

ಮಡಿಕೇರಿ:
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸುದರ್ಶನ ಬಳಿ ಇರುವ ನಿವೇಶನದಲ್ಲಿ ಕನ್ನಡ ಸಾಹಿತ್ಯ ಭವನ ನಿರ್ಮಾಣದ ಸಲುವಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರೂ ಆದ ವಿರಾಜಪೇಟೆ ಶಾಸಕ ಎ.ಎಸ್ ಪೊನ್ನಣ್ಣ ಅವರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪದಾಧಿಕಾರಿಗಳು ಜಿಲ್ಲಾಧ್ಯಕ್ಷ ಎಂ.ಪಿ ಕೇಶವ ಕಾಮತ್ ನೇತೃತ್ವದಲ್ಲಿ ಗುರುವಾರ ಭೇಟಿ ಮಾಡಲಾಯಿತು. ಭವನ ನಿರ್ಮಾಣ ಸಮಿತಿಯ ಮಹಾಪೋಷಕರಾಗಿ ಕಾರ್ಯನಿರ್ವಹಿಸುವಂತೆ ಮತ್ತು ಭವನ ನಿರ್ಮಾಣದ ಕಾರ್ಯದಲ್ಲಿ ಸಹಕರಿಸುವಂತೆ ಈ ಸಂದರ್ಭ ಮನವಿ ಮಾಡಲಾಯಿತು. ಈ ವೇಳೆ ಪ್ರತಿಕ್ರಿಯಿಸಿದ ಪೊನ್ನಣ್ಣ ಕನ್ನಡ ಸಾಹಿತ್ಯ ಪರಿಷತ್ತಿನ ಭವನಕ್ಕೆ ಸಂಪೂರ್ಣ ಸಹಕಾರ ನೀಡುವುದರೊಂದಿಗೆ ಸರ್ಕಾರದ ಮಟ್ಟದಲ್ಲಿ ಮುಖ್ಯಮಂತ್ರಿಗಳಿಂದ ಅನುದಾನ ಕೊಡಿಸುವುದಲ್ಲದೆ ಜಿಲ್ಲಾಮಟ್ಟದಲ್ಲಿಯೂ ಸಂಪೂರ್ಣವಾಗಿ ಸಹಕರಿಸುವುದಾಗಿ ತಿಳಿಸಿದರು. ಆ ಸಂದರ್ಭದಲ್ಲಿ ಕೊಡಗು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಇದ್ದರು.
ಕಸಾಪ ನಿಯೋಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ಗೌರವ ಕಾರ್ಯದರ್ಶಿ ಎಸ್.ಐ ಮುನಿರ್ ಅಹಮದ್, ರೇವತಿ ರಮೇಶ್, ಕೋಶಾಧಿಕಾರಿ, ಎಸ್.ಎಸ್. ಸಂಪತ್ ಕುಮಾರ್, ವಿರಾಜಪೇಟೆ ತಾಲೂಕು ಅಧ್ಯಕ್ಷ ಡಿ. ರಾಜೇಶ್ ಪದ್ಮನಾಭ, ಕುಶಾಲನಗರ ತಾಲೂಕು ಅಧ್ಯಕ್ಷ ಕೆ.ಎಸ್. ನಾಗೇಶ್, ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಮಾಜಿ ಅಧ್ಯಕ್ಷ ಬಿ.ಎನ್ ಪ್ರಕಾಶ್ ಇದ್ದರು.