

ಹೈದರ್ ಕುಂದಾಣ
ಸ್ವಚ್ಛತೆ ಅರಿವು ಮೂಡಿಸಬೇಕಿರುವ ಗ್ರಾಮ ಪಂಚಾಯಿತಿ ಸಮೀಪ ಕಸದ ತೊಟ್ಟಿ ಹಾಗೂ ಗ್ರಾಪಂ ಹಿಂಭಾಗದಲ್ಲಿ ಕಸದ ರಾಶಿಯಿಂದ ವಿಶ್ವನಾಥಪುರ ಗ್ರಾಮಸ್ಥರು ಸಾಂಕ್ರಾಮಿಕ ರೋಗ ಭೀತಿ ಎದುರಿಸುವಂತಾಗಿದೆ.
ದೇವನಹಳ್ಳಿ ತಾಲೂಕಿನ ಕುಂದಾಣ ಹೋಬಳಿಯ ವಿಶ್ವನಾಥಪುರದಲ್ಲಿ ಸುಮಾರು 2500 ಜನಸಂಖ್ಯೆಯಿದ್ದು, ಕುಡಿವ ನೀರು, ಬೀದಿದೀಪ ಸಮರ್ಪಕವಾಗಿಲ್ಲ. ಚರಂಡಿ ಸ್ವಚ್ಛತೆ ಇಲ್ಲದೆ ವಿಪರೀತ ಸೊಳ್ಳೆಕಾಟ, ಗ್ರಾಪಂ ಸದಸ್ಯರ ಬಳಿ ಸಮಸ್ಯೆ ಹೇಳಿಕೊಂಡರೆ ತಾತ್ಸಾರದ ವರ್ತನೆಯಿಂದ ಬೇಸತ್ತು ಸಾರ್ವಜನಿಕ ವಲಯದಲ್ಲಿ ಗ್ರಾಪಂ ಮೂಲಸೌಕರ್ಯ ಕಡೆಗಣನೆ ಎಂಬ ಮಾತು ಕೇಳಿಬರುತ್ತಿದೆ.
ವಿಶ್ವನಾಥಪುರ ಗ್ರಾಪಂನ ಬ್ಯಾಡರಹಳ್ಳಿ, ದಿನ್ನೆಸೋಲೂರು, ಲಕ್ಷ್ಮೀಪುರ, ದೊರೆ ಕಾವಲು, ಸೋಲೂರು, ಸೀಕಾಯನಹಳ್ಳಿ, ಬೈರದೇನಹಳ್ಳಿ, ಚಿಕೋಬದೇನಹಳ್ಳಿ, ಬೊಮ್ಮವಾರ, ಚಪ್ಪರದಹಳ್ಳಿ, ಚೀಮನಹಳ್ಳಿ, ಶೆಟ್ಟರಹಳ್ಳಿ ಸೇರಿ ಒಟ್ಟು 13,000 ಜನಸಂಖ್ಯೆ ಹೊಂದಿದ್ದು, ಮೂಲಸೌರ್ಯ ಇಲ್ಲದಂತಾಗಿದೆ.
ಕಸದ ತೊಟ್ಟಿ ಇಡಲು ಜಾಗವಿಲ್ಲದೆ ಅಂಗನವಾಡಿ ಕೇಂದ್ರದ ಮುಂದೆ ಇರಿಸಲಾಗಿದೆ. ಅಂಬೇಡ್ಕರ್ ಸಮುದಾಯ ಭವನ ಪಾಳುಕೊಂಪೆಯಂತಿದ್ದು, ಗ್ರಾಪಂ ಸದಸ್ಯರ ಇಚ್ಛಾಶಕ್ತಿ ಕೊರತೆ ಎದ್ದುಕಾಣುತ್ತಿದೆ. ಕೆಲವೇ ದಿನಗಳಲ್ಲಿ ಗ್ರಾಪಂ ಚುನಾವಣೆ ಸಮೀಪಿಸುತ್ತಿದ್ದು, ಯಾರೊಬ್ಬರೂ ಎಚ್ಚೆತ್ತುಕೊಂಡಿಲ್ಲ, ರಾಷ್ಟ್ರೀಯ ಹೆದ್ದಾರಿ 207 ಕಾಮಗಾರಿ ಅರ್ಧಕ್ಕೆ ನಿಂತಿರುವುದರಿಂದ ವರ್ಷಕ್ಕೆ ಹಲವು ಮಂದಿ ರಸ್ತೆ ಅಪಘಾತದಲ್ಲಿ ಮೃತಪಡುತ್ತಿರುವುದು ಸಾಮಾನ್ಯವಾಗಿದೆ. ಶಾಲಾ ಮಕ್ಕಳು, ವೃದ್ಧರು, ಪ್ರಯಾಣಿಕರು ಸರ್ಕಾರಿ ಮತ್ತು ಖಾಸಗಿ ಸಾರಿಗೆ ಅವಲಂಬಿಸಿರುವ ನಾಗರಿಕರಿಗೆ ತಂಗುದಾಣವೇ ಇಲ್ಲ, ಇರುವ ಒಂದು ತಂಗುದಾಣ ಶಿಥಿಲಾವಸ್ಥೆ ತಲುಪಿದೆ. ವಿಶ್ವನಾಥಪುರ ಗ್ರಾಪಂ ಬಹುತೇಕ ಗ್ರಾಮದಲ್ಲಿ ಚರಂಡಿ ಹೂಳು ತೆಗೆದು ವರ್ಷಗಳೇ ಕಳೆದಿವೆ, ಚರಂಡಿಯಲ್ಲಿ ಕೊಳಚೆ ನೀರು ಹರಿಯದೆ ನಿಂತಲ್ಲೆ ನಿಂತು, ಗಬ್ಬೆದ್ದು ನಾರುವಂತಾಗಿದೆ. ನಿಷ್ಠೆಯಿಂದ ಕೆಲಸ ಮಾಡುವ ಸ್ವಚ್ಛತಾಗಾರರಿಗೆ ಕೈಗವಸು ಇತರ ಸುರಕ್ಷತಾ ಪರಿಕರ ನೀಡದೆ ಅವರೂ ಸಹ ಸ್ವಚ್ಛತೆಗೆ ಹಿಂಜರಿದು ಸಮಸ್ಯೆ ಅಳಲು ತೋಡಿಕೊಳ್ಳುತ್ತಾರೆ.
ಕಸದ ರಾಶಿ ಕೆಲಕಡೆ ಮಾತ್ರ ಬಾಕಿ ಇದೆ. ರಸ್ತೆ ವಿಸ್ತರಣೆ ಹಿನ್ನೆಲೆಯಲ್ಲಿ ಬಸ್ ತಂಗುದಾಣ ನಿರ್ಮಾಣ ವಿಳಂಬವಾಗಿದೆ. ಅಂಬೇಡ್ಕರ್ ಸಮುದಾಯ ಭವನ ಸ್ಥಳದ ಜಾಗ ಬೇರೆಕಡೆ ನಿಗದಿ ಯಾಗಿದ್ದು, ಅನುದಾನ ಬಂದಿದ್ದು, ಶೀಘ್ರದಲ್ಲೇ ಕಾಮಗಾರಿ ಪ್ರಾರಂಭವಾಗಲಿದೆ. ಎನ್.ಉಷಾ ಗ್ರಾಮ ಪಂಚಾಯಿತಿ ಅಭಿವೃದ್ಧಿಕಾರಿ, ವಿಶ್ವನಾಥಪುರ ವಿಶ್ವನಾಥಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮೀಣ ಭಾಗಕ್ಕೆ ಕ್ಷೇತ್ರದ ಶಾಸಕರ ಸಹಕಾರದಿಂದ ವಿವಿಧ ಅಭಿವೃದ್ಧಿ ಕಾಮಗಾರಿ ನಡೆಯುತ್ತಿವೆ. ಕೆಲ ಸಣ್ಣ, ಪುಟ್ಟ ಸಮಸ್ಯೆ ಇದ್ದು, ಅದನ್ನು ಸರಿಪಡಿಸಿಕೊಂಡು ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ನಾರಾಯಣಸ್ವಾಮಿ ಗ್ರಾಮ ಪಂಚಾಯಿತಿ ಸದಸ್ಯ