

ಕೋಲಾರ: ಉಪನ್ಯಾಸಕರಿಬ್ಬರು ಕೈಕೈ ಮಿಲಾಯಿಸಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆಗೆ ನಗರದ ಸರ್ಕಾರಿ ಜೂನಿಯರ್ ಕಾಲೇಜು ಸಾಕ್ಷಿಯಾಗಿದೆ.
ಹೌದು, ಕಾಲೇಜಿನ ಉಪನ್ಯಾಸಕರೂ ಆಗಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ನಿಕಟಪೂರ್ವ ಅಧ್ಯಕ್ಷರಾದ ನಾಗಾನಂದ ಕೆಂಪರಾಜ್ ಹಾಗೂ ಜೆ.ಜಿ.ನಾಗರಾಜ್, ನಡುವೆ ಮಂಗಳವಾರ ಮಾರಾಮಾರಿ ನಡೆದು, ಸಣ್ಣಪುಟ್ಟ ಗಾಯಗಳಾಗಿ ನಗರದ ಜಿಲ್ಲಾ ಎಸ್‌ಎನ್‌ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಈ ಇಬ್ಬರು ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದು, ಈ ಹಿಂದೆ ನಡೆದಿದ್ದ ಸಾಹಿತ್ಯ ಪರಿಷತ್ ಚುನಾವಣೆಯ ಸಂದರ್ಭದಿಂದಲೂ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳಿದ್ದವು ಎನ್ನಲಾಗಿದೆ.
ಮಂಗಳವಾರ ಎಂದಿನಂತೆ ಕಾಲೇಜಿಗೆ ಹಾಜರಾದ ನಾಗಾನಂದ ಕೆಂಪರಾಜ್ ಹಾಗೂ ಜೆ.ಜಿ.ನಾಗರಾಜ್ ಅವರು ಪರಸ್ಪರ ಎದುರಾಗಿದ್ದಾರೆ. ಸ್ವಲ್ಪ ಹೊತ್ತಿಗೆ ಕಚೇರಿಯಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಪ್ರಾಂಶುಪಾಲರು, ಇತರ ಉಪನ್ಯಾಸಕರ ಸಮ್ಮುಖದಲ್ಲೇ ಕೈಕೈ ಮಿಲಾಯಿಸಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ. ಕಚೇರಿಯಲ್ಲಿ ಇಬ್ಬರ ನಡುವೆ ಆಗಿರುವ ಸಂಭಾಷಣೆಯ ವಿಡಿಯೋ ವೈರಲ್ ಆಗಿದೆ.
ಹಲವು ವರ್ಷಗಳಿಂದ ಜೆ.ಜಿ.ನಾಗರಾಜ್ ಹಾಗೂ ನಾಗಾನಂದ ಕೆಂಪರಾಜ್ ಒಟ್ಟಿಗೆ ಕನ್ನಡ ಸಾಹಿತ್ಯ ಪರಿಷತ್ ಮೂಲಕ ಜಿಲ್ಲೆಯಲ್ಲಿ ಕನ್ನಡ ಕಾರ್ಯಕ್ರಮಗಳನ್ನು ವಿಜೃಭಣೆಯಿಂದ ಆಯೋಜಿಸುತ್ತಿದ್ದರು. ಕಳೆದ ಚುನಾವಣೆಯ ಸಂದರ್ಭದಲ್ಲಿ ಆದ ವ್ಯತ್ಯಾಸಗಳಿಂದ ಒಂದು ಕಾಲದಲ್ಲಿ ಮಿತ್ರರಾಗಿದ್ದವರು ಈಗ ಶತ್ರುಗಳಾಗಿದ್ದಾರೆ. ಇಬ್ಬರ ಹೇಳಿಕೆ ಪಡೆದುಕೊಂಡಿರುವ ಕೋಲಾರ ನಗರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಯಾರೊಬ್ಬರೂ ಸಹಾಯಕ್ಕೆ ಬರಲಿಲ್ಲ
ಕಳೆದ ಪರಿಷತ್ ಚುನಾವಣೆಯಲ್ಲಿ ಸೋತಿರುವ ಕಾರಣ ನನ್ನ ವಿರುದ್ಧ ವಿನಾಕಾರಣ ಅಸಂಬದ್ಧ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದರು. ಇದಕ್ಕೆ ನಾನು ಕಿವಿಗೊಡದೆ ಇದ್ದೆ. ಆದರೆ ಮಂಗಳವಾರ ವಿನಾ ಕಾರಣ ಹಲ್ಲೆ ಮಾಡಿದ್ದಾರೆ ಎಂದು ಜೆ.ಜಿ.ನಾಗರಾಜ್ ಆರೋಪಿಸಿದರು.
8 ವರ್ಷಗಳಿಂದ ಬಹಳಷ್ಟು ಕಿರುಕುಳ ನೀಡಿದ್ದಾರೆ. ಆದರೂ ಸಹ ಸುಮ್ಮನಿದ್ದೆ, ವ್ಯಾಟ್ಸ್ಆ್ಯಪ್‌ನಲ್ಲಿ ಮಾನಹಾನಿಕರ ಹೇಳಿಕೆ ಹಾಕುತ್ತಿದ್ದರು. ಈ ಬಗ್ಗೆ ಇಲಾಖೆಯ ಅಕಾಧಿರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಘಟನೆ ಸಂಭವಿಸಿದಾಗ ಯಾರೂ ಸಹಾಯಕ್ಕೆ ಬರಲಿಲ್ಲ ಎಂದ ಅವರು, `ನನಗೆ ಏನಾದರು ಆದರೆ ನಾಗಾನಂದನೇ ಕಾರಣ' ಎಂದು ಎಚ್ಚರಿಕೆ ನೀಡಿದರು.
ಪರಿಷತ್ ಚುನಾವಣೆಯಲ್ಲಿ ಸೋಲಲು ನಾಗರಾಜ್ ಆಡಿರುವ ಮಾತುಗಳೇ ಕಾರಣ. ರೋಟರಿ ಸಂಸ್ಥೆಯ ಅಧ್ಯಕ್ಷನಾಗಿ ಆಯ್ಕೆಯಾಗಿರುವುದನ್ನು ಸಹಿಸಿಕೊಳ್ಳಲಾಗದೆ ಈ ರೀತಿ ಮಾಡಿದ್ದಾರೆ ಎಂದು ನಾಗಾನಂದ ಕೆಂಪರಾಜ್ ಆರೋಪಿಸಿದರು. ಕಾಲೇಜಿಗೆ ಬಂದು ಹಾಜರಾತಿಗೆ ಸಹಿ ಹಾಕುತ್ತಿದ್ದಾಗ ಬ್ಯಾಗ್ ತೆಗೆದು ನನ್ನ ಕಡೆ ಬಿಸಾಡಿದರು, ನಾನು ಸುಮ್ಮನಿದ್ದೆ. ಬೇಕಾಗಿಯೇ ಅಡ್ಡಿಪಡಿಸಿದಾಗ ದೂರ ಹೋಗಿ ಎಂದೆ, ಪುನಃ ಹೊಡೆದು ತಳ್ಳಿದರು ಎಂದು ಆರೋಪಿಸಿರು.