

ಮಂಡ್ಯ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಹ್ವಾನಿಸಬೇಕು. ಇದು ಪ್ರತಿಯೊಬ್ಬರ ಮನೆ ಹಾಗೂ ಮನ ತಲುಪಬೇಕು. ಆದರೆ ಬಹಳಷ್ಟು ಜನರು ಉದ್ಘಾಟನೆ ಮುಗಿಸಿ ನಂತರ ಪ್ರವಾಸಕ್ಕೆ ತೆರಳಿ ಸಮಾರೋಪ ಸಮಾರಂಭಕ್ಕೆ ಬಂದು ಹಾಜರಾತಿ ಪ್ರಮಾಣ ಪತ್ರ ಪಡೆಯುತ್ತಾರೆ. ಇದು ದುರಾದೃಷ್ಟಕರ ಸಂಗತಿ. ಕನ್ನಡದ ಹಬ್ಬದಲ್ಲಿ ಭಾಗವಹಿಸುವುದು ಹೆಮ್ಮೆಯ ವಿಷಯ ಎನ್ನುವ ಆತ್ಮಾವಲೋಕನ ಮತ್ತು ಮನದಟ್ಟು ಮಾಡಿಕೊಳ್ಳಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಸಲಹೆ ನೀಡಿದರು.
ನುಡಿಜಾತ್ರೆಯ ಪ್ರಚಾರಕ್ಕೆ ಸಂಬಂಧಿಸಿದಂತೆ ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳು ಹಾಗೂ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಕ್ಷರಜಾತ್ರೆ ಕನ್ನಡ ನಾಡು ನುಡಿಯ ಹಬ್ಬ. ಆದ್ದರಿಂದ ಡಿ.20, 21 ಹಾಗೂ 22 ರಂದು ಸಂಪೂರ್ಣವಾಗಿ ಭಾಗವಹಿಸಿ ಸಂಭ್ರಮಿಸಿ ಎಂದರು.
ಕಳೆದ ಬಾರಿ ನಡೆದ ಸಮ್ಮೇಳನದಲ್ಲಿ ಸುಮಾರು 6 ಕೋಟಿ ರೂ ಮೊತ್ತದ ಪುಸ್ತಕ ಮಾರಾಟವಾಗಿತ್ತು. ಇನ್ನೂ ಹೆಚ್ಚಿನ ಪುಸ್ತಕ ಮಾರಾಟ ತಾಂತ್ರಿಕ ತೊಂದರೆಯಿಂದ ಆಗಲಿಲ್ಲ. ಆದ್ದರಿಂದ ಈ ಬಾರಿ ವಿಶೇಷ ನಿಗಾ ವಹಿಸಿ ಯಾವುದೇ ತಾಂತ್ರಿಕ ತೊಂದರೆಯಾಗದಂತೆ ಕನ್ನಡ ಪುಸ್ತಕ ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗುವುದು. ವಿವಿಧ ಇಲಾಖೆಗಳ ಮಾಹಿತಿ ಮಳಿಗೆ ಜತೆಯಲ್ಲಿ ವಾಣಿಜ್ಯ ಮಳಿಗೆ ತೆರೆಯಲಾಗುವುದು. ಅಂತೆಯೇ ವಾಣಿಜ್ಯ ಮಳಿಗೆಗಳಲ್ಲಿ ಯಾವುದೇ ಅಶ್ಲೀಲ ವಸ್ತು ಅಥವಾ ನಮ್ಮ ಸಂಸ್ಕೃತಿಗೆ ಧಕ್ಕೆ ಬಾರದ ರೀತಿ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಕಸಾಪದಿಂದ ಕನ್ನಡದ ಕಂಪನ್ನು ಎಲ್ಲ ಕಡೆ ಸಾರುವ ಪ್ರಯತ್ನ ಮಾಡುತ್ತಿದೆ. ಬೆಂಗಳೂರಿನಿಂದ ವಿವಿಧ ದೇಶಗಳಿಗೆ ತೆರಳುವ ವಿಮಾನಗಳಲ್ಲಿ ಕನ್ನಡ ಭಾಷೆಯಲ್ಲಿ ಸಂದೇಶಗಳನ್ನು ನೀಡುವಂತೆ ಮನವಿ ಮಾಡಲಾಗಿತ್ತು. ಅದರಂತೆ ಎಮರೈಟ್ಸ್ ಹಾಗೂ ಬ್ರಿಟಿಷ್ ಏರ್‌ಲೈನ್ಸ್‌ಗಳಲ್ಲಿ ಸಂದೇಶ ಮತ್ತು ಮೆನುವಿನಲ್ಲೂ ಕನ್ನಡ ಬಳಸುತ್ತಿರುವುದು ಸಂತೋಷದ ವಿಷಯವಾಗಿದೆ ಎಂದರು.
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ನುಡಿಜಾತ್ರೆ ಸರ್ಕಾರ, ಜಿಲ್ಲಾಡಳಿತ ಅಥವಾ ಕಸಾಪ ಕಾರ್ಯಕ್ರಮವಲ್ಲ. ಬದಲಿಗೆ ಇದು ಪ್ರತಿಯೊಬ್ಬರ ಮನೆಯ ಕನ್ನಡದ ಹಬ್ಬ. ಇದರ ಯಶಸ್ಸಿಗೆ ಪ್ರತಿಯೊಬ್ಬರು ಶ್ರಮಿಸಬೇಕು. ಅ.23ರಂದು ಸಾಹಿತ್ಯ ಸಮ್ಮೇಳನದ ಕಾರ್ಯಾಕಾರಿ ಸಮಿತಿ ಸಭೆ ನಡೆಯಲಿದೆ. ಅಂದು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಎಲ್ಲರನ್ನೂ ಆತ್ಮೀಯವಾಗಿ ಆಹ್ವಾನಿಸಲು ಗೀತೆ ಸಿದ್ಧಪಡಿಸುತ್ತಿದ್ದು, ಅಂದು ಬಿಡುಗಡೆ ಮಾಡಲಾಗುವುದು. ನ.1ರಂದು ನಡೆಯಲಿರುವ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ 200 ರಿಂದ 300 ಮಕ್ಕಳು ನೃತ್ಯ ಪ್ರದರ್ಶನದ ಮೂಲಕ ನುಡಿಜಾತ್ರೆಗೆ ಆಹ್ವಾನಿಸಲಿದ್ದಾರೆ. ಇದಲ್ಲದೆ ಹೊರ ರಾಜ್ಯ ಹಾಗೂ ದೇಶದಲ್ಲಿರುವವರಿಗೆ ಅವರ ಕುಟುಂಬದ ಮಕ್ಕಳಿಂದ ಪತ್ರ ಬರೆಸಿ ಸಮ್ಮೇಳನ ಆಹ್ವಾನಿಸುವ ಪ್ರಯತ್ನವನ್ನು ಶಿಕ್ಷಕರು ಮಾಡಬೇಕು. ಅಂತೆಯೇ ಕೆಎಸ್‌ಆರ್‌ಟಿಸಿ ಟಿಕೆಟ್, ನಂದಿನಿ ಹಾಲಿನ ಪ್ಯಾಕೇಟ್, ವಿದ್ಯುತ್ ಬಿಲ್ ಮೇಲೆ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ-2024 ಮಂಡ್ಯ ಜಿಲ್ಲೆಯಲ್ಲಿ ನಡೆಯಲಿದೆ. ಬನ್ನಿ- ಭಾಗವಹಿಸಿ- ಯಶಸ್ವಿಗೊಳಿಸಿ ಎಂದು ಮುದ್ರಿಸಿ ಪ್ರಚಾರ ನೀಡುವಂತೆ ಪತ್ರ ಬರೆಯಲಾಗಿದೆ ವಿವರಿಸಿದರು.
ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರ ಕೆಲಸ ಗ್ರಾಮ ಮಟ್ಟದಲ್ಲಿ ನಡೆಯಬೇಕು. ಕ್ಷೇತ್ರ ಶಿಕ್ಷಣಾಧಿಕಾರಿ, ತಹಸೀಲ್ದಾರ್ ಹಾಗೂ ತಾಪಂ ಇಒ ಒಟ್ಟುಗೂಡಿ ಗ್ರಾಮ ಮಟ್ಟದಲ್ಲಿ ಸಭೆ ನಡೆಸಿ ಹೆಚ್ಚು ಜನರು ಸಾಹಿತ್ಯ ಸಮ್ಮೇಳನ ಹಾಗೂ ಮೆರವಣಿಗೆಯಲ್ಲಿ ಭಾಗವಹಿಸುವಂತೆ ಸಂಘಟಿಸಿ. ಸ್ಮರಣ ಸಂಚಿಕೆಗೆ ಶೀರ್ಷಿಕೆಯನ್ನು ಸಾರ್ವಜನಿಕರು ಲಿಖಿತ ರೂಪದಲ್ಲಿ ಪತ್ರದ ಮೂಲಕ ತಮ್ಮ ಹೆಸರು, ವಿಳಾಸದೊಂದಿಗೆ ಮುಚ್ಚಿದ ಲಕೋಟೆಯಲ್ಲಿ ಜಿಲ್ಲಾ ಗ್ರಂಥಾಲಯಕ್ಕೆ ತಲುಪಿಸಬೇಕು. ಆಯ್ದ ಅತ್ಯುತ್ತಮ ಶೀರ್ಷಿಕೆಗೆ ಗೌರವ ಪುರಸ್ಕಾರ ನೀಡಲಾಗುವುದು ಎಂದರು.
ಸಭೆಯಲ್ಲಿ ಆಹಾರ ಇಲಾಖೆ ಉಪನಿರ್ದೇಶಕ ಕೃಷ್ಣಕುಮಾರ್, ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದರ್, ಸಮ್ಮೇಳನದ ಸಮನ್ವಯ ಸಮಿತಿ ಅಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ, ಕಸಾಪದ ಪಟೇಲ್ ಪಾಂಡು, ಚಂದ್ರಲಿಂಗು, ಅಪ್ಪಾಜಪ್ಪ, ಹುಸ್ಕೂರು ಕೃಷ್ಣೇಗೌಡ, ಪದ್ಮಿನಿ ನಾಗರಾಜು ಇತರರಿದ್ದರು.