

ರಾಮನಗರ: ಹಸಿ ಮತ್ತು ಒಣ ಕಸವನ್ನು ಬಡಾವಣೆಗಳಲ್ಲೇ ಪ್ರತ್ಯೇಕವಾಗಿ ಸಂಗ್ರಹಿಸಲು ನೆರವಾಗುವಂತೆ 7 ವಿಶೇಷ ಕಸ ವಿಲೇವಾರಿ ಆಟೋ ಟಿಪ್ಪರ್‌ಗಳು ರಾಮನಗರ ನಗರಸಭೆ ವ್ಯಾಪ್ತಿಯಲ್ಲಿ ಮಂಗಳವಾರದಿಂದ ಕಾರ್ಯಾರಂಭ ಮಾಡಿವೆ.
ನಗರದ ಚಾಮುಂಡೇಶ್ವರಿ ಬಡಾವಣೆ, ಮಂಜುನಾಥ ನಗರ, ವಿವೇಕಾನಂದ ನಗರ, ಬಾಲಗೇರಿ, ಟ್ರೂಪ್‌ಲೇನ್, ಯಾರಬ್ ನಗರ ಸೇರಿ ವಿವಿಧ ಬಡಾವಣೆಗಳಲ್ಲಿ ಈ ಆಟೋಗಳು ಸಂಚರಿಸಿ ಒಣ ಮತ್ತು ಹಸಿ ಕಸವನ್ನು ಸಂಹಿಸಿದವು.
ಕಸ ಸಂಗ್ರಹಿಸುವ ಆಟೋ ಟಿಪ್ಪರ್‌ಗಳಿಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿದ ನಗರಸಭೆ ಆಯುಕ್ತೆ ಬಿ. ಶುಭಾ, ಕಡ್ಡಾಯವಾಗಿ ಒಣ ಮತ್ತು ಹಸಿ ಕಸವನ್ನು ಬೇರ್ಪಡಿಸಿ ಕಸ ಸಂಗ್ರಹ ವಾಹನಗಳಿಗೆ ನೀಡಬೇಕು ಎಂದು ಮನವಿ ಮಾಡಿದರು. ಈ ಟಿಪ್ಪರ್‌ಗಳಲ್ಲಿ ಪ್ರತ್ಯೇಕ ಕಂಟೇನರ್‌ಗಳಿದ್ದು, ಕಸ ವಿಂಗಡಣೆ ಸಮಸ್ಯೆ ನಿವಾರಣೆಗೆ ಪರಿಣಾಮಕಾರಿ ಪರಿಹಾರ ಇದಾಗಿದೆ. ಸಾರ್ವಜನಿಕರೂ ಸಹ ನಗರಸಭೆ ಜತೆ ಕೈ ಜೋಡಿಸಬೇಕು. ಮನೆಯಲ್ಲಿ ಕಡ್ಡಾಯವಾಗಿ ಒಣ ಮತ್ತು ಹಸಿ ಕಸವನ್ನು ವಿಂಗಡಣೆ ಮಾಡಿ ಆಟೋಗಳಿಗೆ ನೀಡಬೇಕು ಎಂದು ಮನವಿ ಮಾಡಿದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪರಿಸರ ಇಂಜಿನಿಯರ್ ರಾಜಶ್ರೀ, ತಲಾ 4.19 ಲಕ್ಷ ರೂ.ನಂತೆ ನಗರಸಭೆಗೆ 7 ವಿಶೇಷ ವಾಹನಗಳನ್ನು ಖರೀದಿ ಮಾಡಲಾಗಿದೆ. ಈ ಮೊದಲು ಕಸ ಸಂಗ್ರಹಿಸಿ ಪೌರ ಕಾರ್ಮಿಕರ ಸಹಾಯದಿಂದ ಒಣ ಮತ್ತು ಹಸಿ ಕಸವನ್ನು ಬೇರ್ಪಡಿಸಿ ವಿಲೇವಾರಿ ಮಾಡಲಾಗುತ್ತಿತು. ತೆರೆದ ವಾಹನ ಕಸ ಸಂಗ್ರಹಿಸುತ್ತಿದ್ದರಿಂದ ಅಲ್ಲಲ್ಲಿ ಕಸ ಸೋರಿಕೆಯಾಗಿ ಕೆಟ್ಟ ವಾಸನೆಯಿಂದ ಸಾರ್ವಜನಿಕರಿಗೆ ಕಿರಿಕಿರಿಯನ್ನು ಉಂಟು ಮಾಡುತ್ತಿತ್ತು. ಆದರೆ ಈಗ ಈ ಎಲ್ಲ ಸಮಸ್ಯೆಗಳಿಗೆ ಮುಕ್ತಿ ದೊರೆತಂತಾಗಿದೆ. ನೂತನ ವಾಹನದಲ್ಲಿ 2 ಟನ್ ಸಾಮರ್ಥ್ಯದ ಮುಚ್ಚಿದ ಕಂಟೇನರ್‌ಗಳಲ್ಲಿ ಕಸವನ್ನು ಸಾಗಿಸಲಾಗುವುದು. ಇದನ್ನು ನಗರಸಭೆಯು ಕಸ ಸಂಸ್ಕರಣ ಘಟಕದಲ್ಲಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಿ ಗೊಬ್ಬರವಾಗಿ ಪರಿವರ್ತಿಸಲಾಗುವುದು. ಇದರಿಂದ ಮಾನವ ಶ್ರಮವೂ ಕಡಿಮೆ ಆಗಿ, ಪರಿಣಾಮಕಾರಿ ಕಸ ವಿಲೇವಾರಿಯೂ ಆಗಲಿದೆ. ಪ್ರತಿ ವಾಹನದ ಜತೆಗೆ ಓರ್ವ ಸಿಬ್ಬಂದಿ ಕಾರ್ಯನಿರ್ವಹಿಸಿ, ಸಾರ್ವಜನಿಕರಿಗೆ ಅರಿವು ಮೂಡಿಸಲಿದ್ದಾರೆ ಎಂದರು.