ನುಡಿಜಾತ್ರೆಯಷ್ಟೇ ಅಲ್ಲ ಚಿಂತಕರ ಸಭೆ: ಸಮ್ಮೇಳನದ ಉದ್ದೇಶ ಬಿಚ್ಚಿಟ್ಟ ಡಾ.ಮಹೇಶ ಜೋಶಿ

Kasapa President Mahesh Joshi in conversation Mandya
Published on

ಮಂಡ್ಯ: ಮೂರು ದಶಕದ ಬಳಿಕ ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದಿನಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವ 87ನೇ ನುಡಿಜಾತ್ರೆ ಉದ್ದೇಶವನ್ನು ಕನ್ನಡ ಸಾಹಿತ್ಯ ಪರಿಷತ್ ನಾಡೋಜ ಡಾ.ಮಹೇಶ ಜೋಶಿ ಬಹಿರಂಗೊಳಿಸಿದ್ದಾರೆ. ಅದರಂತೆ ಬದಲಾವಣೆಯ ಪರ್ವದ ಜತೆಗೆ ಆಡಳಿತ ನಡೆಸುವವರಿಗೆ ಮಾರ್ಗದರ್ಶನ ನೀಡುವ ಕೆಲಸವನ್ನು ಸಮ್ಮೇಳನದ ಮೂಲಕ ಮಾಡಲಾಗುವುದು ಎಂದಿದ್ದಾರೆ.
ನುಡಿಜಾತ್ರೆ ಹಿನ್ನೆಲೆಯಲ್ಲಿ ನಗರದ ಪ್ರೆಸ್‌ಕ್ಲಬ್‌ನಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸಿದ್ದ ವಾರದ ಅತಿಥಿ ಸಂವಾದದಲ್ಲಿ ಮಾತನಾಡಿದ ಅವರು, ಸಮ್ಮೇಳನವನ್ನು ಚಿಂತಕರ ಸಭೆ ಮಾಡಲು ಯೋಜನೆ ರೂಪಿಸಲಾಗಿದೆ. ಮುಖ್ಯವಾಗಿ ಕಾರ್ಯಗತವಾಗುವಂತಹ ನಿರ್ಣಯ ಮಾಡುವುದರ ಜತೆಗೆ ಅದನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕಸಾಪ ಹೆಜ್ಜೆಯನ್ನಿಡಲಿದೆ. ಇನ್ನು ಈ ಬಾರಿಯ ಸಮ್ಮೇಳನದಲ್ಲಿ ಸಾಹಿತ್ಯದ ಜತೆಗೆ ಕೃಷಿ, ನೀರಾವರಿ, ಪ್ರಕೃತಿ, ಪರಿಸರದ ವಿಷಯದ ಬಗ್ಗೆ ವಿಚಾರಗೋಷ್ಠಿ ನಡೆಯಲಿದೆ. ಮಾತ್ರವಲ್ಲದೆ ವಿವಾದ ಎನಿಸಿದರೂ ‘ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ರಾಜಕೀಯ’ದ ಕುರಿತು ಮೊದಲ ಬಾರಿಗೆ ಬಹಿರಂಗವಾಗಿ ಚರ್ಚೆಯಾಗಲಿದೆ ಎಂದರು.
ಅಂತೆಯೇ ಸರ್ಕಾರಿ ಶಾಲೆಗಳ ಹಿತ, ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ, ಸಮಗ್ರ ಕನ್ನಡ ಅಭಿವೃದ್ಧಿ ವಿಧೇಯಕದ ಬಗ್ಗೆ ಮೌಲ್ಯಯುತವಾದ ಚರ್ಚೆ ಮಾಡಲಾಗುವುದು. ಮಾತ್ರವಲ್ಲದೆ ವಿಷಯಕ್ಕೆ ಸಂಬಂಧಿಸಿದಂತೆ ಅದರಲ್ಲಿ ಪರಿಣಿತರನ್ನು ಆಹ್ವಾನಿಸಲಾಗುವುದು. ಈ ನಿಟ್ಟಿನಲ್ಲಿ ಈಗಾಗಲೇ ರಾಜ್ಯದ ಹಿರಿಯ ಸಾಹಿತಿಗಳು, ಅಕಾಡೆಮಿ ಹಾಗೂ ವಿಶ್ವವಿದ್ಯಾನಿಲಯಕ್ಕೆ ಪತ್ರ ಬರೆಯಲಾಗಿದೆ. ಅದರಂತೆ ಆ ಕಡೆಯಿಂದಲೂ ಪ್ರತ್ಯುತ್ತರ ಬರಲಾರಂಭಿಸಿದೆ. ಎಲ್ಲವನ್ನೂ ಕ್ರೂಢೀಕರಣ ಮಾಡಿಕೊಂಡು ಸಮ್ಮೇಳನವನ್ನು ಚಿಂತಕರ ಸಭೆಯನ್ನಾಗಿ ಮಾಡಲಾಗುವುದು. ಈ ಮೂಲಕ ಆಡಳಿತ ನಡೆಸುವವರಿಗೆ ಮಾರ್ಗದರ್ಶನ ನೀಡಲಾಗುವುದು. ಇದರೊಟ್ಟಿಗೆ ಹೊಸ ಚಿಂತನೆ, ಹೊಸತನವನ್ನು ತರುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿವೆ. ಮುಖ್ಯವಾಗಿ ಯುವ ಸಮೂಹವನ್ನು ನುಡಿಜಾತ್ರೆಯತ್ತ ಬರುವಂತೆ ಮಾಡಲು ಗಮನಹರಿಸಲಾಗುತ್ತಿದೆ ಎಂದು ವಿವರಿಸಿದರು.
ಸಮ್ಮೇಳನದ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಪಿ.ಪ್ರಕಾಶ್, ಉಪಾಧ್ಯಕ್ಷರಾದ ಕೆ.ಎನ್.ನವೀನ್‌ಕುಮಾರ್, ನಂಜೇಗೌಡ, ಪ್ರಧಾನ ಕಾರ್ಯದರ್ಶಿ ಆನಂದ್ ಇದ್ದರು.

ಸಾಹಿತ್ಯೇತರ ಕ್ಷೇತ್ರದವರಿಗೂ ಅವಕಾಶ
ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಮಾಡುವ ವಿಚಾರದ ಬಗ್ಗೆ ಹಲವು ಅಭಿಪ್ರಾಯ ವ್ಯಕ್ತವಾಗುತ್ತಿವೆ. ಈ ನಿಟ್ಟಿನಲ್ಲಿ ಸಾಹಿತ್ಯೇತರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರನ್ನೂ ಏಕೆ ಪರಿಗಣಿಸಬಾರದೆಂಬ ಪ್ರಶ್ನೆ ಪರಿಷತ್ ಮುಂದಿದೆ ಎಂದು ನಾಡೋಜ ಡಾ.ಮಹೇಶ ಜೋಶಿ ಸ್ಪಷ್ಟಪಡಿಸಿದರು.
ಕನ್ನಡ ನಾಡು, ನುಡಿ, ನೆಲ, ಜಲ, ಸಂಸ್ಕೃತಿ ಕ್ಷೇತ್ರದಲ್ಲೇ ಹೋರಾಟ ನಡೆಸಿಕೊಂಡು ಬರುತ್ತಿರುವವರನ್ನು ಆಯ್ಕೆ ಮಾಡುವಂತೆ, ಅತ್ತ ಮಾಧ್ಯಮ, ನ್ಯಾಯಾಂಗ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಅವಕಾಶ ಕೊಡಬೇಕೆಂದು ಸಲಹೆ ಕೇಳಿಬರುತ್ತಿದೆ. ಇತ್ತೀಚೆಗೆ ರಾಜ್ಯದ ಕೆಲ ಸ್ವಾಮೀಜಿಗಳು ಕೂಡ ಈ ಕುರಿತು ಅಭಿಪ್ರಾಯ ಸಲ್ಲಿಸಿದ್ದಾರೆ. ಇನ್ನು ಕಸಾಪ ಬೈಲಾ ಪ್ರಕಾರ ಕನ್ನಡ ನಾಡು, ನುಡಿ, ಜಲ, ನೆಲ, ಸಂಸ್ಕೃತಿಯ ಸೇವೆ ಮಾಡುತ್ತಿರುವವರು ಪರಿಷತ್‌ನ ಸೇವಕರೇ ಆಗಿದ್ದಾರೆ ಎನ್ನುತ್ತದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪರಿಷತ್ ಸ್ಥಾಪಿಸಿದ ಉದ್ದೇಶವೂ ಸಾಹಿತ್ಯ ಮತ್ತು ನೆಲ, ಜಲ, ಭಾಷೆಯ ಸಂರಕ್ಷಣೆ ಆಧ್ಯತೆ ಪಡೆದಿತ್ತು. ಅದನ್ನೇ ಸಾಹಿತ್ಯೇತರ ಕ್ಷೇತ್ರದವರು ಕೇಳುತ್ತಿದ್ದಾರೆ. ಅದರಂತೆ ಎಲ್ಲರ ಅಭಿಪ್ರಾಯವನ್ನು ಪಡೆದಿದ್ದೇನೆ. ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಚರ್ಚಿಸಿ ಅಧ್ಯಕ್ಷರು ಯಾರೆಂದು ಅಂತಿಮಗೊಳಿಸಲಾಗುವುದು ಎಂದರು.

ಸೌಕರ್ಯ ಕಲ್ಪಿಸುವುದೇ ಮುಖ್ಯ
ನಗರದ ಹೊರಭಾಗದಲ್ಲಿ ಸಮ್ಮೇಳನ ಆಯೋಜನೆಗೆ ಕೆಲವರು ಆಕ್ಷೇಪಿಸಿದ್ದಾರೆ. ಮಾತ್ರವಲ್ಲದೆ ಜನರನ್ನು ಕರೆತರಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಇದು ನನಗೆ ಆಶ್ಚರ್ಯ ಮೂಡಿಸಿದೆ. ಕನ್ನಡದ ಕಾರ್ಯಕ್ರಮಕ್ಕೆ ಜನರೇ ಬರುತ್ತಾರೆ. ಯಾರನ್ನೂ ಕರೆದುಕೊಂಡು ಬರಬೇಕಾದ ಸ್ಥಿತಿ ಇಲ್ಲ ಎಂದು ಡಾ.ಮಹೇಶ ಜೋಶಿ ಹೇಳಿದರು.
ಹಾವೇರಿಯಲ್ಲಿ 130 ಎಕರೆ ಪ್ರದೇಶದಲ್ಲಿ ಸಮ್ಮೇಳನ ಆಯೋಜಿಸಿದ್ದಾಗಲೂ ಕೆಲವು ಕೊರತೆ ಕಾಣಿಸಿಕೊಂಡಿತ್ತು. ಹೀಗಿರುವಾಗ ಮಂಡ್ಯ ನಗರದಲ್ಲಿ ಸಮಗ್ರವಾಗಿ ಸ್ಥಳ ಪರಿಶೀಲನೆ ನಡೆಸಿಯೇ ಅಂತಿಮಗೊಳಿಸಲಾಗುವುದು. ಮುಖ್ಯವಾಗಿ ನೆಲದ ಗಟ್ಟಿತನ, ಸಂಪರ್ಕ ವ್ಯವಸ್ಥೆ ನಮ್ಮ ಆದ್ಯತೆ. ಮುಖ್ಯವಾಗಿ ನೋಂದಣಿ ಮಾಡಿಕೊಂಡು ಸಮ್ಮೇಳನಕ್ಕೆ ಬರುವವರಿಗೆ ಮೂಲ ಸೌಕರ್ಯ ಕಲ್ಪಿಸಿಕೊಡಬೇಕು. ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಜಿಲ್ಲಾಡಳಿತ ಗಮನಹರಿಸಲಿದೆ ಎಂದರು.
ಈ ಸಮ್ಮೇಳನ ಶಾಲಾ ಮತ್ತು ಕಾಲೇಜು ರಜೆ ಇರುವ ಅವಧಿಯಲ್ಲಿ ನಡೆಯಲಿದೆ. ಆದರೆ, ಕಲುಬುರಗಿಯಲ್ಲಿ ವಾರದ ಮಧ್ಯ ಭಾಗದಲ್ಲಿ ನಡೆದಿದ್ದರೂ ನಿರೀಕ್ಷೆಗೂ ಮೀರಿ ಜನರು ಪಾಲ್ಗೊಂಡಿದ್ದರು. ಹಾವೇರಿಯಲ್ಲಿ ವಾರದ ಕೊನೆಯಲ್ಲಿ ನಡೆದ ಪರಿಣಾಮ 11 ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಇದೇ ಮಾದರಿಯಲ್ಲಿ ಮಂಡ್ಯದಲ್ಲೂ ಹೆಚ್ಚಿನ ಸಂಖ್ಯೆಯ ಕನ್ನಡಾಭಿಮಾನಿಗಳು ಬರುವ ನಿರೀಕ್ಷೆ ಇದ್ದು, ಅದಕ್ಕೆ ಅನುವಾಗುವಂತೆ ಶುಕ್ರವಾರ, ಶನಿವಾರ ಹಾಗೂ ಭಾನುವಾರ ನಡೆಸಲಾಗುತ್ತಿದೆ. ಈಗಾಗಲೇ ನೋಡಿರುವ ಜಾಗಕ್ಕೆ ಸಂಬಂಧಿಸಿದಂತೆ ಜಮೀನಿನ ಮಾಲೀಕರು ಕನ್ನಡದ ಕಾರ್ಯಕ್ರಮಕ್ಕೆ ಬಳಕೆ ಮಾಡಿಕೊಳ್ಳುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಆದರೂ ಅವರಿಗೆ ನಷ್ಟವಾಗದಂತೆ ಪರಿಹಾರ ನೀಡಲಾಗುವುದು ಎಂದರು.
ಪರಿಷತ್ ಸ್ಥಾಪನೆಗೆ ಕಾರಣರಾಗಿರುವ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ.ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್ ಅವರನ್ನು ಹೊರಗಿಟ್ಟು ಸಮ್ಮೇಳನ ನಡೆಸಲಾಗದು. ಅದರಂತೆ ಮೈಸೂರು ರಾಜವಂಶಸ್ಥರನ್ನೂ ಸಮ್ಮೇಳನಕ್ಕೆ ವಿಶೇಷವಾಗಿ ಆಹ್ವಾನಿಸಲಾಗುವುದು. ಈಗಾಗಲೇ ಸರ್‌ಎಂವಿ ಅವರ ಮೊಮ್ಮಗಳನ್ನು ಆಹ್ವಾನಿಸಿದ್ದೇವೆ ಎಂದರು.

mahesh joshi

ಕ್ಯೂ ಆರ್ ಕೋಡ್ ಜಾರಿ
ಕಳೆದ ಸಮ್ಮೇಳನದಲ್ಲಿ ನಕಲಿ ಗುರುತಿನ ಚೀಟಿ ಮಾಡಿ ಹಂಚಿಕೆ ಮಾಡಲಾಗಿತ್ತು. ಇದು ಸಾಕಷ್ಟು ಬೇಸರ ತರಿಸಿದ್ದ ವಿಷಯ. ಆದ್ದರಿಂದ ಹಿಂದೆ ನಡೆದ ತಪ್ಪನ್ನು ತಿದ್ದುಕೊಂಡಿದ್ದೇವೆ. ಈ ಬಾರಿ ತಪ್ಪು ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗುತ್ತಿದೆ ಎಂದು ಕಸಾಪ ಅಧ್ಯಕ್ಷರು ತಿಳಿಸಿದರು.
ಅದರಂತೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಗುರುತಿನ ಚೀಟಿ ಮಾಡಿಸಲಾಗುತ್ತಿದೆ. ಕ್ಯೂ ಆರ್ ಕೋಡ್ ಜತೆಗೆ ಜಿಪಿಎಸ್ ಟ್ರಾೃಕರ್ ಇರುವಂತೆ ನೋಡಿಕೊಳ್ಳಲಾಗುತ್ತಿದೆ. ಒಟ್ಟಾರೆ ಯಾವುದೇ ನ್ಯೂನತೆ ಬಾರದಂತೆ ನಾನೇ ಹೊಣೆಗಾರಿಕೆ ತೆಗೆದುಕೊಳ್ಳುವೆ. ಪಾರದರ್ಶನ ಖರ್ಚು, ವೆಚ್ಚ ಮಾಡುವುದಲ್ಲದೆ, ಹಿತಮಿತವಾಗಿ ಎಲ್ಲ ವ್ಯವಸ್ಥೆಯನ್ನೂ ಮಾಡಲಾಗುವುದು ಎಂದು ಭರವಸೆ ನೀಡಿದರು.

ಶ್ರೀರಂಗಪಟ್ಟಣ ಅಧ್ಯಕ್ಷರ ವಿರುದ್ಧ ಗಂಭೀರ ಆರೋಪ
ಶ್ರೀರಂಗಪಟ್ಟಣ ತಾಲೂಕು ಕಸಾಪ ನೂತನ ಅಧ್ಯಕ್ಷರ ವಿರುದ್ಧ ಸಂವಾದದಲ್ಲಿ ಸಾಕಷ್ಟು ಚರ್ಚೆ ನಡೆಯಿತು. ಆತ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪವಿದೆ. ಆದಾಗ್ಯೂ ಸ್ಥಳೀಯ ಶಾಸಕ ರಮೇಶ ಬಂಡಿಸಿದ್ದೇಗೌಡ ಶಿಫಾರಸಿನ ಮೇರೆಗೆ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಇದು ಸಾರ್ವಜನಿಕ ವಲಯದಲ್ಲಿ ಟೀಕೆಗೆ ಕಾರಣವಾಗಿದೆ ಎಂದು ಮಾಧ್ಯಮದವರು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಾ.ಮಹೇಶ ಜೋಶಿ, ಈ ಬಗ್ಗೆ ನನಗೆ ಸ್ಪಷ್ಟತೆ ಇಲ್ಲ. ಜಿಲ್ಲಾ ಕಸಾಪದಿಂದ ಕಳುಹಿಸಿರುವ ಶಿಫಾರಸಿನ ಮೇರೆಗೆ ವಿಶ್ವಾಸದ ಮೇಲೆ ಅನುಮತಿ ನೀಡಲಾಗುತ್ತದೆ. ಈ ಸಂಬಂಧ ದಾಖಲೆ ಪರಿಶೀಲಿಸಿ ತ್ವರಿತವಾಗಿ ಕ್ರಮ ವಹಿಸಲಾಗುವುದು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net