

ಜಮಖಂಡಿ: ನಗರದ ಬಾಗಲಕೋಟೆ ವಿಶ್ವವಿದ್ಯಾಲಯ ಮುಚ್ಚುವ ಅಥವಾ ವಿಲೀನಗೊಳಿಸುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಬಿಡಬೇಕು ಎಂದು ಒತ್ತಾಯಿಸಿ ಕನ್ನಡ ಸಾಹಿತ್ಯ ಪರಿಷತ್‌ನ ತಾಲೂಕು ಘಟಕದ ವತಿಯಿಂದ ತಹಸೀಲ್ದಾರ್ ಕಚೇರಿಯಲ್ಲಿ ಸೋಮವಾರ ಶಿರಸ್ತೇದಾರ್ ಶಶಿಧರ ಚಲವಾದಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಕಸಾಪ ಸಲಹಾ ಸಮಿತಿ ಸದಸ್ಯ ಡಾ.ಟಿ.ಪಿ. ಗಿರಡ್ಡಿ ಮಾತನಾಡಿ, ವಿಶ್ವವಿದ್ಯಾಲಯವನ್ನು ಮುಚ್ಚುವುದು ಉನ್ನತ ಶಿಕ್ಷಣದ ನಿರ್ಗಮನ ನೀತಿ ಎನಿಸುತ್ತದೆ. ಉನ್ನತ ಶಿಕ್ಷಣದ ಮೂಲ ಉದ್ದೇಶ ಪಲ್ಲಟಗೊಳಿಸುವ ಹುನ್ನಾರವಾಗಿದೆ. ತಜ್ಞರ ಜಾಗದಲ್ಲಿ ಶಿಕ್ಷಣೋದ್ಯಮಿಗಳು ಹಾಗೂ ಅಗೋಚರ ಆಡಳಿತಗಾರರು ಆಕ್ರಮಿಸಿರುವುದರಿಂದ ಶಿಕ್ಷಣ ಕ್ಷೇತ್ರದ ಅಪಹರಣ ನಡೆಯುತ್ತಿದೆ ಎಂದು ಕಿಡಿಕಾರಿದರು.
ಮನವಿಯಲ್ಲಿರುವ ಅಂಶಗಳು: ಜಮಖಂಡಿ ಭಾಗದ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳ ಯುವಜನರು ಉನ್ನತ ಶಿಕ್ಷಣ ಪಡೆಯುವ ಅವಕಾಶವನ್ನು ಸ್ಥಳೀಯವಾಗಿ ಪಡೆದಿದ್ದಾರೆ. ಆದರೆ, ಬಾಗಲಕೋಟೆ ವಿಶ್ವವಿದ್ಯಾಲಯವನ್ನು ಮುಚ್ಚುವುದರಿಂದ ಅಸಮಾನತೆಗೆ ಕಾರಣವಾಗುತ್ತದೆ.
ಮಹಿಳೆಯರು ಉನ್ನತ ಶಿಕ್ಷಣದ ಹೊಸ್ತಿಲಲ್ಲಿ ನಿಂತಿರುವಾಗ ವಿಶ್ವವಿದ್ಯಾಲಯವನ್ನು ಮುಚ್ಚುವ ಅಥವಾ ಬೇರೆ ವಿಶ್ವವಿದ್ಯಾಲಯದೊಂದಿಗೆ ವಿಲೀನಗೊಳಿಸುವ ಸರ್ಕಾರದ ನಿರ್ಧಾರ ಮಹಿಳೆಯರ ಪಾಲಿನ ಮರಣ ಶಾಸನವಾಗುವ ಅಪಾಯವಿದೆ. ಡಿಜಿಟಲ್ ಮತ್ತು ಕೌಶಲ ಆಧಾರಿತ ಬಾಗಲಕೋಟೆ ವಿಶ್ವವಿದ್ಯಾಲಯವನ್ನು ಸಾಮಾನ್ಯ ಪದವಿ ಶಿಕ್ಷಣ ವಿಶ್ವವಿದ್ಯಾಲಯವನ್ನಾಗಿ ಪರಿವರ್ತಿಸಿ ಜಮೀನು, ಕಟ್ಟಡ, ಸಿಬ್ಬಂದಿ ಮತ್ತು ಸಂಪನ್ಮೂಲ ಒದಗಿಸಿ ಮುಂದುವರಿಸಬೇಕು. ಬಾಗಲಕೋಟೆ ವಿಶ್ವವಿದ್ಯಾಲಯಕ್ಕೆ ಜಮಖಂಡಿ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಬೇಕು.
ಒಂದು ವೇಳೆ ವಿಶ್ವವಿದ್ಯಾಲಯವನ್ನು ಮುಂದುವರೆಸದಿದ್ದರೆ ತಾತ್ವಿಕ ಸಂಘರ್ಷ ನಡೆಸಲಾಗುವುದು. ಬಾಗಲಕೋಟೆ ವಿಶ್ವವಿದ್ಯಾಲಯವನ್ನು ಉಳಿಸಿಕೊಳ್ಳಲು ಜನಾಂದೋಲನ ರೂಪಿಸಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
ಕಸಾಪ ತಾಲೂಕು ಘಟಕದ ಅಧ್ಯಕ್ಷ ಸಂತೋಷ ತಳಕೇರಿ, ಗೌರವ ಕಾರ್ಯದರ್ಶಿ ವಿನೋದ ಲೋಣಿ, ಸಲಹಾ ಸಮಿತಿ ಸದಸ್ಯರಾದ ಡಾ.ತಾತಾಸಾಹೇಬ ಬಾಂಗಿ, ಮಲ್ಲಿಕಾರ್ಜುನ ಇಂಡಿ, ಗುರುನಾಥ ಸುತಾರ, ಬಿ.ಎನ್. ಅಸ್ಕಿ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯ ಸಂದೀಪ ಬೆಳಗಲಿ, ಬಿಜೆಪಿ ಮುಖಂಡ ಏಗಪ್ಪ ಸವದಿ, ಪತ್ರಕರ್ತ ಡಾ.ಮಲ್ಲಿಕಾರ್ಜುನ ಮಠ ಮತ್ತಿತರರಿದ್ದರು. ಮುತ್ತಿನಕಂತಿ ಹಿರೇಮಠದ ಶಿವಲಿಂಗ ಶ್ರೀಗಳು, ಕೊಣ್ಣೂರಿನ ಹೊರಗಿನ ಕಲ್ಯಾಣ ಮಠದ ಡಾ.ವಿಶ್ವಪ್ರಭುದೇವ ಶ್ರೀಗಳು, ಆಲಗೂರಿನ ಧರಿದೇವರು ಶ್ರೀಗಳು, ಸಿಂದಗಿ ಸಾರಂಗ ಮಠದ ಶ್ರೀಗಳು ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ಸೂಚಿಸಿದರು.