

ಮಂಡ್ಯ: ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ ಕವಿಗೋಷ್ಠಿಗಳು ಪೂರಕ ಎಂದು ಕಸಾಪ ಮಾಜಿ ಜಿಲ್ಲಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಹೇಳಿದರು.
ನಗರದ ಹೊಸಹಳ್ಳಿ 2ನೇ ಬ್ಲಾಕ್‌ನಲ್ಲಿ ಕಸಾಪ ಗೌರವ ಕಾರ್ಯದರ್ಶಿ ಜಿ.ಧನಂಜಯ ದರಸಗುಪ್ಪೆ ಅವರ ಗೃಹಪ್ರವೇಶದ ಅಂಗವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ಆಯೋಜಿಸಿದ್ದ ಕವಿಗೋಷ್ಠಿ, ಕೃತಿ ಬಿಡುಗಡೆ ಹಾಗೂ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಾಷೆ ಬೆಳೆವಣಿಗೆಗೆ ಸಾಹಿತ್ಯ ಅಳತೆ ಗೋಲಾಗುತ್ತದೆ. ಸಾಹಿತ್ಯಕ್ಕೆ ಭಾಷೆಯ ಪ್ರಭುತ್ವ ಬಹಳ ಮುಖ್ಯವಾಗುತ್ತದೆ ಎಂದರು.
ಸಾಹಿತ್ಯ ಮೊದಲು ಪ್ರಾರಂಭವಾಗಿರುವುದು ಒಂದು ಕಾವ್ಯದಿಂದ ಇರಬಹುದು, ಜಾನಪದ ಗೀತೆಗಳಿಂದ ಇರಬಹುದು. ಹಾಗಾಗಿ ಕವನಗಳು, ನೂರಾರು ಭಾವತರಂಗಗಳು ಕವಿಯಿಂದ ಸಾಹಿತ್ಯ ರೂಪವಾಗಿ ಹೊರಹೊಮ್ಮುತ್ತವೆ. ಪ್ರಕೃತಿ, ಹಾಸ್ಯಪ್ರಜ್ಞೆ, ಸಾಮಾನ್ಯವಾದ ಚಿತ್ರಣವನ್ನು ಅಸಾಮಾನ್ಯವಾಗಿ ಚಿತ್ರಿಸುವುದು, ಚಿತ್ರ-ವಿಚಿತ್ರ ಅನುಭವಗಳು, ಪ್ರಕೃತಿಯ ಅನುಭವಗಳನ್ನು ಕವಿತೆಯ ಮೂಲಕ ಅನಾವರಣಗೊಳಿಸುವುದಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ ಸಾಹಿತಿ ಡಾ.ಎಚ್.ಎಸ್.ಮುದ್ದೇಗೌಡ ಮಾತನಾಡಿ, ಕಾವ್ಯ ಎನ್ನುವುದು ಸುಖಾಸುಮ್ಮನೆ ಹುಟ್ಟುವುದಿಲ್ಲ. ಅದಕ್ಕೆ ಸಂಸ್ಕಾರ ಬೇಕು. ಕಾವ್ಯದಲ್ಲಿ ಶ್ರದ್ಧೆ ಮುಖ್ಯ. ಬರವಣಿಗೆ-ಕಾವ್ಯವನ್ನು ಉಸಿರಾಗಿಸಿಕೊಳ್ಳಬೇಕು. ಅನುಭವಗಳನ್ನು ಅಕ್ಷರ ರೂಪಕ್ಕೆ ತರಬೇಕು. ಅನುಭವವಿಲ್ಲದೆ ಯಾವ ಕಾವ್ಯವನ್ನೂ ಬರೆಯಲು ಸಾಧ್ಯವಿಲ್ಲ. ಒಂದು ವೇಳೆ ಹಠಕ್ಕೆ ಬಿದ್ದು ಬರೆದರೆ ಅದು ನೀರಸ ಸಂಗತಿಯಾಗುತ್ತದೆಯೇ ಹೊರತು, ಕಾವ್ಯವಾಗಲು ಸಾಧ್ಯವಿಲ್ಲ ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಸಿ.ಕೆ.ರವಿಕುಮಾರ ಚಾಮಲಾಪುರ, ಬೆಳಕು ಲಯನ್ಸ್ ಸಂಸ್ಥೆ ಅಧ್ಯಕ್ಷ ಹೊಸಹಳ್ಳಿ ಶೇಖರ್, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಜಿ.ಧನಂಜಯ ದರಸಗುಪ್ಪೆ, ಮಂಜು ಮುತ್ತೇಗೆರೆ, ಬಿ.ಎಂ.ಅಪ್ಪಾಜಪ್ಪ, ಭಾಸ್ಕರ್, ಡಾ.ಕೃಷ್ಣೇಗೌಡ ಹುಸ್ಕೂರು, ಸಾಹಿತಿ ಕೊನಾಪು ಇತರರಿದ್ದರು. ಇದೇ ಸಂದರ್ಭದಲ್ಲಿ ಹಲವು ಕವಿಗಳು ವಿವಿಧ ಕವನ-ಕವಿತೆಗಳನ್ನು ವಾಚಿಸಿದರು.