾಗಲಿದೆ. ಸರ್ಕಾರರಿಂದ 2017ರಲ್ಲಿ ಖರೀದಿಸಿದ ಪುಸ್ತಕಗಳಿಗೆ ಶೇ.50 ಹಣ ಬಿಡುಗಡೆ ಮಾಡಲಾಗಿದ್ದು, ಉಳಿದ ಹಣ ಪಾವತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮನು ಬಳಿಗಾರ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಅಂಕಿತ ಪುಸ್ತಕ ಪ್ರಕಾಶನ 6 ಲಕ್ಷರೂ. ದತ್ತಿ ಇಟ್ಟು, ವಾರ್ಷಿಕವಾಗಿ ಪ್ರಕಾಶನ ವಿಭಾಗದಲ್ಲಿ ಸೇವೆ ಲ್ಲಿಸುವವರಿಗೆ ದತ್ತಿ ಪರಸ್ಕಾರ ನೀಡುತ್ತಿದೆ. ಆದರೆ, ಪ್ರಶಸ್ತಿ ಆಯ್ಕೆ ವೇಳೆ ಕಸಾಪ ಅರ್ಜಿ ಹಾಕದವರನ್ನೂ ಪರಿಗಣಿಸಲಾಗುತ್ತಿದೆ ಎಂದರು.  ಅಂಕಿತ ಪುಸ್ತಕ ಪ್ರಕಾಶನ ಮುಖ್ಯಸ್ಥ ಪ್ರಕಾಶ್ ಕಂಬತ್ತಳ್ಳಿ, ಕಸಾಪ ಗೌರವ ಕಾರ್ಯದರ್ಶಿ ಕೆ. ರಾಜಕುಮಾರ್, ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ ಮತ್ತಿತರರಿದ್ದರು.

ವಿಶ್ವದಲ್ಲಿ ಹೆಚ್ಚು ವೀಕ್ಷಣೆ ಪಡೆದ ಪೋರ್ಟಲ್ :

ರಾಜ್ಯದಲ್ಲಿ ೆ.16ರಂದು ‘ಕರ್ನಾಟಕ ಡಿಜಿಟಲ್ ಪಬ್ಲಿಕ್ ಲೈಬ್ರರಿ’ ಪೋರ್ಟಲ್ ಆರಂಭಿಸಲಾಗಿದ್ದು, ಈವರೆಗೆ 31.51 ಕೋಟಿ ಜನರು ಪೋರ್ಟಲ್ ವೀಕ್ಷಣೆ ಮಾಡಿದ್ದಾರೆ. ಈ ಮೂಲಕ ವಿಶ್ವದಲ್ಲಿ ಅತಿಹೆಚ್ಚು ವೀಕ್ಷಣೆಯಾದ ಡಿಜಿಟಲ್ ಪೋರ್ಟಲ್ ಎಂಬುದಕ್ಕೆ ಪಾತ್ರವಾಗಿದೆ. 2ನೇ ಸ್ಥಾನದಲ್ಲಿ ಅಮೆರಿಕ ಡಿಜಿಟಲ್ ಪೋರ್ಟಲ್, ಮೂರನೇ ಸ್ಥಾನದಲ್ಲಿ ಭಾರತದ ನ್ಯಾಷನಲ್ ಡಿಜಿಟಲ್ ಪೋರ್ಟಲ್ ಇದೆ. ಸಾಹಿತ್ಯ, ಶಿಕ್ಷಣ, ಸ್ಪರ್ಧಾತ್ಮಕ ಪುಸ್ತಕ, ಶಾಲಾ ಪುಸ್ತಕ, ನಿಯತಕಾಲಿಕೆ ಸೇರಿ 4.25 ಲಕ್ಷ ಪುಸ್ತಕಗಳು ಪೋರ್ಟಲ್‌ನಲ್ಲಿ ಲಭ್ಯವಿವೆ ಎಂದು ಗ್ರಂಥಾಲಯ ಇಲಾಖೆ ನಿರ್ದೇಶಕ ಸತೀಶ್ ಹೊಸಮನಿ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net