ಎಲ್ಲರನ್ನೂ ಒಗ್ಗೂಡಿಸುವ ಕಸಾಪ: ಮಾಜಿ ಜಿಲ್ಲಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಹೇಳಿಕೆ

Kasapa Foundation Day Mandya
Published on

ಮಂಡ್ಯ: ನಾಡು, ನುಡಿಯ ಬೆಳವಣಿಗೆ ಜತೆಗೆ ಕನ್ನಡ ಮಾತನಾಡುವವರನ್ನು ಒಗ್ಗೂಡಿಸುವಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ಪರಿಶ್ರಮ ಅತ್ಯಮೂಲ್ಯ ಎಂದು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಹೇಳಿದರು.

ನಗರದ ಕಸಾಪ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ಭಾನುವಾರ ಆಯೋಜಿಸಿದ್ದ ಕಸಾಪ 110ನೆಯ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಕಸಾಪ ತನ್ನ ಬಾಹುಗಳನ್ನು ವಿಶ್ವಮಟ್ಟದಲ್ಲೂ ಪಸರಿಸಿಕೊಂಡಿದೆ. ನಾಡದೊರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್.ಎಂ.ವಿ. ಅವರ ದೂರದೃಷ್ಠಿತ್ವದ ಫಲ ಇಂದು ನಮ್ಮ ಕಣ್ಣಿನ ಮುಂದಿದೆ. ಅಂತೆಯೇ ವಿಶ್ವದಲ್ಲಿ ವಿಶಾಲವಾಗಿ ಕನ್ನಡ ಪ್ರೇಮ ಬೆಳೆಸಲು ಸಾಧ್ಯವಾಗುತ್ತಿದೆ ಎಂದು ನುಡಿದರು.

1915ರಿಂದ 1940ರ ವರಗೆ ಸಭೆಯಿಂದ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತಿತ್ತು. 1940ರಿಂದ ಚುನಾವಣೆ ಮೂಲಕ ಕಸಾಪ ಆಡಳಿತಕ್ಕೆ ಚುನಾವಣೆ ನಡೆಯುತ್ತಿದೆ, ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತಿದೆ. ಇಲ್ಲಿಯ ವರೆಗೂ ಅನೇಕ ಮಹಾನೀಯರು ಅಧ್ಯಕ್ಷರಾಗಿ ಕನ್ನಡ ತೇರನ್ನು ಎಳೆದು ಬೆಳೆಸುತ್ತಿದ್ದಾರೆ.

ಕನ್ನಡ ಸಾಕ್ಷಿ ಪ್ರಜ್ಞೆಯಾಗಿ ಕಸಾಪ ಕಾರ್ಯ ನಿರ್ವಹಿಸುತ್ತಿದೆ. ಗ್ರಾಮ ಮಟ್ಟದವರೆಗೂ ಕನ್ನಡ ಸಾಹಿತ್ಯ ವಿಸ್ತರಿಸಿ, ನಾಡು-ನುಡಿ ಉಳಿಸಲು ಹೋರಾಟ ಮಾಡುತ್ತಿದೆ, ಕಸಾಪ ಬೆಳೆದು ಬಂದ ಹಾದಿ ತಿಳಿಯುವುದು ಅನಿವಾರ್ಯ. ಕನ್ನಡ ಮಾತನಾಡುವವರಿಗಿದ್ದ ಕಂಟಕ ದೂರ ಮಾಡಲು ಕಸಾಪ ಶ್ರಮಿಸಿದೆ. ಕನ್ನಡ ಭಾಷಿಕರನ್ನು ಒಗ್ಗೂಡಿಸುವ ಕೆಲಸ ಕಸಾಪ ಮಾಡಿಕೊಂಡು ಬಂದಿರುವುದು ಶ್ಲಾಘನೀಯ. ಕನ್ನಡದ ತೇರು ಎಳೆಯಲು ಕಸಾಪ ಶ್ರಮಿಸುತ್ತಾ ಬಂದಿದೆ. ಕನ್ನಡ ಪುಸ್ತಕಗಳ ಪ್ರಕಟಣೆ, ಕನ್ನಡ ನಾಡು-ನುಡಿಯ ಬೆಳವಣಿಗೆ, ಸಂರಕ್ಷಣೆ, ಕನ್ನಡ ಭಾಷೆ ಉಳಿವಿಗೆ ಸಾಹಿತ್ಯ ಸಮ್ಮೇಳನ ನಡೆಸುವುದು ಕಸಾಪ ಧ್ಯೇಯವಾಗಿದೆ ಎಂದು ಹೇಳಿದರು.

ಕಸಾಪ ಮಾಜಿ ಜಿಲ್ಲಾಧ್ಯಕ್ಷ ಪ್ರೊ.ಜಿ.ಟಿ.ವೀರಪ್ಪ ಮಾತನಾಡಿದರು. ಜನಸಾಮಾನ್ಯರತ್ತ ಕನ್ನಡ ಸಾಹಿತ್ಯ ಪರಿಷತ್ ವಿಷಯದ ಬಗ್ಗೆ ಸಾಹಿತಿ ಡಾ.ಶ್ರೀನಿವಾಸ್ ಶೆಟ್ಟಿ ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ. ಕೃಷ್ಣೇಗೌಡ ಹುಸ್ಕೂರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ತಾಲೂಕು ಮಾಜಿ ಅಧ್ಯಕ್ಷ ಎಂ.ಆರ್.ಮಂಜು ಮುತ್ತೆಗೆರೆ, ಜಿಲ್ಲಾ ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ, ನಗರ ಘಟಕ ಅಧ್ಯಕ್ಷೆ ಸುಜಾತಾ ಕೃಷ್ಣ, ತಾಲೂಕು ಅಧ್ಯಕ್ಷ ಚಂದ್ರಲಿಂಗು, ಪದಾಧಿಕಾರಿಗಳಾದ ಭಾಸ್ಕರ್, ಎಲ್.ಕೃಷ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net