ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಸ್ಥಳ ಪರಿಶೀಲನೆ: ಅಧಿಕಾರಿಗಳು, ಕಸಾಪ ಪದಾಧಿಕಾರಿಗಳು ಭಾಗಿ

18_01_Mdy_05(Kasapa)
Published on

ಮಂಡ್ಯ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಡಿಸೆಂಬರ್‌ನಲ್ಲಿ ಮಂಡ್ಯದಲ್ಲಿ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಪ್ರಾಥಮಿಕ ಹಂತವಾಗಿ ಜಿಲ್ಲಾಡಳಿತ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸ್ಥಳ ಪರಿಶೀಲನೆ ನಡೆಸಲಾಯಿತು.

ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ತಹಸೀಲ್ದಾರ್ ಕುಂಞ ಅಹಮದ್ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಕೆ.ರವಿಕುಮಾರ ಚಾಮಲಾಪುರ ನೇತೃತ್ವದಲ್ಲಿ ಮೊದಲು ಚಿಕ್ಕಮಂಡ್ಯ ರಸ್ತೆಯಲ್ಲಿರುವ ವಿಶಾಲವಾದ ಕೃಷಿ ಭೂಮಿಯ ನೂರಾರು ಎಕರೆ ಜಾಗವನ್ನು ಪರಿಶೀಲಿಸಲಾಯಿತು. ಸಮ್ಮೇಳನ ನಡೆಯುವ ಡಿಸೆಂಬರ್ ವೇಳೆಗೆ ಇರಬಹುದಾದ ಮಳೆ ಬೆಳೆಯ ಸ್ಥಿತಿಗತಿಯ ವಿವರ, ಪ್ರಧಾನ ವೇದಿಕೆ ನಿರ್ಮಾಣ, ಪರ್ಯಾಯ ವೇದಿಕೆಗಳ ರಚನೆ, ಪಾರ್ಕಿಂಗ್‌ಗೆ ಬೇಕಾಗುವ ಸ್ಥಳಾವಕಾಶ, ಊಟದ ವ್ಯವಸ್ಥೆ ಮಾಡಲು, ಪುಸ್ತಕ ಮಳಿಗೆ-ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕೆ ಬೇಕಾದ ಸ್ಥಳಾವಕಾಶದ ವಿವರ ಪಡೆದುಕೊಂಡರು.

ಈ ವೇಳೆ ಕೊಮ್ಮೇರಹಳ್ಳಿ ವಿಶ್ವ ಮಾನವ ಕ್ಷೇತ್ರದ ಪರಿಶೀಲನೆ ನಡೆಸಿ ಪುರುಷೋತ್ತಮಾನಂದನಾಥ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿಯವರು ತಮ್ಮ ಮಠದ ವತಿಯಿಂದ ಸಮ್ಮೇಳನಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂಬ ಭರವಸೆಯನ್ನು ನೀಡಿದರು.

ನಂತರ ಬೆಂಗಳೂರು-ಮೈಸೂರು ಹೆದ್ದಾರಿ ಅಮರಾವತಿ ಹೋಟೆಲ್ ಹಿಂಭಾಗದಲ್ಲಿ ಅಸ್ತಿತ್ವದಲ್ಲಿರುವ ನಿವೇಶನವನ್ನು ಪರಿಶೀಲಿಸಿದರು. ಅಲ್ಲಿಯೂ ಸಹ ನೂರಾರು ಎಕರೆ ಸ್ಥಳಾವಕಾಶವಿದ್ದು ಹೇಗೆ ಬಳಸಿಕೊಳ್ಳಬಹುದು. ಸಾರಿಗೆ ವ್ಯವಸ್ಥೆ ಸೇರಿದಂತೆ ಮುಂದಿನ ಆಗುಹೋಗುಗಳ ಬಗ್ಗೆ ಪರಾಮರ್ಶೆ ನಡೆಸಿದರು. ಸಮ್ಮೇಳನಕ್ಕೆ ಆಗಮಿಸುವ ಪ್ರತಿನಿಧಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸುವ ದೃಷ್ಟಿಯಿಂದ ನಗರದ ಹೊಳಲು ರಸ್ತೆಯಲ್ಲಿರುವ ವಿದ್ಯಾರ್ಥಿನಿಲಯ, ಕೊಮ್ಮೇರಹಳ್ಳಿ ಶಾಲಾ ಕಾಲೇಜು ವಸತಿ ನಿಲಯ, ಜೆಎಸ್‌ಎಸ್ ಶಿಕ್ಷಣ ಸಂಸ್ಥೆ, ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಆದಿಚುಂಚನಗಿರಿ ಸಮುದಾಯ ಭವನ ಬಳಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಲಾಯಿತು.

ಚಿಕ್ಕಮಂಡ್ಯ ಗ್ರಾಮ ಪಂಚಾಯಿತಿ ಸದಸ್ಯ ಬೋರೇಗೌಡ, ಜಿಲ್ಲಾ ಕಸಾಪ ಪದಾಧಿಕಾರಿಗಳಾದ ಧನಂಜಯ ದರಸಗುಪ್ಪೆ, ಬಿ.ಎಂ.ಅಪ್ಪಾಜಪ್ಪ, ಹೊಳಲು ಶ್ರೀಧರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net