ಕಸಾಪ ಅಧ್ಯಕ್ಷ ಡಾ.ಜೋಶಿಗೆ ಬೇಕು ಸಂಪುಟ ದರ್ಜೆ ಸ್ಥಾನಮಾನ, ರಾಜ್ಯ ಸರ್ಕಾರಕ್ಕೆ ಹಾಸಿಂಪೀರ ವಾಲೀಕಾರ ನೇತೃತ್ವದಲ್ಲಿ ಸಾಹಿತಿಗಳ ಆಗ್ರಹ

KASAPA PRESSS MEET JOSHI RELATED
ವಿಜಯಪುರ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಸುದ್ದಿಗೋಷ್ಠಿ ನಡೆಸಿದರು. ಭಾರತಿ ಪಾಟೀಲ, ಅಭಿಷೇಕ ಚಕ್ರವರ್ತಿ, ರವಿ ಕಿತ್ತೂರ ಮತ್ತಿತರರಿದ್ದಾರೆ.
Published on

ವಿಜಯಪುರ: ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ ಜೋಶಿಗೆ ಸಂಪುಟ ದರ್ಜೆಯ ಸ್ಥಾನಮಾನ ಮುಂದುವರಿಸಬೇಕೆಂದು ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ನೇತೃತ್ವದಲ್ಲಿ ಸಾಹಿತಿಗಳು ಆಗ್ರಹಿಸಿದರು.

ನಾಡೋಜ ಡಾ. ಮಹೇಶ ಜೋಶಿಯವರ ಕನ್ನಡ ಸಾಹಿತ್ಯ ಪರಿಷತ್ತಿನ ಅಭಿವೃದ್ಧಿಪರ ಚಿಂತನೆಯ ಹಿನ್ನೆಲೆಯಲ್ಲಿ ಹಿಂದಿನ ಸರ್ಕಾರ 2022, ಆ.3ರಂದು ರಾಜ್ಯ ಸಚಿವ ಸಂಪುಟ ದರ್ಜೆಗೆ ಸಮನಾದ ಸ್ಥಾನಮಾನ ನೀಡಿತ್ತು. ಆದರೆ, ಇಂದಿನ ಸರ್ಕಾರ 2022 ಮೇ 31ರಂದು ರಾಜ್ಯ ಸಚಿವ ಸಂಪುಟ ದರ್ಜೆಯ ಸ್ಥಾನಮಾನ ರದ್ದುಗೊಳಿಸುವ ಆದೇಶ ನೀಡಿ ರಾಜ್ಯ ಸಚಿವ ಸಂಪುಟದ ಸ್ಥಾನಮಾನ ಅನ್ವಯಿಸುವ ಸೌಲಭ್ಯಗಳನ್ನು ಹಿಂಪಡೆಯಲಾಗಿದ್ದು ಅತ್ಯಂತ ಖಂಡನೀಯ ಹಾಗೂ ಕನ್ನಡ ಭಾಷೆ ಮತ್ತು ಕನ್ನಡಿಗರಿಗೆ ಮಾಡಿದ ಘೋರ ಅವಮಾನ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಮಾತನಾಡಿ, ನಾಡೋಜ ಡಾ. ಮಹೇಶ ಜೋಶಿಯವರು ಕಾರ್ಯಕಾರಿಣಿ ಸಭೆಗಳನ್ನು ಪ್ರಜಾಪ್ರಭುತ್ವದ ತಳಹದಿಯ ಮೇಲೆ ನಡೆಸುತ್ತಿದ್ದಾರೆ. 28 ಜಿಲ್ಲೆಗಳ ಕಸಾಪ ಅಧ್ಯಕ್ಷರುಗಳು ಡಾ. ಮಹೇಶ ಜೋಶಿಯವರ ಮತ್ತು ಜಿಲ್ಲಾಧ್ಯಕ್ಷರುಗಳ ಸಮನ್ವಯತೆಯಿಂದ ಕಾರ್ಯಗಳನ್ನು ಮಾಡುತ್ತ ಬಂದಿದ್ದಾರೆ. ಯಾವತ್ತೂ ಡಾ. ಜೋಶಿಯವರು ಸರ್ವಾಧಿಕಾರಿಯಂತೆ ವರ್ತಿಸಿಲ್ಲ. ಅತೃಪ್ತರು ವಿನಾಕಾರಣ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುವುದು ಅತ್ಯಂತ ಆತಂಕದ ವಿಷಯ ಎಂದರು.

ಬಳ್ಳಾರಿ ಜಿಲ್ಲೆಯಲ್ಲಿ ಜರುಗುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 40ಕೋಟಿ ಅನುದಾನ ಬೇಡ 10ಕೋಟಿಗೆ ಸೀಮಿತಗೊಳಿಸಿ ಎಂದು ಸರ್ಕಾರಕ್ಕೆ ಪತ್ರ ಬರೆದು ಪವಿತ್ರ ಕನ್ನಡ ಸಾಹಿತ್ಯ ಪರಿಷತ್ತಿಗೆ ಅವಮಾನ ಎಸಗುತ್ತಿದ್ದಾರೆ. ಸಾಹಿತಿ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಮತ್ತು ಅವರ ಬಳಗ ಡಾ. ಮಹೇಶ ಜೋಶಿಯವರನ್ನು ವಜಾ ಮಾಡಲು ಆಗ್ರಹಿಸುವ ಸಾಹಿತಿ ಸಿದ್ಧರಾಮಯ್ಯನವರಿಗೆ ಮತಿಭ್ರಮಣೆಯಾಗಿದೆ. ಡಾ. ಜೋಶಿಯವರು ಹಾಗೂ ಎಲ್ಲ ಜಿಲ್ಲೆಯ ಕಸಾಪ ಅಧ್ಯಕ್ಷರುಗಳು ಚುನಾಯಿತರಾಗಿ ಆಯ್ಕೆಯಾಗಿರುವುದು ಸಾಹಿತಿ ಎಸ್.ಜಿ. ಸಿದ್ದರಾಮಯ್ಯ ಮರೆತಂತಿದೆ ಎಂದರು.

ಗೌರವ ಅಧ್ಯಕ್ಷೆ ಭಾರತಿ ಪಾಟೀಲ ಮಾತನಾಡಿ, ಹಾವೇರಿಯಲ್ಲಿ ಜರುಗಿದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರ 25ಕೋಟಿ ರೂಪಾಯಿ ಅನುದಾನ ನೀಡಿದ್ದು, ಮಂಡ್ಯದಲ್ಲಿ ಜರುಗಿದ 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 30ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದು, ಮಂಡ್ಯದಲ್ಲಿ ಸ್ಥಳೀಯರಿಂದ 10ಕೋಟಿ ರೂಪಾಯಿ ಹಣವನ್ನು ಸಂಗ್ರಹಿಸಿ ಸಮ್ಮೇಳನ ಯಶಸ್ವಿಯಾಗಿದೆ. ಇದೀಗ ಬಳ್ಳಾರಿಯಲ್ಲಿ ಜರುಗಲಿರುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರ ಕನಿಷ್ಠ 40ಕೋಟಿ ಹಣ ಬಿಡುಗಡೆ ಮಾಡುವಂತೆ ರಾಜ್ಯಾಧ್ಯಕ್ಷರು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದರೆ ಸಮ್ಮೇಳನದ ದಿಕ್ಕು ತಪ್ಪಿಸಿ ಅಕ್ಷರ ಜಾತ್ರೆಯನ್ನು ಹಾಳು ಮಾಡಲು ಸಾಹಿತಿ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಹಾಗೂ ಅವರ ಬಳಗ ಸಂಚು ರೂಪಿಸುತ್ತಿದೆ. ಇದನ್ನು ಸರ್ಕಾರ ಪರಿಗಣಿಸಬಾರದು ಎಂದರು.

ಪದಾಧಿಕಾರಿಗಳಾದ ಅಭಿಷೇಕ ಚಕ್ರವರ್ತಿ, ರವಿ ಕಿತ್ತೂರ, ಮಹಮ್ಮದ್‌ಗೌಸ ಹವಾಲ್ದಾರ್, ಸಿದ್ರಾಮಯ್ಯ ಲಕ್ಕುಂಡಿಮಠ, ಡಾ.ಆನಂದ ಕುಲಕರ್ಣಿ, ಕಮಲಾ ಮುರಾಳ, ಸುಖದೇವಿ ಅಲಬಾಳಮಠ, ಆಶಾ ಬಿರಾದಾರ, ಅರ್ಜುನ ಶಿರೂರ, ವಿಜಯಲಕ್ಷ್ಮಿ ಹಳಕಟ್ಟಿ, ಬಸವರಾಜ ಬಿರಾದಾರ ಮತ್ತಿತರರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net