

ಮಂಡ್ಯ: ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 87 ಕೃತಿಗಳನ್ನು ಹೊರತರಲು ನಿರ್ಧರಿಸಲಾಗಿದೆ. ಈ ಸಂದರ್ಭದಲ್ಲಿ ಜಿಲ್ಲೆಯ ಏಳು ’ತಾಲೂಕು ದರ್ಶನ’ಗಳ ಕೃತಿ ಪ್ರಕಟಣೆ ಮಾಡಲು ನಿರ್ಧರಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ತಿಳಿಸಿದರು.
ನಗರದ ಎಸ್.ಬಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಸಮ್ಮೇಳನದ ಪುಸ್ತಕ ಪ್ರಕಟಣೆ ಸಮಿತಿಯ ಮೂರನೇ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗಾಗಲೇ 87 ಕೃತಿಗಳನ್ನು ಹೊರ ತರಲು ನಿರ್ಧರಿಸಲಾಗಿದೆ. ಅವುಗಳಲ್ಲಿ 35 ಪುಸ್ತಕಗಳನ್ನು ಜಿಲ್ಲೆಯ ಲೇಖಕರಿಂದ ಬರೆಸಲು ಯೋಚಿಸಲಾಗಿದೆ. ಅವುಗಳಲ್ಲಿ ಜಿಲ್ಲೆಯ ಏಳು ತಾಲೂಕುಗಳ ದರ್ಶನ ಕೃತಿಗಳು ಸೇರಿದ್ದು, ತಾಲೂಕು ಕೇಂದ್ರಗಳ ಸ್ಥಳನಾಮ, ಸಂಸ್ಕೃತಿ, ಸಾಹಿತ್ಯ, ಸಾಧಕರು, ಪ್ರವಾಸಿ ತಾಣಗಳು, ಪರಂಪರೆ, ಇತಿಹಾಸ ಸೇರಿದಂತೆ ಉಳಿದ ವಿಷಯಗಳ ಬಗ್ಗೆ ಸಮಿತಿ ಮುದ್ದೇಗೌಡರ ನೇತೃತ್ವದಲ್ಲಿ ಏಕರೂಪದ ನಿರ್ಣಯ ತೆಗೆದುಕೊಳ್ಳುತ್ತದೆ ಎಂದರು.
ಜನಸಾಮಾನ್ಯ ಓದುಗರನ್ನು ದೃಷ್ಟಿ ಇಟ್ಟುಕೊಂಡು ಪುಸ್ತಕ ರಚಿಸಬೇಕಾಗಿದ್ದು, ಯಾವುದೇ ಟೀಕೆ ಟಿಪ್ಪಣಿಗಳಿಗೆ ಅವಕಾಶವಿಲ್ಲದಂತೆ ಬರುವ ಸವಾಲುಗಳನ್ನು ಎದುರಿಸಿ ಪುಸ್ತಕ ಸಮಿತಿ ಕಾರ್ಯನಿರ್ವಹಿಸಬೇಕು. ಚುನಾವಣಾ ನೀತಿ ಸಂಹಿತೆ ಮುಗಿದ ನಂತರ ಸರ್ಕಾರದೊಂದಿಗೆ ಚರ್ಚಿಸಿ ಮುಂಬರುವ ಡಿಸೆಂಬರ್‌ನಲ್ಲಿ ಸಮ್ಮೇಳನ ನಿಗದಿಗೊಳಿಸಲಾಗುವುದು. ಅಂತೆಯೇ ನವೆಂಬರ್ ತಿಂಗಳ ಒಳಗೆ ಪುಸ್ತಕ ಸಿದ್ಧಗೊಳ್ಳಬೇಕು. ಇತ್ತೀಚೆಗೆ ಅವರು ಕೈಗೊಂಡಿದ್ದ ಅಮೆರಿಕಾ ಪ್ರವಾಸದ ಬಗ್ಗೆ ಮಾತನಾಡಿದ ಅವರು, ಮಂಡ್ಯದವರೂ ಸೇರಿದಂತೆ ಅನೇಕ ಕನ್ನಡಿಗರು ಅಮೆರಿಕಾದ ಉದ್ದಕ್ಕೂ ಉನ್ನತ ಹುದ್ದೆಗಳಲ್ಲಿ ಇದ್ದಾರೆ. ಅವರೆಲ್ಲ ಮಂಡ್ಯ ಸಮ್ಮೇಳನದ ಬಗ್ಗೆ ತೀವ್ರ ಆಸಕ್ತಿ ಹೊಂದಿದ್ದಾರೆ. ಸುಮಾರು 500 ಜನ ವಿದೇಶಿ ಕನ್ನಡಿಗರು ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಪುಸ್ತಕ ಸಮಿತಿಯ ಅಧ್ಯಕ್ಷ ಡಾ.ಎಚ್.ಎಸ್.ಮುದ್ದೇಗೌಡ ಮಾತನಾಡಿ, ಈ ಹಿಂದೆ ಪ್ರಕಟವಾಗಿರುವ ’ಸುವರ್ಣ ಮಂಡ್ಯ’ ಜಿಲ್ಲಾ ಸಮ್ಮೇಳನ ಸ್ಮರಣ ಸಂಚಿಕೆಗಳನ್ನು ಮರು ಮುದ್ರಣ ಮಾಡುವುದರ ಜತೆಗೆ ಸೃಜನಾತ್ಮಕ ಬರಹಗಳನ್ನು ಬರೆಯಲು ಉದಯೋನ್ಮುಖ ಲೇಖಕರು ಮತ್ತು ಆಯಾ ಕ್ಷೇತ್ರದಲ್ಲಿ ಪರಿಣತಿ ಇರುವವರಿಗೆ ಅವಕಾಶ ನೀಡಲಾಗುವುದು. ಜಿಲ್ಲೆಯ ಕವಿಗಳು ಬರೆಯುವ ಪ್ರಾತಿನಿಧಿಕ ಕವನ ಸಂಕಲನವೊಂದನ್ನು ಹೊರತರಲಾಗುವುದು. ಪುಸ್ತಕಗಳು ಕನಿಷ್ಟ 100-150 ಪುಟಗಳ ಮಿತಿಯಲ್ಲಿರಲಿ ಎಂಬ ಸಲಹೆ ನೀಡಿದರು.
ಪುಸ್ತಕ ಸಮಿತಿ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಕೃಷ್ಣೇಗೌಡ ಹುಸ್ಕೂರು ಮಾತನಾಡಿದರು. ಸಮಿತಿ ಸದಸ್ಯರಾದ ಚಲುವೇಗೌಡ, ಚಂದ್ರಶೇಖರಯ್ಯ, ಕೊತ್ತತ್ತಿ ರಾಜು, ಶಿವಣ್ಣ, ಅಪೂರ್ವ ಚಂದು,ತಿಮ್ಮರಾಯಿಗೌಡ ಅಭಿಪ್ರಾಯ ಮಂಡಿಸಿದರು.
ಸಭೆಯಲ್ಲಿ ಕಸಾಪ ಗೌರವ ಕಾರ್ಯದರ್ಶಿ ನೇ.ಭ.ರಾಮಲಿಂಗಶೆಟ್ಟಿ, ಕೋಶಾಧ್ಯಕ್ಷ ಪಟೇಲ್ ಪಾಂಡು, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಧನಂಜಯ ದರಸಗುಪ್ಪೆ, ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ, ಸಂಘ ಸಂಸ್ಥೆ ಪ್ರತಿನಿಧಿ ಹೊಳಲು ಶ್ರೀಧರ್, ವಿವಿಧ ತಾಲೂಕು ಕಸಾಪ ಅಧ್ಯಕ್ಷರಾದ ಚಂದ್ರಲಿಂಗು, ಸುಜಾತಾ ಕೃಷ್ಣ, ಪ್ರಕಾಶ್ ಮೇನಾಗರ, ಬಸವೇಗೌಡ ಖರಡ್ಯ, ಚೇತನ್ ಕುಮಾರ್, ಸುನಿಲ್ ಕುಮಾರ್, ಪೂರ್ಣಚಂದ್ರ, ಶ್ರೀನಿವಾಸಮೂರ್ತಿ, ಹರ್ಷ ಪಣ್ಣೆದೊಡ್ಡಿ, ಎಂ.ಯು.ಶ್ವೇತಾ, ಧರ್ಮಪ್ಪ ಇತರರಿದ್ದರು.