

ಮಂಡ್ಯ: ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲೆಯ ಕವಿಗಳ ಪ್ರಾತಿನಿಧಿಕ ಕವನ ಸಂಕಲನವೊಂದನ್ನು ಹೊರತರಲು ಸಮ್ಮೇಳನ ಪುಸ್ತಕ ಆಯ್ಕೆ ಸಮಿತಿ ನಿರ್ಧರಿಸಿದೆ.
ನಗರದ ರೆಡ್‌ಕ್ರಾಸ್ ಭವನದಲ್ಲಿ ಪುಸ್ತಕ ಆಯ್ಕೆ ಸಮಿತಿ ಅಧ್ಯಕ್ಷ ಡಾ.ಎಚ್.ಎಸ್.ಮುದ್ದೇಗೌಡರ ಅಧ್ಯಕ್ಷತೆಯಲ್ಲಿ ಮಂಗಳವಾರ ಆಯೋಜಿಸಿದ್ದ ಸಮಿತಿಯ ನಾಲ್ಕನೇ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಮುದ್ದೇಗೌಡ ಮಾತನಾಡಿ, ಜಿಲ್ಲೆಯಲ್ಲಿ ಸಾಕಷ್ಟು ಜನ ಕವಿಗಳಿದ್ದಾರೆ. ಜತೆಗೆ ತಮ್ಮ ಕವನ ಸಂಕಲನಗಳನ್ನು ಸಮ್ಮೇಳನದಲ್ಲಿ ಬಿಡುಗಡೆ ಮಾಡಲು ಉತ್ಸುಕವಾಗಿದ್ದಾರೆ. ಆದರೆ ಎಲ್ಲರಿಗೆ ಅವಕಾಶ ಸಿಗದ ಕಾರಣ ಜಿಲ್ಲೆಯ ಕವಿಗಳು ಬರೆದ ಕವನಗಳನ್ನು ಆಯ್ಕೆ ಮಾಡಿ ಪ್ರಾತಿನಿಧಿಕ ಕವನ ಸಂಕಲನವೊಂದನ್ನು ಹೊರತರಲಾಗುವುದು. ಅದಕ್ಕೆ ಮುನ್ನ ಪತ್ರಿಕಾ ಪ್ರಕಟಣೆ ಮೂಲಕ ಕವಿಗಳಿಂದ ಕವನಗಳನ್ನು ಆಹ್ವಾನಿಸಿ ಉತ್ತಮ ಕವನಗಳನ್ನು ಆಯ್ಕೆ ಮಾಡಿ ಕವನ ಸಂಕಲನವನ್ನು ಪ್ರಕಟಿಸಿ ಬಿಡುಗಡೆ ಮಾಡಲಾಗುವುದು. ಪ್ರತಿ ತಾಲೂಕುಗಳ ತಾಲೂಕು ದರ್ಶನ ಕೃತಿಗಳ ಜತೆಗೆ ಮೂವರು ಲೇಖಕರಿಂದ ವಿವಿಧ ಪ್ರಕಾರದ ವಿಷಯಗಳ ಬಗ್ಗೆ ಪುಸ್ತಕಗಳನ್ನು ಆ.15ರೊಳಗೆ ಬರೆಸಲು ಕ್ರಮ ಕೈಗೊಳ್ಳುವಂತೆ ತಾಲೂಕು ಅಧ್ಯಕ್ಷರಿಗೆ ಸೂಚಿಸಿದರು.
ಸಮಿತಿ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿ, ಪುಸ್ತಕ ಪ್ರಕಟಣೆ ಸಮ್ಮೇಳನದ ಒಂದು ಮುಖ್ಯ ಭಾಗ. ಆದ್ದರಿಂದ ಪುಸ್ತಕಗಳನ್ನು ಯಾರಿಂದ ಬರೆಸಬೇಕು ಎಂಬುದನ್ನು ಆಲೋಚನೆ ಮಾಡಿ ಅಂತಿಮ ರೂಪ ಕೊಡಬೇಕು. ಆ.15ರೊಳಗೆ ಪುಸ್ತಕ ಪ್ರಕಟಣೆಯಾದರೆ ಒಂದು ಮುಖ್ಯ ಭಾಗ ಯಶಸ್ವಿಯಾದಂತೆ ಆಗುತ್ತದೆ. ಸಮಿತಿ ಅಧ್ಯಕ್ಷರ ಮಾರ್ಗದರ್ಶನದಲ್ಲಿ ಎಲ್ಲರೂ ಕೆಲಸ ಮಾಡೋಣ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಕೃಷ್ಣೇಗೌಡ ಹುಸ್ಕೂರು, ತಾಲೂಕು ಅಧ್ಯಕ್ಷರಾದ ಪ್ರಕಾಶ್ ಮೇನಾಗರ, ಪೂರ್ಣಚಂದ್ರ ತೇಜಸ್ವಿ, ಸುನೀಲ್‌ಕುಮಾರ್, ಮಂಜುನಾಥ್ ಬಲ್ಲೇನಹಳ್ಳಿ, ಬಸವೇಗೌಡ ಖರಡ್ಯ ಮಾತನಾಡಿದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಧನಂಜಯ ದರಸಗುಪ್ಪೆ, ಸಂಘ ಸಂಸ್ಥೆ ಪ್ರತಿನಿಧಿ ಹೊಳಲು ಶ್ರೀಧರ್, ಕೊತ್ತತ್ತಿರಾಜು, ತಿಮ್ಮರಾಯಿಗೌಡ, ಚಲುವೇಗೌಡ, ಡಾ.ಶಿವಣ್ಣ, ಹರಿಚರಣತಿಲಕ್, ಬಸಪ್ಪ ನೆಲಮಾಕನಹಳ್ಳಿ ಇದ್ದರು.