ಚರ್ಚೆಗಳಾದಷ್ಟು ಉತ್ತಮ ಫಲಿತಾಂಶ: ಕಸಾಪ ಅಧ್ಯಕ್ಷ ಡಾ.ಮಹೇಶ ಜೋಶಿ ಅಭಿಮತ

Kasapa President Dr. Mahesh Joshi press conference Mandya
Published on

ಮಂಡ್ಯ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗೆ ಸಂಬಂಧಿಸಿದಂತೆ ಸಾಹಿತ್ಯ ಅಥವಾ ಸಾಹಿತ್ಯೇತರರನ್ನು ಆಯ್ಕೆ ಮಾಡುವ ವಿಚಾರ ಸಾರ್ವಜನಿಕವಾಗಿ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಹಾಗೆ ನೋಡಿದರೆ ಇಂತಹ ಚರ್ಚೆಗಳು ತೀವ್ರವಾಗಿ ನಡೆದಷ್ಟು ಉತ್ತಮ ಫಲಿತಾಂಶ ದೊರಕುತ್ತದೆ. ಹೊಸ ಬದಲಾವಣೆಗೆ ನಾಂದಿ ಹಾಡುತ್ತವೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಹೇಳಿದರು.
ಚರ್ಚೆಗಳು ಪ್ರಜಾಸತ್ತೆಯ ಜೀವಾಳ. ಪ್ರಜಾಪ್ರಭುತ್ವದಡಿ ಚುನಾಯಿತ ಅಧ್ಯಕ್ಷನಾಗಿ ಸಾರ್ವಜನಿಕ ಅಭಿಪ್ರಾಯಗಳಿಗೆ ಮನ್ನಣೆ ನೀಡಬೇಕಾಗುತ್ತದೆ. ಸಲಹೆ, ಸೂಚನೆಗಳು ಅಭಿಪ್ರಾಯಗಳನ್ನು ನೇರವಾಗಿ ಕಾರ್ಯರೂಪಕ್ಕೆ ತರದೆ ಕಾರ್ಯಕಾರಿ ಸಮಿತಿಯಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
ಸಮ್ಮೇಳನಾಧ್ಯಕ್ಷತೆ ಆಯ್ಕೆಗೆ ಸಂಬಂಧಿಸಿದ ವಿವಾದಕ್ಕೆ ನಾನು ಕಾರಣನಲ್ಲ. ಯಾರನ್ನು ಆಯ್ಕೆ ಮಾಡಬೇಕೆನ್ನುವುದು ಸಾರ್ವಜನಿಕ ಸಲಹೆ, ಸೂಚನೆಗಳು, ಅಭಿಪ್ರಾಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಆ ಹಿನ್ನೆಲೆಯಲ್ಲಿ ಸ್ಪಷ್ಟಚಿತ್ರಣ ಕೊಡುವುದು ಅನಿವಾರ್ಯವಾಗಿದೆ. ಮುಖ್ಯವಾಗಿ ಈ ಚರ್ಚೆಯನ್ನು ಕಸಾಪ ಆರಂಭಿಸಿಲ್ಲ. ಸಾರ್ವಜನಿಕವಾಗಿ ನಡೆಯುತ್ತಿರುವ ಚರ್ಚೆಗೆ ನಾವು ಕಿವಿಯಾಗಿದ್ದೇವೆ, ಕಣ್ಣುಗಳನ್ನು ತೆರೆದು ನೋಡುತ್ತಿದ್ದೇವೆ. ಅದೇ ರೀತಿ ಇಂತಹ ವಿಷಯವನ್ನು ಒಪ್ಪಬಹುದು ಇಲ್ಲವೇ ನಿರಾಕರಿಸಬಹುದು ಎಂದು ಹೇಳಿದರು.
ಕಸಾಪ ಸಮ್ಮೇಳನ ಕುರಿತು ವಿವಾದಗಳ ಉಂಟಾಗುತ್ತಿರುವುದು ಇದೇ ಮೊದಲೇನಲ್ಲ. ಹತ್ತು ಹಲವಾರು ವಿವಾದಗಳು ಹಿಂದೆಯೂ ಸೃಷ್ಟಿಯಾಗಿವೆ. 1943ರಿಂದಲೂ ವಿವಾದಗಳು ಸೃಷ್ಟಿಯಾಗುತ್ತಲೇ ಬಂದಿವೆ. ಸಾಹಿತ್ಯ ಸಮ್ಮೇಳನಕ್ಕೆ ದ.ರಾ.ಬೇಂದ್ರೆ ಅಧ್ಯಕ್ಷರಾಗಿ ಆಯ್ಕೆಯಾದಾಗ ಪ್ರಗತಿಶೀಲ ಸಾಹಿತ್ಯಕ್ಕೆ ಅವಕಾಶ ನೀಡಲಿಲ್ಲವೆಂಬ ಕೂಗು ಶ್ರೀರಂಗ ಅವರಿಂದ ಕೇಳಿಬಂದಿತ್ತು. 1970ರಲ್ಲಿ ಡಾ. ದೇ.ಜವರೇಗೌಡರು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾದಾಗ ಕಿರಿ ವಯಸ್ಸಿನಲ್ಲೇ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತೆಂಬ ಕಾರಣಕ್ಕೆ ಕಾರ್ಯಕಾರಿ ಸಮಿತಿ ಒಪ್ಪಿಗೆ ಪಡೆಯದೆ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದ ಜಿ.ನಾರಾಯಣ ಅವರು ಏಕಪಕ್ಷೀಯ, ಸ್ವಜಾತಿ, ಪಕ್ಷಪಾತಿಯಾಗಿ ಆಯ್ಕೆ ಮಾಡಿದ್ದರೆಂಬ ಆರೋಪಗಳು ಕೇಳಿಬಂದಿದ್ದವು. 1990ರಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಡಾ.ಆರ್.ಸಿ.ಹಿರೇಮಠ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದಾಗ ಅವರು ಸಂಶೋಧಕರೆಂದೂ, ಬರಗಾರರಲ್ಲವೆಂದೂ ಪರ್ಯಾಯ ಸಮ್ಮೇಳನ ನಡೆಸಲಾಗಿತ್ತು. ಹಾವೇರಿಯಲ್ಲಿ 86ನೇ ಸಮ್ಮೇಳನಾಧ್ಯಕ್ಷರಾಗಿ ಡಾ.ದೊಡ್ಡರಂಗೇಗೌಡ ಅವರನ್ನು ಆಯ್ಕೆ ಮಾಡಿದಾಗ ಅವರು ಕೇವಲ ಗೀತ ರಚನೆಕಾರರು, ಕನ್ನಡ ಸಾಹಿತ್ಯಕ್ಕೆ ಅವರ ಪ್ರಮುಖ ಕೊಡುಗೆ ಇಲ್ಲ ಎಂಬ ಆಕ್ಷೇಪ ಕೇಳಿಬಂದಿತ್ತು. ಹೀಗೆ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಹಲವಾರು ವಿವಾದಗಳು ಹಿಂದೆಯೂ ಸೃಷ್ಟಿಯಾಗಿದ್ದವು ಎಂದು ವಿವರಿಸಿದರು.
ವಿವಿಧ ಕ್ಷೇತ್ರಗಳ ಸಾಧಕರಿಗೆ ಬೇರೆ ವೇದಿಕೆಗಳಲ್ಲಿ ಅವಕಾಶವಿದೆ. ಸಾಹಿತಿಗಳಿಗೆ ಇರುವುದು ಸಾಹಿತ್ಯ ಸಮ್ಮೇಳನ ಒಂದೇ. ಇನ್ನಾವುದೂ ಇಲ್ಲ ಎಂಬ ವಾದಕ್ಕೆ ಸಾಹಿತಿಗಳಿಗಾಗಿಯೇ ಜ್ಞಾನಪೀಠ ಪ್ರಶಸ್ತಿ ಇದೆ. ಕೇಂದ್ರ-ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳಿವೆ. ನಮಗೆ ಯಾವ ಮನ್ನಣೆ ಇದೆ. ನಾಡು-ನುಡಿಗಾಗಿ, ಕನ್ನಡ ಸ್ವಾಭಿಮಾನಕ್ಕೆ ಹೋರಾಡುತ್ತಿರುವ ಸಂಘಟಕರು, ಹೋರಾಟಗಾರರು, ಪರಿಚಾರಕರಿಗೆ ಮನ್ನಣೆ ದೊರಕದೆ ಜನಪ್ರಿಯ ಸಾಹಿತಿಗಳನ್ನೇ ಪರಿಗಣಿಸಲಾಗುತ್ತಿದೆ ಎಂಬ ಆಪಾದನೆಯೂ ಕೇಳಿಬಂದಿದೆ ಎಂದು ಹೇಳಿದರು.
ಇನ್ನು ಮಂಡ್ಯದಲ್ಲಿ ನಡೆಯಲಿರುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಡಾ.ಲತಾ ರಾಜಶೇಖರ್, ಡಾ.ರಾಮೇಗೌಡ (ರಾಗೌ) , ಡಾ.ನಾಗತಿಹಳ್ಳಿ ಚಂದ್ರಶೇಖರ್, ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರಿ, ಇಂದಿರಾ ಕೃಷ್ಣಪ್ಪ, ಪ್ರೊ.ಮಾಲತಿ ಪಟ್ಟಣಶೆಟ್ಟಿ, ಪ್ರೊ.ಕೆ.ಎಸ್.ಭಗವಾನ್, ಎಚ್.ಡಿ.ದೇವೇಗೌಡ, ದೇವನೂರು ಮಹಾದೇವ, ಕುಂ.ವೀರಭದ್ರಪ್ಪ, ಗಿರೀಶ್ ಕಾಸರವಳ್ಳಿ ಹೆಸರನ್ನು ಹಲವರು ಶಿಫಾರಸು ಮಾಡಿದ್ದಾರೆ. ಜೆ.ಎಂ.ರಾಜಶೇಖರ್ ಎಂಬುವರು ತಮ್ಮ ಹೆಸರನ್ನು ತಾವೇ ಶಿಫಾರಸು ಮಾಡಿಕೊಂಡಿದ್ದಾರೆ. ನಾನು ಕನ್ನಡಕ್ಕೆ ಸಂಬಂಧಿಸಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದೇನೆ. ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ನನ್ನನ್ನೇ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಬೇಕು ಎಂದಿರುವುದು ವಿಶೇಷವಾಗಿದೆ ಎಂದರು.
ಕಸಾಪ ಕೋಶಾಧ್ಯಕ್ಷ ಪಟೇಲ್ ಪಾಂಡು, ಸಮ್ಮೇಳನದ ಜಿಲ್ಲಾ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ, ಹರ್ಷ ಪಣ್ಣೆದೊಡ್ಡಿ, ಕೃಷ್ಣೇಗೌಡ ಹುಸ್ಕೂರು, ಅಪ್ಪಾಜಪ್ಪ, ಸುಜಾತಾ ಕೃಷ್ಣ, ಚಂದ್ರಲಿಂಗು ಹಾಜರಿದ್ದರು.

ಮುಕುಂದರಾಜ್ ಚುನಾವಣೆಗೆ ಸ್ಪರ್ಧಿಸಿ ಗೆಲ್ಲಲಿ
ಸಾಹಿತಿಗಳು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದರೆ ಸಾಹಿತ್ಯೇತರರನ್ನು ಆಯ್ಕೆ ಮಾಡಬೇಕೆನ್ನುವ ಚರ್ಚೆಗೆ ಅವಕಾಶವಿರುತ್ತಿರಲಿಲ್ಲ ಎಂಬ ಕರ್ನಾಟಕ ಸಾಹಿತ್ಯ ಪರಿಷತ್ ಅಧ್ಯಕ್ಷ ಎನ್.ಎಲ್.ಮುಕುಂದರಾಜ್ ಹೇಳಿಕೆಗೆ ತಿರುಗೇಟು ನೀಡಿದ ಡಾ.ಮಹೇಶ ಜೋಶಿ, ನಾನು ಸರ್ಕಾರದಿಂದ ನಾಮನಿರ್ದೇಶನಗೊಂಡ ಅಧ್ಯಕ್ಷನಲ್ಲ. ಚುನಾವಣೆಗೆ ಸ್ಪರ್ಧಿಸಿ ಪರಿಷತ್ ಸದಸ್ಯರಿಂದ ಆಯ್ಕೆಯಾದವನು. ನನ್ನೆದುರು ಸ್ಪರ್ಧಿಸಿದ 20 ಜನರು ಠೇವಣಿ ಕಳೆದುಕೊಂಡಿದ್ದಾರೆ. ಮುಕುಂದರಾಜ್ ಅವರಿಗೆ ಧೈರ್ಯವಿದ್ದರೆ ಚುನಾವಣೆಗೆ ಸ್ಪರ್ಧಿಸಿ ಗೆಲ್ಲಲಿ ಎಂದು ಸವಾಲು ಹಾಕಿದರು.
ಪರಿಷತ್ ಅಧ್ಯಕ್ಷರಾಗಿದ್ದ ಹರಿಕೃಷ್ಣ ಪುನರೂರು, ಪುಂಡಲೀಕ ಹಾಲಂಬಿ, ಡಾ.ಮನು ಬಳಿಗಾರ್ ಸೇರಿದಂತೆ ಇತರರೇನು ಸಾಹಿತಿಗಳಾಗಿದ್ದರೇ?. ಆದ್ದರಿಂದ ಮಾತನಾಡುವಾಗ ಜಾಗೃತರಾಗಿರಬೇಕು. ನಾವೇನೂ ಸಾಹಿತಿ ವಿರೋಧಿಗಳೇನಲ್ಲ. ಸಾಹಿತ್ಯೇತರರಿಂದ ಬಂದಿರುವ ಅಭಿಪ್ರಾಯಗಳನ್ನು ತೆರೆದಿಟ್ಟಿದ್ದೇವೆ. ಯಾವುದೂ ಅಂತಿಮ ನಿರ್ಧಾರವಾಗಿಲ್ಲ. ಸಾಹಿತಿಗಳೇ ಸಮ್ಮೇಳನಾಧ್ಯಕ್ಷರಾಗಬೇಕೆಂಬ ನಿಬಂಧನೆಯೇನೂ ಇಲ್ಲ. ಇಲ್ಲಿಯವರೆಗೆ ನಡೆದಿರುವ ಸಮ್ಮೇಳನಗಳಲ್ಲೂ ಮಹಿಳಾ ಸಾಹಿತಿಗೆ ಸಮಾನ ಪ್ರಾಶಸ್ತ್ಯ ನೀಡಿಲ್ಲ. ಮೇಲ್ಜಾತಿಯವರಿಗೆ, ಶೋಷಿತ ಸಮುದಾಯದವರಿಗೆ, ಪ್ರಗತಿಪರ ಸಾಹಿತಿಗಳಿಗೆ ಸಮಾನವಾದ ಅವಕಾಶ ನೀಡಿಲ್ಲವೆಂಬ ಮಾತುಗಳೂ ಕೇಳಿಬಂದಿವೆ. ಹಾಗಾಗಿ ಸಾಹಿತ್ಯ ಪರಿಷತ್‌ಗೆ ಮಡಿವಂತಿಕೆ ಇರಬಾರದು. ಅದನ್ನು ಜನಸಾಮಾನ್ಯರ ಪರಿಷತ್ತಾಗಿಸಿದ್ದು, ಹೊಸತನಕ್ಕೆ ತೆರೆದುಕೊಳ್ಳುವಂತೆ ಮಾಡುವುದು ನಮ್ಮ ಆಶಯವಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net