

ಮಂಡ್ಯ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೆಲವೇ ದಿನಗಳಷ್ಟೇ ಬಾಕಿ ಇದೆ. ಈ ನಡುವೆಯೇ ನುಡಿಜಾತ್ರೆ ವಿವಾದಿತ ವಿಷಯಗಳಿಂದಲೇ ಸದ್ದು ಮಾಡುತ್ತಿರುವುದು ಆತಂಕ ಮೂಡಿಸುತ್ತಿದೆ.
ಹಾವೇರಿಯಲ್ಲಿ ನಡೆದ 86ನೇ ಸಮ್ಮೇಳನದ ದಾಖಲೆಯನ್ನು ಸರಿಗಟ್ಟಬೇಕೆನ್ನುವ ಆತ್ಮವಿಶ್ವಾಸ ಎಲ್ಲರಲ್ಲಿಯೂ ಇದೆ. ಆದರೆ ಸಮ್ಮೇಳನಾಧ್ಯಕ್ಷರ ಆಯ್ಕೆ ವಿಚಾರ, ಸ್ಥಳ, ವಿಚಾರಗೋಷ್ಠಿ ಬಗ್ಗೆ ಚರ್ಚೆಗಿಂತ ವಿವಾದವೇ ವಿಜೃಂಭಿಸುತ್ತಿದೆ. ಅದರಲ್ಲಿಯೂ ಮುಖ್ಯವಾಗಿ ಕಸಾಪ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ವಿರುದ್ಧ ಜಿಲ್ಲೆಯ ವಿಚಾರವಾದಿಗಳು, ಸಾಹಿತಿಗಳು ಹಾಗೂ ಪ್ರಗತಿಪರರು ಟೀಕಾಪ್ರಹಾರ ನಡೆಸುತ್ತಿದ್ದಾರೆ.
ಯಾರಿಗೆ ನುಡಿಜಾತ್ರೆಗೆ ಅಧಿಪತ್ಯ?: ನುಡಿಜಾತ್ರೆಗೆ ಸಂಬಂಧಿಸಿದಂತೆ ಅಧ್ಯಕ್ಷತೆ ವಹಿಸಿಕೊಳ್ಳುವ ಅವಕಾಶ ಯಾರಿಗೆ ಸಿಗಲಿದೆ ಎನ್ನುವ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದರಲ್ಲಿಯೂ ಡಾ.ಮಹೇಶ ಜೋಶಿ ಅವರು ಸಾಹಿತ್ಯೇತರರಿಗೂ ಅಧ್ಯಕ್ಷತೆ ಕೊಟ್ಟರೆ ತಪ್ಪೇನೂ ಎನ್ನುವುದನ್ನು ಪ್ರಸ್ತಾಪಿಸುತ್ತಿದ್ದಂತೆ ವಿವಾದದ ಸ್ವರೂಪ ಪಡೆದುಕೊಂಡಿತು.
ಮಹೇಶ ಜೋಶಿ ವಿರುದ್ಧ ಸಾಹಿತಿಗಳು, ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಪದಾಧಿಕಾರಿಗಳು ಮುಗಿಬಿದ್ದಿದ್ದಾರೆ. ಯಾವ ಉದ್ದೇಶವಿಟ್ಟುಕೊಂಡು ಇಂತಹ ನಿರ್ಧಾರ ಮಾಡಲಾಗುತ್ತಿದೆ ಎಂದು ಪ್ರಶ್ನಿಸುತ್ತಿದ್ದಾರೆ. ಇನ್ನೊಂದೆಡೆ ಸಾಹಿತ್ಯೇತರರಿಗೆ ಅವಕಾಶ ಕೊಟ್ಟರೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಈಗಾಗಲೇ ಕೆಲ ಸಂಘಟನೆಗಳು ಘೋಷಣೆ ಮಾಡಿವೆ. ಇದರಿಂದಾಗಿ ಅಧ್ಯಕ್ಷತೆ ಯಾರಿಗೆ ಒಲಿದು ಬರಲಿದೆ ಎನ್ನುವುದು ಹೆಚ್ಚು ಮಹತ್ವ ಪಡೆದುಕೊಂಡಿದೆ. ಸಮ್ಮೇಳನಕ್ಕೆ ಇನ್ನು 41 ದಿನವಷ್ಟೇ ಬಾಕಿ ಇದ್ದು, ಬಹುಶಃ ನವೆಂಬರ್ ಅಂತ್ಯ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಸಮ್ಮೇಳನಾಧ್ಯಕ್ಷರ ಘೋಷಣೆಯಾಗಲಿದೆ.
ಇನ್ನೊಂದೆಡೆ ಡಾ.ಮಹೇಶ ಜೋಶಿ ಅವರು ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆನ್ನುವ ಗಂಭೀರ ಆರೋಪವಿದೆ. ಇದಕ್ಕೆ ಪೂರಕ ಎನ್ನುವಂತೆ ನಗರದ ಹೊರವಲಯದಲ್ಲಿ ನುಡಿಜಾತ್ರೆ ಆಯೋಜಿಸುವ ವಿಚಾರದಲ್ಲಿ ಜೋಶಿ ಅವರು ಸ್ಪಷ್ಟ ನಿಲುವು ತೋರಿದರು. ಆದರೆ ಇದಕ್ಕೆ ಜಿಲ್ಲಾ ಕಸಾಪ ಮಾಜಿ ಪದಾಧಿಕಾರಿಗಳು ಆಕ್ಷೇಪಿಸಿದ್ದರು. ಪ್ರಸ್ತುತ ದಿನದಲ್ಲಿ ಜನರನ್ನು ಸೇರಿಸುವುದು ಸುಲಭದ ವಿಷಯವಲ್ಲ. ನಗರದೊಳಗೆ ಆಯೋಜನೆ ಮಾಡಿದರೆ ಎಲ್ಲರಿಗೂ ಅನುಕೂಲವಾಗಲಿದೆ ಎನ್ನುವ ಸಲಹೆ ನೀಡಿದರಾದರೂ ಮನ್ನಣೆ ಸಿಗಲಿಲ್ಲ. ಈಗಾಗಲೇ ನೀಲನಕ್ಷೆಯೂ ಸಿದ್ಧವಾಗಿದ್ದು, ಕೆಲವೇ ದಿನದಲ್ಲಿ ವೇದಿಕೆ ನಿರ್ಮಾಣ ಮಾಡುವ ಕೆಲಸ ನಡೆಯಲಿದೆ. ಇದಲ್ಲದೆ ವಿಚಾರಗೋಷ್ಠಿಯಲ್ಲಿ ಯಾವ ವಿಷಯಕ್ಕೆ ಆದ್ಯತೆ ಸಿಗಲಿದೆ ಎನ್ನುವುದು ಮುಖ್ಯವಾಗಿದೆ.