

ಹಳಿಯಾಳ: ಸಂಘಟನೆ ಎಂಬುದು ಬರೀ ಹೆಸರಿಗಷ್ಟೇ ಇದ್ದರೆ ಸಾಲದು. ಯಾವುದೇ ಸಂಘಟನೆಯಿರಲಿ, ಸಮಾಜ ಅಭಿವೃದ್ಧಿಯ ಚಟುವಟಿಕೆ ಹೊಂದಿರಬೇಕು. ಕ್ರಿಯಾಶೀಲತೆ ಹಾಗೂ ಪಾರದರ್ಶಕತೆಯೇ ಸಂಘಟನೆಯ ನಿಜವಾದ ಯಶಸ್ಸು. ಆ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯನಿರ್ವಹಿಸುತ್ತಿದೆ ಎಂಬ ಅಭಿಮಾನ ನಮಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಹೇಳಿದರು.
ಪಟ್ಟಣದ ಚಂದಾವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರ ಸಭೆ ಹಾಗೂ ವಾರ್ಷಿಕ ಲೆಕ್ಕಪತ್ರ ಮಂಡನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಹಿತ್ಯ ಸಮ್ಮೇಳನಗಳ ಜತೆಗೆ ಸಾಧಕರ ಮನೆಗೆ ಸಾಹಿತ್ಯ ಪರಿಷತ್ತು, ಶಾಲೆಗಳತ್ತ ಸಾಹಿತ್ಯ ಪರಿಷತ್ತು, ವಿಚಾರ ಸಂಕಿರಣ, ಪುಸ್ತಕ ಪರಿಚಯ, ಪುಸ್ತಕ ಬಿಡುಗಡೆ, ನವೆಂಬರ್ ತಿಂಗಳಿಡೀ ಕನ್ನಡ ಕಾರ್ತಿಕ, ಅನುದಿನ ಅನುಸ್ಪಂದನ ಕಾರ್ಯಕ್ರಮಗಳ ಜತೆಗೆ ಪ್ರತಿವರ್ಷ ಎಸ್ಸೆಸ್ಸೆಲ್ಸಿಯಲ್ಲಿ ಕನ್ನಡ ವಿಷಯದಲ್ಲಿ ಪೂರ್ಣಾಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದನೆ ಮುಂತಾದ ಕಾರ್ಯಕ್ರಮಗನ್ನು ಹಮ್ಮಿಕೊಳ್ಳುತ್ತ ಬರಲಾಗಿದೆ ಎಂದರು.
ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಪಿ.ಆರ್. ನಾಯ್ಕ ಲೇಖಪತ್ರವನ್ನು ಮಂಡಿಸಿದರು. 2023-2024ನೇ ಸಾಲಿನಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ, ನಾಲ್ಕು ತಾಲೂಕು ಸಾಹಿತ್ಯ ಸಮ್ಮೇಳನ, ನಿರ್ವಹಣಾ ಅನುದಾನ ಸೇರಿದಂತೆ ರಾಜ್ಯ ಸಾಹಿತ್ಯ ಪರಿಷತ್ತಿನಿಂದ 11.36 ಲಕ್ಷ ರೂ.ಬಂದಿದ್ದು ಇದನ್ನು ನಿಯಮಾನುಸಾರ ಖರ್ಚು ಮಾಡಲಾಗಿದೆ. ಈಗಾಗಲೇ ಇದರ ಆಡಿಟ್ ಮಾಡಿಸಲಾಗಿದ್ದು, ಕೇಂದ್ರ ಸಮಿತಿಗೆ ಸಲ್ಲಿಸಲಾಗುತ್ತದೆ ಎಂದರು.
ಜಿಲ್ಲಾ ಗೌರವ ಕಾರ್ಯದರ್ಶಿ ಜಾರ್ಜ್ ಫರ್ನಾಂಡಿಸ್ ಪ್ರಾಸ್ತಾವಿಕವಾಗಿ ಮಾತನಾಡಿ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅದಕ್ಕೆ ಕಸಾಪ ಅಧ್ಯಕ್ಷರು ಪ್ರಶಂಸಾ ಪತ್ರ ನೀಡಿರುವುದೇ ನಿದರ್ಶನವಾಗಿದೆ. ಅನುದಾನ ಇಲ್ಲದಿದ್ದರೂ ಸಮ್ಮೇಳನ ನಡೆಸುತ್ತಿರುವುದು ನಮ್ಮ ಹೆಮ್ಮೆಯಾಗಿದೆ ಎಂದರು.
ಹಳಿಯಾಳ ತಾಲೂಕು ಕಸಾಪ ಅಧ್ಯಕ್ಷೆ ಸುಮಂಗಲಾ ಅಂಗಡಿ ಶುಭಾಶಯ ಕೋರಿದರು. ಆಜೀವ ಸದಸ್ಯರ ಪರವಾಗಿ ಮುಂಡಗೋಡದ ಡಾ. ಪಿ.ಬಿ. ಛಬ್ಬಿ, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಶಿವದೇವ ದೇಸಾಯಿ ಸ್ವಾಮಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ಕುಸ್ತಿಪಟು ಸುಶೀಲ ಸಿದ್ದಿ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಬೊಂಬೆಯಾಟದ ಕಲಾವಿದ ಸಿದ್ದಪ್ಪ ಬಿರಾದಾರ ಅವರನ್ನು ಸನ್ಮಾನಿಸಲಾಯಿತು.