ದುದ್ದ ಗ್ರಾಮದಲ್ಲಿ ಕಸಾಪ ತಾಲೂಕು ಸಮ್ಮೇಳನ: ಪೂರ್ವಭಾವಿ ಸಭೆಯಲ್ಲಿ ತೀರ್ಮಾನ

Kasapa
Published on

ಮಂಡ್ಯ: ತಾಲೂಕಿನ 17ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ದುದ್ದ ಗ್ರಾಮದಲ್ಲಿ ಆಯೋಜಿಸಲು ಬಗ್ಗೆ ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನ ಮಾಡಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಸಿ.ಕೆ.ರವಿಕುಮಾರ ಚಾಮಲಾಪುರ ಮಾತನಾಡಿ, ಸೆಪ್ಟಂಬರ್ ಅಂತ್ಯ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ ಒಂದು ದಿನದ ಸಮ್ಮೇಳನ ನಡೆಸಲಾಗುವುದು. ಧ್ವಜಾರೋಹಣ, ಸಮ್ಮೇಳನಾಧ್ಯಕ್ಷರ ಮೆರವಣಿಗೆ, ಉದ್ಘಾಟನಾ ಸಮಾರಂಭ, ವಿಚಾರಗೋಷ್ಠಿ, ಕವಿಗೋಷ್ಠಿ, ಸಂವಾದಗೋಷ್ಠಿ, ಸಮಾರೋಪ ಸಮಾರಂಭದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ನಾಟಕ ಪ್ರದರ್ಶನ ಹಮ್ಮಿಕೊಳ್ಳುವ ಚಿಂತನೆ ಇದೆ ಎಂದರು.
ಇದಲ್ಲದೆ ಮುಂದಿನ ದಿನಗಳಲ್ಲಿ ಹೋಬಳಿ ಮಟ್ಟದಲ್ಲಿ ಸಭೆಗಳನ್ನು ನಡೆಸಿ ಅಭಿಪ್ರಾಯ ಸಂಗ್ರಹಿಸಲಾಗುವುದು. ಹೊಳಲು ಗಾಣದಾಳು, ಚಂದಗಾಲು ವ್ಯಾಪ್ತಿಯ ಸಭೆಯನ್ನು ವಿ.ಸಿ.ಫಾರ್ಮ್‌ನಲ್ಲಿ, ಮಲ್ಲಿಗೆರೆ, ಬೇವುಕಲ್ಲು, ಮುದಗಂದೂರು, ಶಿವಳ್ಳಿ, ಹುಳ್ಳೇನಹಳ್ಳಿ ಮುಂತಾದ ಗ್ರಾಮಗಳ ಸಭೆಯನ್ನು ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ಸಮ್ಮುಖದಲ್ಲಿ ದುದ್ದದಲ್ಲಿ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ವಿವರಿಸಿದರು.
ಮಂಡ್ಯ ತಾಲೂಕು ಅಧ್ಯಕ್ಷ ಮಂಜು ಮುತ್ತೇಗೆರೆ ಪ್ರಾಸ್ತಾವಿಕ ನುಡಿಗಳನ್ನಾಡಿ, ಮಂಡ್ಯ ತಾಲೂಕು ಸಮ್ಮೇಳನಗಳು ತಾಲೂಕಿನ ವಿವಿಧ ಹೋಬಳಿಗಳಲ್ಲಿ ಈಗಾಗಲೇ ನಡೆದಿದೆ. ದುದ್ದ ಹೋಬಳಿ ಕೇಂದ್ರದಲ್ಲಿ ಈ ಸಮ್ಮೇಳನ ನಡೆಸುವುದು ಸೂಕ್ತ. ಈಗಾಗಲೇ ಈ ವ್ಯಾಪ್ತಿಯ ಕೆಲ ಗ್ರಾಮಗಳಿಗೆ ಭೇಟಿ ನೀಡಿ ಅಭಿಪ್ರಾಯ ಸಂಗ್ರಹಿಸಲಾಗಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದರು.
ಜಿಲ್ಲಾ ಉಪಾಧ್ಯಕ್ಷ ಗುರುಪ್ರಸಾದ್ ಮಾತನಾಡಿ, ದುದ್ದ ಗ್ರಾಮ ಐತಿಹಾಸಿಕ ಕೇಂದ್ರ. ಹಲವಾರು ಹಳ್ಳಿಗಳನ್ನು ಒಳಗೊಂಡ ಪ್ರದೇಶವಾಗಿರುವುದರಿಂದ ಅಲ್ಲಿ ನಡೆಸುವುದು ಸೂಕ್ತ. ಸಾಹಿತ್ಯ ಪರಿಷತ್ ಸರ್ಕಾರ ಮತ್ತು ಗ್ರಾಮ ಪಂಚಾಯಿತಿ ಸಹಕಾರ ಪಡೆದು ಸಮ್ಮೇಳನ ನಡೆಸೋಣ ಎಂದರು.
ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಧನಂಜಯ ದರಸಗುಪ್ಪೆ, ಹುಸ್ಕೂರು ಕೃಷ್ಣೇಗೌಡ, ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ, ತಾಲೂಕು ಪದಾಧಿಕಾರಿಗಳಾದ ಚಂದ್ರಲಿಂಗು, ಶಿವಲಿಂಗೇಗೌಡ, ನಗರಾಧ್ಯಕ್ಷೆ ಸುಜಾತಾಕೃಷ್ಣ, ಹೋಬಳಿ ಮುಖಂಡರಾದ ಚಂದಗಾಲು ತಮ್ಮಣ್ಣ, ಸುರೇಶ್, ರುದ್ರೇಶ್, ಮಹೇಂದ್ರ, ರಾಮಾರಾಧ್ಯ, ಬಲ್ಲೇನಹಳ್ಳಿ ಮಂಜುನಾಥ್, ಬಿ.ಜಿ.ಉಮಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net