

ಮಂಡ್ಯ: ತಾಲೂಕಿನ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಆರ್‌ಎಪಿಸಿಎಂಎಸ್ ನಿರ್ದೇಶಕ ಕೆ.ಸಿ.ರವೀಂದ್ರ ಮತ್ತು ಉಪಾಧ್ಯಕ್ಷರಾಗಿ ಸಿ.ಬಿ.ಕೃಷ್ಣೇಗೌಡ ಅವಿರೋಧ ಆಯ್ಕೆಯಾದರು.
ಸಂಘದ ಕಚೇರಿಯಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು. ಅದರಂತೆ ಸಾಲಗಾರರ ಕ್ಷೇತ್ರದಿಂದ ಚುನಾಯಿತರಾಗಿದ್ದ ಕೆ.ಸಿ.ರವೀಂದ್ರ ಅಧ್ಯಕ್ಷ ಸ್ಥಾನಕ್ಕೆ ಮತ್ತು ಚಿಕ್ಕಮಂಡ್ಯ ಗ್ರಾಮದ ಸಿ.ಬಿ.ಕೃಷ್ಣೇಗೌಡ ಮಾತ್ರ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಈ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆಯ ಘೋಷಣೆ ಮಾಡಲಾಯಿತು.
ಮುಡಾ ನಿರ್ದೇಶಕರೂ ಆದ ಸೊಸೈಟಿ ಮಾಜಿ ಅಧ್ಯಕ್ಷ ಎಂ.ಕೃಷ್ಣ ಮಾತನಾಡಿ, ಸಹಕಾರ ಸಂಘದ ಸರ್ವತೋಮುಖ ಅಭಿವೃದ್ದಿ ದೃಷ್ಟಿಯಿಂದ ಸೊಸೈಟಿ ವ್ಯಾಪ್ತಿಯ ಗ್ರಾಮಗಳಾದ ಕಲ್ಲಹಳ್ಳಿ, ಹೊಸಹಳ್ಳಿ, ಚಿಂದಗಿರಿದೊಡ್ಡಿ, ಚಿಕ್ಕಮಂಡ್ಯ, ದೇವೇಗೌಡದೊಡ್ಡಿ ಮತ್ತು ಮಂಡ್ಯ ನಗರ ವ್ಯಾಪ್ತಿಯ ನಿರ್ದೇಶಕರು ಸರ್ವಾನುಮತದ ಆಯ್ಕೆಗೆ ಸಹಕಾರ ನೀಡಿದ್ದಾರೆ. ಅದರಂತೆ ಎಲ್ಲರ ವಿಶ್ವಾಸ ಪಡೆದು ಸಂಘದ ಅಭಿವೃದ್ದಿಗೆ ಶ್ರಮಿಸಲಿ. ರೈತರಿಗೆ ಅಗತ್ಯವಾಗಿರುವ ರಸಗೊಬ್ಬರ, ಪಡಿತರ ಪದಾರ್ಥಗಳು ಮತ್ತು ಸಾಲ ಸೌಲಭ್ಯಗಳನ್ನು ಸಕಾಲದಲ್ಲಿ ನೀಡಲು ಕ್ರಮವಹಿಸಬೇಕು ಎಂದು ಕಿವಿಮಾತೇಳಿದರು.
ಆಡಳಿತ ಮಂಡಳಿ ನಿರ್ದೇಶಕರಾದ ಬೋರೇಗೌಡ, ಎನ್.ನಾಗರಾಜು, ಗೌರಮ್ಮ, ಸುನಂದಾ, ಡಿ.ಮೋಹನ್, ಎಂ.ಆರ್.ಸಂದೀಪ್, ರತ್ನ ಶಿವರಾಜ್, ಧರ್ಮೇಂದ್ರ, ರೇವಣ್ಣ ಹಾಗೂ ಮಾಜಿ ಅಧ್ಯಕ್ಷರಾದ ಬೋರೇಗೌಡ, ಎಂ.ರಮೇಶ್, ಪುಟಲಿಂಗೆ ಗೌಡ. ಆರ್‌ಎಪಿಸಿಎಂಎಸ್ ಅಧ್ಯಕ್ಷ ಯು.ಸಿ.ಶೇಖರ್, ಪಿ.ಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಸೋಮಶೇಖರ್, ಹೊಸಹಳ್ಳಿ ಶಿವಲಿಂಗೇಗೌಡ, ಕೆ.ಸಿ.ಮಂಜುನಾಥ, ಎಲ್.ಕೃಷ್ಣ ಇದ್ದರು.