

ಮಂಜುನಾಥ ಎಸ್. ಅಂಗಡಿ ಧಾರವಾಡ
ದಶಕಗಳ ನಂತರ ಧಾರವಾಡಕ್ಕೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯ ಲಭಿಸಿತ್ತು. 2019ರ ಜನವರಿಯಲ್ಲಿ 3 ದಿನಗಳ ಕಾಲ ಕನ್ನಡದ ಜಾತ್ರೆ ಅದ್ಧೂರಿಯಾಗಿ ಜರುಗಿತ್ತು. ಸಮ್ಮೇಳನ ಮುಗಿದು 6 ವರ್ಷಗಳಾದರೂ 27 ಲಕ್ಷ ರೂಪಾಯಿ ಉಳಿಕೆ ಹಣ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಖಾತೆಗೆ ವರ್ಗಾಯಿಸಿಲ್ಲ.
2019ರ ಜನವರಿ 4ರಿಂದ 6ರವರೆಗೆ ವಿದ್ಯಾಕಾಶಿ ಧಾರವಾಡದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತ್ತು. ಅಂದಿನ ಜಿಲ್ಲಾಧಿಕಾರಿ ದೀಪಾ ಚೋಳನ್ ಅತ್ಯಂತ ಮುತುವರ್ಜಿ ವಹಿಸಿ ಸಮ್ಮೇಳನ ಸಂಘಟಿಸಿದ್ದರು. ಸಮ್ಮೇಳನ ಆಯೋಜನೆ, ಖರ್ಚು- ವೆಚ್ಚಕ್ಕೆ ರಾಜ್ಯ ಸರ್ಕಾರದಿಂದ 10 ಕೋಟಿ ರೂಪಾಯಿ ಬಿಡುಗಡೆಯಾಗಿತ್ತು.
ಸರ್ಕಾರದ ಅನುದಾನವಲ್ಲದೆ ಸಮ್ಮೇಳನದಲ್ಲಿ ಭಾಗವಹಿಸುವ ಪ್ರತಿನಿಧಿಗಳಿಗೆ ವಿಧಿಸಿದ್ದ ಶುಲ್ಕ, ವಾಣಿಜ್ಯ ಮಳಿಗೆಗಳು, ಪುಸ್ತಕ ಮಳಿಗೆಗಳು ಮತ್ತು ಉದ್ದಿಮೆದಾರರಿಂದ ದೇಣಿಗೆ ರೂಪದಲ್ಲಿ ಸುಮಾರು 2 ಕೋಟಿ ರೂಪಾಯಿಗೂ ಹೆಚ್ಚು ಹಣ ಸಂಗ್ರಹವಾಗಿತ್ತು. ಜಿಲ್ಲಾಧಿಕಾರಿ ಹಾಗೂ ಕಸಾಪ ಜಂಟಿ ಬ್ಯಾಂಕ್ ಖಾತೆಗೆ ಈ ಹಣ ಜಮೆಯಾಗಿತ್ತು. ಸರ್ಕಾರದ ಅನುದಾನವಲ್ಲದೆ, ದೇಣಿಗೆ ಹಣದಲ್ಲೂ ಖರ್ಚು ಮಾಡಲಾಗಿದೆ. 2 ಕೋಟಿ ರೂಪಾಯಿಯಲ್ಲಿ ಸುಮಾರು 25 ಲಕ್ಷ ರೂ. ಉಳಿದಿತ್ತು. 2019ರಿಂದ ಈವರೆಗಿನ ಬಡ್ಡಿ ಸೇರಿ ಜಂಟಿ ಖಾತೆಯಲ್ಲಿ 27,05,339 ರೂಪಾಯಿ ಇದೆ. ಕಸಾಪ ಪದಾಽಕಾರಿಗಳು ಜಿಲ್ಲಾಧಿಕಾರಿ ಕಚೇರಿಗೆ ಮೇಲಿಂದ ಮೇಲೆ ಅಲೆದಾಡಿದರೂ ಉಳಿಕೆ ಹಣ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಖಾತೆಗೆ ವರ್ಗಾಯಿಸುತ್ತಿಲ್ಲ.
* 4ನೇ ಜಿಲ್ಲಾಽಕಾರಿಗೆ ಮನವಿ:
ಧಾರವಾಡದ ನಂತರ ಕಲಬುರಗಿ, ಹಾವೇರಿ, ಮಂಡ್ಯ ಸಮ್ಮೇಳನಗಳು ಜರುಗಿವೆ. ಬಳ್ಳಾರಿ ಸಮ್ಮೇಳನಕ್ಕೆ ತಯಾರಿ ನಡೆದಿದೆ. ಧಾರವಾಡದ ಸಮ್ಮೇಳನ ಮುಗಿದ ನಂತರ ಜಿಲ್ಲಾಽಕಾರಿಗಳಾದ ದೀಪಾ ಚೋಳನ್, ನಿತೇಶ ಪಾಟೀಲ, ಗುರುದತ್ತ ಹೆಗಡೆ ಅವರಿಗೆ ಭೇಟಿ ಮಾಡಲಾಗಿದೆ. ಪ್ರಸ್ತುತ ದಿವ್ಯ ಪ್ರಭು ಜಿಲ್ಲಾಽಕಾರಿಯಾಗಿ ಸುಮಾರು 18 ತಿಂಗಳಾಗಿದೆ. ನಾಲ್ಕೂ ಜಿಲ್ಲಾಽಕಾರಿಗಳಿಗೆ ಮನವಿ ಸಲ್ಲಿಸಿದಾಗೊಮ್ಮೆ ಭರವಸೆ ಮಾತ್ರ ಸಿಗುತ್ತಿದೆ. ಆದರೆ, ಯಾರೂ ಬಾಕಿ ಹಣ ವರ್ಗಾವಣೆಗೆ ಇಚ್ಚಾಶಕ್ತಿ ತೋರುತ್ತಿಲ್ಲ ಎಂದು ಕಸಾಪ ಪದಾಧಿಕಾರಿಗಳು ಬೇಸರ ವ್ಯಕ್ತಪಡಿಸುತ್ತಾರೆ.
* ಲೆಕ್ಕಪರಿಶೋಧನೆ ಆಗಿಲ್ಲ:
6 ವರ್ಷ ಕಳೆದರೂ ಸಮ್ಮೇಳನದ ಉಳಿಕೆ ಹಣದ ಲೆಕ್ಕಪರಿಶೋಧನೆ ಆಗಿಲ್ಲ ಎಂದು ತಿಳಿದುಬಂದಿದೆ. ಮತ್ತೊಂದೆಡೆ ಪರಿಷತ್ ಭವನದ ನವೀಕರಣ, ಆವರಣದಲ್ಲಿ ಸಾಂಸ್ಕೃತಿಕ ಬಯಲು ರಂಗಮ0ದಿರ ನಿರ್ಮಿಸಲು ನಿರ್ಧರಿಸಲಾಗಿದೆ. ಉಳಿಕೆ ಹಣವನ್ನು ನೇರವಾಗಿ ಅಭಿವೃದ್ಧಿ ಕಾರ್ಯಗಳಿಗೆ ಬಳಸಲು ಬರುವುದಿಲ್ಲ. ಈ ಎಲ್ಲ ವಿಚಾರಗಳನ್ನು ಕೇಂದ್ರ ಪರಿಷತ್ ಅಧ್ಯಕ್ಷರ ಗಮನಕ್ಕೂ ತರಲಾಗಿದೆ. ಅವರೂ ಜಿಲ್ಲಾಽಕಾರಿಗಳಿಗೆ ಪತ್ರ ಬರೆದು ಉಳಿಕೆ ಹಣ ಜಮಾ ಮಾಡಲು ವಿನಂತಿಸಿದರೂ ಪ್ರಯೋಜನವಾಗಿಲ್ಲ.
* ಏನಿದೆ ಕಸಾಪ ಬೈಲಾ ನಿಯಮಾವಳಿ...?
ಕಸಾಪ ಬೈಲಾ ನಿಯಮಾವಳಿ 34/01ರ ಅನ್ವಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಉಳಿಕೆ ಹಣವನ್ನು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು. ಸಮ್ಮೇಳನದ ಲೆಕ್ಕಪತ್ರಗಳನ್ನು ಸ್ವಾಗತ ಸಮಿತಿ ಲೆಕ್ಕಪರಿಶೋಧನೆ (ಆಡಿಟ್) ಮಾಡಿಸಬೇಕು. ಉಳಿಕೆ ಹಣವನ್ನು ಕೇಂದ್ರ ಪರಿಷತ್ ಜಿಲ್ಲಾ ಘಟಕದ ಅಭಿವೃದ್ಧಿಗೆ ವೆಚ್ಚ ಮಾಡಲು ನೀಡುತ್ತದೆ. ಕಸಾಪ ಪದಾಽಕಾರಿಗಳು ಬೈಲಾ ನಿಯಮಾವಳಿಯ ಮಾಹಿತಿ ಸಮೇತ ಹಿಂದಿನ ಮತ್ತು ಈಗಿನ ಜಿಲ್ಲಾಽಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.
ಸಮ್ಮೇಳನದ ಉಳಿಕೆ ಹಣವನ್ನು ಲೆಕ್ಕಪತ್ರ ಪರಿಶೋಧನಾ ವರದಿಯೊಂದಿಗೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಖಾತೆಗೆ ವರ್ಗಾಯಿಸಬೇಕು. ಹಿಂದಿನ 3 ಹಾಗೂ ಈಗಿನ ಜಿಲ್ಲಾಽಕಾರಿಗಳಿಗೆ ಹತ್ತಾರು ಮನವಿ ಸಲ್ಲಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ವಿನಂತಿಸಿದರೂ ಉಳಿಕೆ ಹಣ ವರ್ಗಾಯಿಸುತ್ತಿಲ್ಲ. ಜಿಲ್ಲಾಡಳಿತದ ನಿರ್ಲಕ್ಷ÷್ಯ ಹೀಗೇ ಮುಂದುವರಿದರೆ ಪದಾಧಿಕಾರಿಗಳು, ಸದಸ್ಯರೊಂದಿಗೆ ಧರಣಿ ಕೂಡಲಾಗುವುದು.
- ಡಾ. ಲಿಂಗರಾಜ ಅಂಗಡಿ, ಕಸಾಪ ಜಿಲ್ಲಾಧ್ಯಕ್ಷ